
ತೆಕ್ಕಲಕೋಟೆ: ಇಲ್ಲಿನ ಹೋಬಳಿ ವ್ಯಾಪ್ತಿಯ ಕರೂರು, ತಾಳೂರು, ಬೂದುಗುಪ್ಪ, ಮುದ್ದಟನೂರು, ಅರಳಿಗನೂರು ಗ್ರಾಮಗಳ ಕೃಷಿ ಪ್ರಾಥಮಿಕ ಸಹಕಾರಿ ಸಂಘಗಳಲ್ಲಿ ಬುಧವಾರದಿಂದ ಜೋಳ ಖರೀದಿ ನೋಂದಣಿಗೆ ಕೇಂದ್ರಗಳನ್ನು ತೆರೆಯಲಾಗಿದ್ದು, ನೋಂದಣಿಗೆ ರೈತರು ಮುಗಿಬಿದ್ದರು.
ಬೂದುಗುಪ್ಪ ಕೃಷಿ ಪ್ರಾಥಮಿಕ ಸಹಕಾರಿ ಸಂಘದಲ್ಲಿ ಬಲಕುಂದಿ, ಗೋಸಬಾಳು ಗ್ರಾಮಗಳ ರೈತರಿಗೆ ನೋಂದಣಿ ಮಾಡುವುದಿಲ್ಲ ಎಂದು ರೈತರನ್ನು ಮರಳಿ ಕಳುಹಿಸಿದ ಘಟನೆ ನಡೆಯಿತು.
ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಸಿರುಗುಪ್ಪ ಎಪಿಎಂಸಿ ಮಾಜಿ ಅಧ್ಯಕ್ಷ ಶರಣಬಸವ, ‘ರೈತರು ನೋಂದಣಿಗಾಗಿ ಬೆಳಿಗ್ಗೆ 4 ಗಂಟೆಗೆ ಗ್ರಾಮಗಳಿಂದ ಬಂದು ಸರತಿ ಸಾಲಿನಲ್ಲಿ ನಿಂತಿದ್ದು, 11 ಗಂಟೆಗೆ ಎರಡೂ ಗ್ರಾಮಗಳ ನೂರಾರು ರೈತರನ್ನು ವಾಪಸ್ಸು ಕಳುಹಿಸಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರೂರು ಮತ್ತು ತಾಳೂರು ಜೋಳ ಖರೀದಿ ನೋಂದಣಿ ಕೇಂದ್ರಗಳಲ್ಲಿ ರೈತರು ಭಾರೀ ಸಂಖ್ಯೆಯಲ್ಲಿ ಸೇರಿದ್ದರಿಂದ ಕೆಲ ಕಾಲ ನೂಕುನುಗ್ಗಲು ಉಂಟಾಯಿತು.
‘ಮುಂಗಾರು ಹಂಗಾಮಿನಲ್ಲಿ ಬೆಳೆದ ಜೋಳ ಖರೀದಿಗೆ ತಾಲ್ಲೂಕಿನ 9 ಕಡೆ ಖರೀದಿ ಕೇಂದ್ರ ತೆರೆದಿದ್ದು, ಬುಧವಾರದಿಂದ ರೈತರ ನೋಂದಣಿ ಕಾರ್ಯ ಆರಂಭವಾಗಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಸಿರುಗುಪ್ಪ ತಹಶೀಲ್ದಾರ್ ಗೌಸಿಯ ಬೇಗಂ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.