ADVERTISEMENT

ಹುಬ್ಬಳ್ಳಿ: ಮಹದಾಯಿ ಯೋಜನೆ ಅನುಷ್ಠಾನ ವಿಳಂಬ

ಜೆಡಿಎಸ್ ರಾಷ್ಟ್ರೀಯ ಘಟಕದ ಪ್ರಧಾನ ಕಾರ್ಯದರ್ಶಿ ಎನ್.ಎಚ್. ಕೋನರಡ್ಡಿ ಆರೋಪ

​ಪ್ರಜಾವಾಣಿ ವಾರ್ತೆ
Published 19 ಜುಲೈ 2021, 17:00 IST
Last Updated 19 ಜುಲೈ 2021, 17:00 IST

ಹುಬ್ಬಳ್ಳಿ: ‘ಮಹದಾಯಿ, ಕಳಸಾ–ಬಂಡೂರಿ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ನವಲಗುಂದ–ನರಗುಂದಲ್ಲಿ ನಡೆಯುತ್ತಿರುವ ಪ್ರತಿಭಟನೆ 2,434 ದಿನ ಪೂರೈಸಿ ಏಳನೇ ವರ್ಷಕ್ಕೆ ಮುಂದುವರಿದಿದೆ. ಆದರೂ, ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಯೋಜನೆ ಅನುಷ್ಠಾನಕ್ಕೆ ಆಸಕ್ತಿ ತೋರುತ್ತಿಲ್ಲ’ ಎಂದು ಜೆಡಿಎಸ್ ರಾಷ್ಟ್ರೀಯ ಘಟಕದ ಪ್ರಧಾನ ಕಾರ್ಯದರ್ಶಿ ಎನ್.ಎಚ್. ಕೋನರಡ್ಡಿ ಆರೋಪಿಸಿದರು.

‘ಮಹದಾಯಿ ನ್ಯಾಯಮಂಡಳಿ ಈಗಾಗಲೇ ತೀರ್ಪು ನೀಡಿದೆ, ಕರ್ನಾಟಕ್ಕೆ ತನ್ನ ಪಾಲಿನ ನೀರು ಬಳಕೆ ಮಾಡಿಕೊಳ್ಳಲು ಕೇಂದ್ರ ಸರ್ಕಾರ ಅಧಿಸೂಚನೆ ಸಹ ಹೊರಡಿಸಿದೆ. ಆದರೆ, ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸಬೇಕಿದ್ದ ರಾಜ್ಯ ಸರ್ಕಾರ ಇನ್ನೂ ಮೌನವಾಗಿದೆ. ಕೂಡಲೇ ಕಾಮಗಾರಿಗೆ ಚಾಲನೆ ನೀಡಿ, ರೈತರ ನಾಲ್ಕು ದಶಕಗಳ ಕನಸು ನನಸಾಗಿಸಬೇಕು’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

‘ಕಳೆದ ವರ್ಷದ ಅತಿವೃಷ್ಟಿಯಿಂದ ಹಾನಿಯಾದ ಬೆಳೆಗಳಿಗೆ ಇನ್ನೂ ಪರಿಹಾರ ದೊರಕಿಲ್ಲ. ಪೆಟ್ರೋಲ್‌, ಡೀಸೆಲ್‌ ಮತ್ತು ಅಡುಗೆ ಅನಿಲದ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನ ವಿರೋಧಿ ನೀತಿ ಖಂಡಿಸಿ ಜೆಡಿಎಸ್ ಪ್ರತಿಭಟನೆ ನಡೆಸಲಿದೆ’ ಎಂದರು.

ADVERTISEMENT

ಪದಾಧಿಕಾರಿಗಳ ನೇಮಕ: ‘ಹುಬ್ಬಳ್ಳಿ-ಧಾರವಾಡ ಮಹಾನಗರ ಜೆಡಿಎಸ್ ಘಟಕದ ಅಧ್ಯಕ್ಷರಾಗಿ ಗುರುರಾಜ ಹುಣಸೀಮರದ, ಧಾರವಾಡ ಜಿಲ್ಲಾ ಜೆಡಿಎಸ್ ಘಟಕದ ಅಧ್ಯಕ್ಷರಾಗಿ ಬಿ.ಬಿ. ಗಂಗಾಧರಮಠ ಅವರನ್ನು ಪಕ್ಷದ ವರಿಷ್ಠರು ನೇಮಕ ಮಾಡಿದ್ದಾರೆ.ಜಿಲ್ಲೆಯ ಎಲ್ಲ ತಾಲ್ಲೂಕುಗಳಿಗೂ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ’ ಎಂದು ಕೋನರಡ್ಡಿ ತಿಳಿಸಿದರು.

‘ಉತ್ತರ ಕರ್ನಾಟಕದವರಿಗೆ ಸಿಎಂ ಸ್ಥಾನ ಸಿಗಲಿ’: ‘ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಚರ್ಚೆ ಬಿಜೆಪಿಯ ಆಂತರಿಕ ವಿಷಯ. ಒಂದು ವೇಳೆ ಮುಖ್ಯಮಂತ್ರಿ ಬದಲಾದರೆ, ಆ ಸ್ಥಾನ ಉತ್ತರ ಕರ್ನಾಟಕದವರಿಗೆ ದೊರಕಬೇಕು’ ಎಂದು ಜೆಡಿಎಸ್‌ ಮುಖಂಡ ಎನ್.ಎಚ್‌. ಕೋನರಡ್ಡಿ ಅಭಿಪ್ರಾಯಪಟ್ಟರು.

‘ಮುಖ್ಯಮಂತ್ರಿ ಸ್ಥಾನಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ಹೆಸರು ಕೇಳಿ ಬರುತ್ತಿದೆ. ಸಿಎಂ ಬದಲಾಗುತ್ತಾರೋ ಇಲ್ಲವೋ ಗೊತ್ತಿಲ್ಲ. ಅಂತಹ ಸಂದರ್ಭ ಎದುರಾದರೆ ನಮ್ಮ ಭಾಗದವರಿಗೆ ಪ್ರಾಧಾನ್ಯತೆ ನೀಡಬೇಕು ಎನ್ನುವುದು ನನ್ನ ಆಗ್ರಹ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.