ADVERTISEMENT

ಕಾಡಲ್ಲಿ ಹೆಜ್ಜೆಯನ್ನಷ್ಟೇ ಮೂಡಿಸಿ.....

ಪರಿಸರ ದಿನ: ಐಎಫ್‌ಎಸ್‌ ಅಧಿಕಾರಿ ಯಶಪಾಲ್‌ ಕ್ಷೀರಸಾಗರ ಸಲಹೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2022, 12:46 IST
Last Updated 6 ಜೂನ್ 2022, 12:46 IST
ಯಶಪಾಲ್‌ ಕ್ಷೀರಸಾಗರ
ಯಶಪಾಲ್‌ ಕ್ಷೀರಸಾಗರ   

ಹುಬ್ಬಳ್ಳಿ: ‘ಕಾಡಿನಲ್ಲಿ ಪ್ರಾಣಿಗಳು ಓಡಾಡಿದ ಜಾಗದಲ್ಲಿ ಹೆಜ್ಜೆಗಳ ಗುರುತು ಇರುತ್ತವೆ. ಆದರೆ, ಮನುಷ್ಯ ಓಡಾಡಿದ ಜಾಗದಲ್ಲಿ ಪ್ಲಾಸ್ಟಿಕ್‌ ಕವರ್‌, ಪ್ಲಾಸ್ಟಿಕ್‌ ಬಾಟಲುಗಳು ಇರುತ್ತವೆ. ಜವಾಬ್ದಾರಿ ಅರಿತು ಪರಿಸರ ಹಾಗೂ ಜೀವವೈವಿಧ್ಯದ ಸಂರಕ್ಷಣೆಗೆ ನಾವು ಮುಂದಾಗಬೇಕು...’

ವಿಶ್ವ ಪರಿಸರ ದಿನದ ಅಂಗವಾಗಿ ಭಾನುವಾರ ‘ಪ್ರಜಾವಾಣಿ’ ಏರ್ಪಡಿಸಿದ್ದ ‘ತಜ್ಞರೊಂದಿಗೆ ಸಂವಾದ’ದ ಫೇಸ್‌ಬುಕ್‌ ಲೈವ್‌ನಲ್ಲಿ ಪಾಲ್ಗೊಂಡ ಐಎಫ್‌ಎಸ್‌ ಅಧಿಕಾರಿ ಕರ್ನಾಟಕ ವಿಶ್ವವಿದ್ಯಾಲಯದ ಕುಲಸಚಿವ ಯಶಪಾಲ್‌ ಕ್ಷೀರಸಾಗರ ಅವರ ಸೂಕ್ಷ್ಮ ಹಾಗೂ ಕಳಕಳಿಯ ಮಾತಗಳಿವು.

‘ಅನೇಕ ಗ್ರಹಗಳ ಪೈಕಿ, ನೀರಿರುವುದು ಭೂಮಿಯಲ್ಲಿ ಮಾತ್ರ. ಇಲ್ಲಿ ಅಸಂಖ್ಯಾತ ಜೀವ ಸಂಕುಲಗಳಿವೆ. ಪ್ರತಿ ಜೀವಿಯೂ ಮತ್ತೊಂದು ಜೀವಿಯನ್ನು ಅವಲಂಬಿಸಿದೆ. ಈ ಆಹಾರ ಚಕ್ರದ ಸರಪಳಿಯಲ್ಲಿ ಜೀವ ವೈವಿಧ್ಯದ ಪರಂಪರೆ ಮುಂದುವರಿದಿದೆ. ಆಧುನಿಕ ಜೀವನ ಶೈಲಿಗೆ ಹೆಚ್ಚು ಒತ್ತು ಕೊಡುತ್ತಿರುವ ಮನುಷ್ಯ, ಜೀವ ಸಂಕುಲಗಳಿಗೆ ಮಾರಕವಾಗುತ್ತಿದ್ದಾನೆ. ಇದರಿಂದಾಗಿ, ಕಾಡು ಕಡಿಮೆಯಾಗುತ್ತಿದ್ದು, ನಗರ ಪ್ರದೇಶಗಳು ಹಿಗ್ಗುತ್ತಿವೆ. ಪರಿಣಾಮ ಪ್ರಾಣಿ–ಪಕ್ಷಿಗಳ ಆಹಾರ ಸರಪಳಿಗಳ ಕೊಂಡಿಗಳು ಕಳಚುತ್ತಿವೆ’ ಎಂದು ಆತಂಕ ವ್ಯಕ್ತಪಡಿಸಿದರು.

