ಹುಬ್ಬಳ್ಳಿ: ‘ಉತ್ತರ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಗಳು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯಬೇಕು. ಆ ನಿಟ್ಟಿನಲ್ಲಿ ಇಲ್ಲಿನ ಪತ್ರಕರ್ತರು ಕೆಲಸ ಮಾಡಬೇಕು’ ಎಂದು ಸಚಿವ ಎಚ್.ಕೆ. ಪಾಟೀಲ ಸಲಹೆ ನೀಡಿದರು.
ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಗರದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪತ್ರಕರ್ತ ಮಲ್ಲಿಕಾರ್ಜುನ ಸಿದ್ದಣ್ಣವರ ಸಂಪಾದಿಸಿದ ‘ಉತ್ತರದ ಸಾಲು ದೀಪಗಳು’ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.
‘ರಾಜಕಾರಣಿಗಳ ಸಾಕ್ಷಿಪ್ರಜ್ಞೆಯನ್ನು ಸದಾ ಜಾಗೃತವಾಗಿಡುತ್ತಿದ್ದ ಅಂದಿನ ಪತ್ರಿಕೋದ್ಯಮವನ್ನು ನಾವಿಂದು ಕಳೆದುಕೊಳ್ಳುತ್ತಿದ್ದೇವೆ. ಹಿಂದಿನ ಪತ್ರಕರ್ತರು ಮಾಧ್ಯಮದ ಮೌಲ್ಯಗಳನ್ನು ಎತ್ತರಕ್ಕೆ ಕೊಂಡೊಯ್ದಿದ್ದರು’ ಎಂದರು.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ‘ಈ ಕೃತಿ ಮೂಲಕ ಈ ಭಾಗದಲ್ಲಿ ಸೇವೆ ಸಲ್ಲಿಸಿದ್ದ ಪತ್ರಕರ್ತರಿಗೆ ಗೌರವ ಸಲ್ಲಿಸಲಾಗಿದೆ’ ಎಂದರು.
‘ಪತ್ರಿಕೋದ್ಯಮ ಅನ್ನದ ಬಟ್ಟಲು’
‘ಭಾವನೆ ಇಲ್ಲದವರಿಗೆ, ಭಾವುಕರಲ್ಲದವರಿಗೆ ಕ್ರಿಯಾಶೀಲ ಬರವಣಿಗೆ ಬರುವುದಿಲ್ಲ. ಪ್ರಸ್ತುತ ದಿನಗಳಲ್ಲಿ ಪತ್ರಕರ್ತ ಕಣ್ಣಿಗೆ ಕಂಡಿದ್ದು, ಕಿವಿಗೆ ಕೇಳಿದ್ದು ಬರೆಯಲು ಸಾಧ್ಯವಿಲ್ಲ. ಬರೆಯುತ್ತೇನೆಂದರೂ ರಾಜಕಾರಣಿಗಳು, ಸಂಪಾದಕರು ಬರೆಯಲು ಅವಕಾಶ ನೀಡುವುದಿಲ್ಲ. ಆ ನೋವನ್ನು ಅವನು ಒಳಗೊಳಗೆ ಅನುಭವಿಸುತ್ತಿರುತ್ತಾನೆ. ವೃತ್ತಿಯಿಂದ ಹೊರ ಬಂದ ನಂತರ ಸ್ವಗತದ ರೂಪದಲ್ಲಿ ಬರೆದುಕೊಳ್ಳುತ್ತಾನೆ. ಪ್ರಸ್ತುತ ದಿನಮಾನದಲ್ಲಿ ಪತ್ರಕರ್ತರಿಗೆ ಪತ್ರಿಕೋದ್ಯಮ ಕ್ಷೇತ್ರ ಅನ್ನದ ಬಟ್ಟಲು. ಎಲ್ಲ ಕ್ಷೇತ್ರಗಳಲ್ಲೂ ಭ್ರಷ್ಟಾಚಾರ ಇರುವಂತೆ, ಇಲ್ಲಿಯೂ ಇದೆ’ ಎಂದು ಪತ್ರಕರ್ತ ದಿನೇಶ ಅಮೀನ್‌ಮಟ್ಟು ಹೇಳಿದರು.
ನಿವೃತ್ತ ವಾರ್ತಾಧಿಕಾರಿ ಪಿ.ಎಸ್. ಪರ್ವತಿ ಪುಸ್ತಕ ಕುರಿತು ಮಾತನಾಡಿದರು. ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಪುಂಡಲೀಕ ಬಾಳೋಜಿ, ರಾಜ್ಯ ಕಾರ್ಯಕಾರಣಿ ಸದಸ್ಯ ಗಣಪತಿ ಗಂಗೊಳ್ಳಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ಅಬ್ಬಾಸ್ ಮುಲ್ಲಾ, ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಲೋಚನೇಶ ಹೂಗಾರ ಇದ್ದರು.
Quote - ‘ಉತ್ತರ ಕರ್ನಾಟಕದಲ್ಲಿ ಶಿಕ್ಷಣ ಉದ್ಯೋಗದ ಸಮಸ್ಯೆ ಸಹ ಹೆಚ್ಚಿದ್ದು ಪತ್ರಕರ್ತರು ಆ ಕುರಿತು ಬೆಳಕು ಚೆಲ್ಲುವ ಕೆಲಸ ಮಾಡಬೇಕು’ ಎಚ್.ಕೆ. ಪಾಟೀಲಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.