ADVERTISEMENT

ಸೆಲ್ಫಿ ಗೀಳಿಗೆ ಅಮಾಯಕರು ಬಲಿ: ಪ್ರಲ್ಹಾದ ಜೋಶಿ

ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ರಾಜೀನಾಮೆಗೆ ಕೇಂದ್ರ ಸಚಿವ ಜೋಶಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 9 ಜೂನ್ 2025, 15:44 IST
Last Updated 9 ಜೂನ್ 2025, 15:44 IST
<div class="paragraphs"><p>ಪ್ರಲ್ಹಾದ ಜೋಶಿ, ಕೇಂದ್ರ ಸಚಿವ</p></div>

ಪ್ರಲ್ಹಾದ ಜೋಶಿ, ಕೇಂದ್ರ ಸಚಿವ

   

ಹುಬ್ಬಳ್ಳಿ: ‘ಆರ್‌ಸಿಬಿ ಸಂಭ್ರಮೋತ್ಸವದ ಕಾರ್ಯಕ್ರಮ ವಿಧಾನಸೌಧದ ಮುಂಭಾಗದಲ್ಲಿ ನಡೆಸಿದರೆ ಭದ್ರತೆ ಸಮಸ್ಯೆಯಾಗುತ್ತದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದರೂ ಅಲ್ಲಿ ಯಾಕಾಗಿ ಕಾರ್ಯಕ್ರಮ ನಡೆಯಿತು? ಕಾಲ್ತುಳಿತದಲ್ಲಿ ಅಮಾಯಕರು ಬಲಿಯಾಗಿದ್ದಕ್ಕೆ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಗ್ರಹಿಸಿದರು.

‘ಆರ್‌ಸಿಬಿ ಗೆಲುವಿನ ಕ್ರೆಡಿಟ್‌ ಪಡೆಯಲು ರಾಜ್ಯ ಸರ್ಕಾರ ಮುಂದಾಗಿದ್ದು ಹಾಗೂ ಕೆಲವರ ಸೆಲ್ಫಿ ಗೀಳಿನಿಂದ ದುರ್ಘಟನೆ ನಡೆದಿದೆ. ಅಮಾಯಕರು ಬಲಿಯಾಗುವಾಗ ಐಎಎಸ್, ಐಪಿಎಸ್‌ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಆಟಗಾರರ ಜೊತೆ ಸೆಲ್ಫಿ ತೆಗೆದುಕೊಳ್ಳುವಲ್ಲಿ ಬ್ಯುಸಿಯಾಗಿದ್ದರು. ಇದು ಖಂಡನೀಯ’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ವಿಮಾನ ನಿಲ್ದಾಣಕ್ಕೆ ಹೋಗಿ ಕಪ್‌ಗೆ ಮುತ್ತಿಡಬೇಕು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರಿಗೆ ಯಾವ ಅಧಿಕಾರಿ ಹೇಳಿದ್ದರು? ಸಂಭ್ರಮೋತ್ಸವ ನಡೆಸಿದರೆ ಭದ್ರತೆ ಸಮಸ್ಯೆಯಾಗುತ್ತದೆ ಎಂದು ಗುಪ್ತಚರ ವಿಭಾಗ ಮಾಹಿತಿ ನೀಡಿರಲಿಲ್ಲವೇ? ತರಾತುರಿಯಲ್ಲಿ ಕಾರ್ಯಕ್ರಮ ಆಯೋಜಿಸುವ ಅಗತ್ಯವೇನಿತ್ತು? ಈ ಪ್ರಕರಣದ ಕುರಿತು ಯಾಕಾಗಿ ಈವರೆಗೂ ಕಾಂಗ್ರೆಸ್‌ ವರಿಷ್ಠರು ಯಾವ ಹೇಳಿಕೆಯನ್ನೂ ನೀಡಿಲ್ಲ? ಕಾಲ್ತುಳಿತ ನಡೆಯುವಾಗ ಗುಪ್ತಚರ ವಿಭಾಗದ ಎಡಿಜಿಪಿ, ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತ ಹೇಮಂತ್ ನಿಂಬಾಳ್ಕರ್‌ ಏನು ಮಾಡುತ್ತಿದ್ದರು’ ಎಂದು ವ್ಯಂಗ್ಯವಾಡಿದರು.