ADVERTISEMENT

‘ಅರಣ್ಯಗಳು‌ ಮರ–ಗಿಡ, ಪ್ರಾಣಿ‌–ಪಕ್ಷಿಗಳ ಆವಾಸ ಸ್ಥಾನ. ನಾವಿಲ್ಲಿ ಅತಿಥಿಗಳು. ಅಲ್ಲಿಗೆ ನಾವು ಅತಿಥಿಗಳಾಗಿಯೇ ಹೋಗಿ ಬರಬೇಕು. ನಮ್ಮ ಮೋಜು–ಮಸ್ತಿಗೆ ರಾತ್ರಿ ವೇಳೆ ಡಿಜೆ ಹಚ್ಚಿ ಅವರ ಬದುಕಿಗೆ ಸಮಸ್ಯೆಯಾಗಬಾರದು. ಪ್ರಾಣಿಗಳ ಹಾಗೆ ನಮ್ಮ ಹೆಜ್ಜೆಯನ್ನಷ್ಟೇ ಮೂಡಿಸಿ ಬರಬೇಕು.ರಸಾಯನಿಕ ವಸ್ತುಗಳನ್ನು‌ ಕೊಂಡೊಯ್ದು ಅವುಗಳ ಬದುಕಿಗೆ ಮಾರಕವಾಗಬಾರದು’ ಎಂದು ವಿನಂತಿಸಿದರು.

‘ಅಭಿವೃದ್ಧಿ ಪಥದಲ್ಲಿರುವ ನಾವು ವನ್ಯ ಪ್ರಾಣಿಗಳ ಜೊತೆ ಸಂಘರ್ಷಕ್ಕೆ ಇಳಿದಿದ್ದೇವೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರತಿದಿನ ಚಿರತೆ ಕಾಣಿಸಿಕೊಳ್ಳುತ್ತದೆ. ಆಹಾರ(ಪ್ರಾಣಿ) ಸಿಕ್ಕ ತಕ್ಷಣ ಕಾಡಿಗೆ ಮರಳುತ್ತದೆ. ಚಿರತೆಗಳಿಗೆ ಅಲ್ಲಿ ಅದೊಂದು ಅಭ್ಯಾಸ. ಅಲ್ಲಿಯ ಜನರಿಗೆ ಪ್ರಕೃತಿ ಮೇಲೆ ಧಾರ್ಮಿಕ ನಂಬಿಕೆಯಿದೆ.ಪ್ರಕೃತಿಯನ್ನು ಬಳಸಿಕೊಂಡರೂ ದುರಪಯೋಗ ಮಾಡಿಕೊಳ್ಳುತ್ತಿಲ್ಲ. ಹಿಂದೆ ಕಾಡಂಚಿನ ಪ್ರದೇಶದಲ್ಲಿಹತ್ತಿ ಬೆಳೆಯುತ್ತಿದ್ದರು. ಈಗ ಕಬ್ಬು ಬೆಳೆಯಲಾಗುತ್ತಿದೆ. ಆನೆ, ಕಾಡುಹಂದಿಗಳ ದಾಳಿ ಹೆಚ್ಚುತ್ತಿದ್ದು, ಅವುಗಳ ಪಥದಲ್ಲಿ ಒತ್ತುವರಿ ಆಗುತ್ತಿದೆ. ಪ್ರಾಣಿಗಳ ಜಾಗವನ್ನು ನಾವು ಅತಿಕ್ರಮಿಸುತ್ತಿದ್ದೇವೆ. ಅವು ನಮ್ಮ ಪ್ರದೇಶಕ್ಕೆ ಬರುತ್ತಿಲ್ಲ’ ಎಂದರು.