ಎಸ್‌ಪಿಗೆ ಎಚ್ಚರಿಕೆ:

‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಹಾಗೂ ಹಿಂದೂ ಕಾರ್ಯಕರ್ತರನ್ನು ಕಾಂಗ್ರೆಸ್‌ ಸರ್ಕಾರ ಗುರಿಯಾಗಿಸಿಕೊಂಡು, ಕಾನೂನು ಬೆದರಿಕೆ ಒಡ್ಡುತ್ತಿದೆ. ಹೊಸದಾಗಿ ಬಂದ ಪೊಲೀಸ್‌ ವರಿಷ್ಠಾಧಿಕಾರಿ ಕಾಂಗ್ರೆಸ್‌ ಕಾರ್ಯಕರ್ತರಂತೆ ವರ್ತಿಸುತ್ತ, ಹಿಂದೂ ಸಂಘಟನೆ ನಿಷೇಧಿಸುವುದಾಗಿ ಹೇಳುತ್ತಿದ್ದಾರೆ. ನಾನೇ ಸ್ವತಃ ಮಂಗಳೂರಿಗೆ ಬರುತ್ತೇನೆ, ಎಷ್ಟು ಮಂದಿ ಬಂಧಿಸುತ್ತೀರ ನೋಡೋಣ. ಕಾನೂನು ಬಿಟ್ಟು ಕೆಲಸ ಮಾಡಬೇಡಿ. ಕೇಂದ್ರದಲ್ಲಿ ನಮ್ಮ ಸರ್ಕಾರವಿದೆ, ಮುಂದೆ ರಾಜ್ಯದಲ್ಲೂ ನಾವು ಸರ್ಕಾರ ನಡೆಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

‘ರಾಜ್ಯದಲ್ಲಿ ಕೋಮುವಾದ ಬೆಳೆಸುವಲ್ಲಿ ಕಾಂಗ್ರೆಸ್‌ ಸರ್ಕಾರ ನಿರತವಾಗಿದೆ. ಉತ್ತಮ ಆಡಳಿತ ನೀಡುವಲ್ಲಿ ಶೂನ್ಯವಾಗಿದ್ದು, ಮುಸಲ್ಮಾನರನ್ನು ಕೇವಲ ವೋಟ್ ಬ್ಯಾಂಕ್‌ಗಷ್ಟೇ ಬಳಸಿಕೊಳ್ಳುತ್ತಿದೆ. ವೋಟ್‌ಗಾಗಿ ಅವರು ದೇಶವನ್ನು ಸಹ ಮಾರಲು ಸಿದ್ಧರಿದ್ದವರು ಅವರು. ಅದಕ್ಕಾಗಿಯೇ ಹಿ‌ಂದೂಗಳನ್ನು ದ್ವೇಷಿಸುತ್ತಾರೆ’ ಎಂದು ಅಭಿಪ್ರಾಯಪಟ್ಟರು.

‘ಭಯೋತ್ಪಾದಕರ ನಂಟು ಇರುವ ಆರೋಪದ ಹಿನ್ನೆಲೆಯಲ್ಲಿ ಸುಹಾಸ್‌ ಶೆಟ್ಟಿ ಹತ್ಯೆ ಪ್ರಕರಣವನ್ನು ಎನ್‌ಐಎ(ರಾಷ್ಟ್ರೀಯ ತನಿಖಾ ದಳ) ವಹಿಸಿಕೊಂಡಿದೆ. ಎಲ್ಲ ದೃಷ್ಟಿಕೋನದಲ್ಲಿಯೂ ಅದು ತನಿಖೆ ನಡೆಸಲಿದೆ’ ಎಂದು ಸಚಿವ ಜೋಶಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.