‘ಗದುಗಿನ ಕಪ್ಪತ್ತಗುಡ್ಡ, ಈ ಭಾಗದ ಸಂಪದ್ಭರಿತ ಅರಣ್ಯ ಪ್ರದೇಶವಾಗಿದೆ.ವರ್ಷದಲ್ಲಿ ಮೂರು ಬಾರಿ ಬದಲಾಗುತ್ತಿರುತ್ತದೆ.500ಕ್ಕೂ ಹೆಚ್ಚು ಜಾತಿಯ ಆಯುರ್ವೇದ ಸಸ್ಯಗಳು ಅಲ್ಲಿವೆ. ಅರಣ್ಯ ಹಾಗೂ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಯಲ್ಲಿ ಧಾರ್ಮಿಕ ಮುಖಂಡರ ಪಾತ್ರ ಅತಿ ಮಹತ್ವದ್ದು. ಅಂದು ಗುಡ್ಡದ ರಕ್ಷಣೆಗೆ, ಗದುಗಿನ ತೋಂಟದಾರ್ಯ ಸಿದ್ಧಲಿಂಗ ಸ್ವಾಮೀಜಿ ಅವರ ಕರೆಗೆ ಓಗೊಟ್ಟ ಭಕ್ತರಿಂದ ಆಂದೋಲನವೇ ರೂಪುಗೊಂಡಿತು. ಹಾಗಾಗಿ, ಕಪ್ಪತ್ತಗುಡ್ಡ ನಮ್ಮ ನಡುವೆ ತಲೆ ಎತ್ತಿ ನಿಂತಿದೆ. ಧಾರ್ಮಿಕ ಮುಖಂಡರು ತಮ್ಮ ಭಕ್ತರನ್ನು ಹೀಗೆ ಪ್ರೇರೇಪಿಸಬೇಕು. ಜನರಲ್ಲಿಯೂ ಪ್ರಕೃತಿ ಪೂಜಿಸುವ ಆಸ್ಥೆ ಮೂಡಬೇಕು. ಸ್ವಯಂಪ್ರೇರಿತರಾಗಿ ಪರಿಸರ ಸಂರಕ್ಷಣೆಗೆ ಮುಂದಾದಾಗ ಮಾತ್ರ, ಪರಿಸರ ದಿನದ ಆಚರಣೆಗೆ ಅರ್ಥ ಬರುತ್ತದೆ’ ಎಂದು ತಮ್ಮ ಮಾತಿಗೆ ಪೂರ್ಣವಿರಾಮ ಹಾಕಿದರು.

‘ಗಿಡದ ಜೊತೆ ಸಂಬಂಧ ಬೆಳೆಸಿ’

‘ಜಗತ್ತಿನಲ್ಲಿರುವ ಶೇ 10ರಷ್ಟು ಅಪರೂಪದ ಜೀವ ವೈವಿಧ್ಯಗಳು ಇರುವುದು ನಮ್ಮ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಮಾತ್ರ. ಒಂದೇ ಒಂದು ಮರ ಕಡಿದರೂ, ಜೀವ ಸಂಕುಲದ ಪರಿಸರ ಏರುಪೇರಾಗುತ್ತದೆ. ವಾತಾವರಣದ ಉಷ್ಣತೆ ಹೆಚ್ಚಿ ಪ್ರವಾಹದಂಥ ಪರಿಸ್ಥಿತಿ ಎದುರಾಗುತ್ತದೆ.ಈ ಸೂಕ್ಷ್ಮವನ್ನು ಪ್ರತಿಯೊಬ್ಬರೂ ಅರಿಯಬೇಕು. ಜನ್ಮದಿನಕ್ಕೆ ಮಕ್ಕಳ ಕೈಯಲ್ಲಿಯೇ ಸಸಿ ನೆಡಿಸಿ, ಅದರೊಂದಿಗೆ ಬಾಂಧವ್ಯ ಬೆಳೆಯುವಂತೆ ಮಾಡಬೇಕು. ಪುನರ್‌ ಬಳಕೆ ಮಾಡಬಹುದಾದ ವಸ್ತುಗಳತ್ತ ಒಲವು ಬೆಳೆಸಿಕೊಳ್ಳಬೇಕು’ ಎಂದು ಯಶಪಾಲ್‌ ಕ್ಷೀರಸಾಗರ ಸಲಹೆ ನೀಡಿದರು.

ಸಂವಾದ ವೀಕ್ಷಿಸಲು ಲಿಂಕ್‌ ಒತ್ತಿ:https://www.facebook.com/watch/live/?ref=watch_permalink&v=793793878663404

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.