ADVERTISEMENT

ಸ್ವಾಮೀಜಿಗೆ ಅವಮಾನ; ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2025, 7:13 IST
Last Updated 26 ಅಕ್ಟೋಬರ್ 2025, 7:13 IST
ಹುಬ್ಬಳ್ಳಿ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಶ್ರೀರಾಮ ಸೇನೆ ವತಿಯಿಂದ ಪ್ರತಿಭಟನೆ ನಡೆಯಿತು  -ಪ್ರಜಾವಾಣಿ ಚಿತ್ರ
ಹುಬ್ಬಳ್ಳಿ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಶ್ರೀರಾಮ ಸೇನೆ ವತಿಯಿಂದ ಪ್ರತಿಭಟನೆ ನಡೆಯಿತು  -ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ಕನೇರಿ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಗೆ ವಿಜಯಪುರ ಜಿಲ್ಲೆ ಪ್ರವೇಶ ನಿಷೇಧಿಸಿರುವ ರಾಜ್ಯ ಸರ್ಕಾರದ ನಡೆ ಖಂಡಿಸಿ ಶನಿವಾರ ನಗರದಲ್ಲಿ ಶ್ರೀರಾಮ ಸೇನಾ ಹಾಗೂ ಕೆಲವು ಹಿಂದೂ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.

ಇಲ್ಲಿಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ರಾಜ್ಯ ಕಾಂಗ್ರೆಸ್‌ ಸರ್ಕಾರ ವಿರುದ್ಧ ಘೋಷಣೆ ಕೂಗಿದರು. ಹಿಂದೂ ಸಂತರಿಗೆ ಹಾಗೂ ಹಿಂದೂಗಳಿಗೆ ಅವಮಾನ ಮಾಡುವುದನ್ನು ನಿಲ್ಲಿಸಬೇಕು ಎಂದು ಬಿತ್ತಿ ಪತ್ರ ಹಿಡಿದು ಆಕ್ರೋಶ ವ್ಯಕ್ತಪಡಿಸಿದರು.

ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗೆ ಕಾಡಸಿದ್ದೇಶ್ವರ ಸ್ವಾಮೀಜಿ ಅವರ ಪ್ರವೇಶ ನಿಷೇಧಿಸುವ ಮೂಲಕ ಸರ್ಕಾರ ತನ್ನ ಮನಸ್ಥಿತಿಯನ್ನು ಪ್ರದರ್ಶಿಸಿದೆ. ಸಂತರ ಶಾಪ ಕೆಟ್ಟದಾಗಿದ್ದು, ಸಮಾಜ ಹಾಗೂ ದೇಶ ಒಡೆಯುವವರ ಪರವಾಗಿ ಸರ್ಕಾರ ನಿಲ್ಲುತ್ತಿರುವುದು ಅಕ್ಷಮ್ಯ’ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ್‌ ಕಿಡಿಕಾರಿದರು.

ADVERTISEMENT

‘ಹಿಂದೂ ಧರ್ಮದ ಪ್ರತಿಪಾದಕ, ರಾಷ್ಟ್ರೀಯ ಸಂತ, ರೈತರ ಪರ ಕೆಲಸ ಮಾಡುತ್ತಿರುವ ಕಾಡಸಿದ್ದೇಶ್ವರ ಸ್ವಾಮೀಜಿ ಅವರಿಗೆ ಹೇರಿರುವ ನಿಷೇಧ ತಕ್ಷಣ ಹಿಂಪಡೆಯಬೇಕು. ಇಲ್ಲವಾದರೆ ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ಲಕ್ಷಾಂತರ ಭಕ್ತರು ಬೀದಿಗೆ ಇಳಿದು ಹೋರಾಟ ನಡೆಸಲಿದ್ದಾರೆ’ ಎಂದು ಎಚ್ಚರಿಸಿದರು.

ಹಳೇ ಹುಬ್ಬಳ್ಳಿ ದೀಕ್ಷಾವರ್ತಿ ನೀಲಕಂಠ ಮಠದ ಶಿವಶಂಕರ ಆಚಾರ್ಯ ಸ್ವಾಮೀಜಿ ಮಾತನಾಡಿ, 'ನಾವು ಭಾರತದಲ್ಲಿ ಇದ್ದೇವೋ, ಪಾಕಿಸ್ತಾನದಲ್ಲಿ ಇದ್ದೇವೋ ಗೊತ್ತಾಗುತ್ತಿಲ್ಲ. ಸ್ವಾಮೀಜಿಗೆ ಸರ್ಕಾರ ಅಪಮಾನ ಮಾಡುವ ಮೂಲಕ ರಾಜ್ಯ ರೈತರಿಗೆ ಅವಮಾನ ಮಾಡಿದೆ. ಧೈರ್ಯವಾಗಿ ಮಾತನಾಡುವ ಸ್ವಾಮೀಜಿ ಅವರು ಯಾವುದೇ ಆಮಿಷಕ್ಕೆ ಬಿಳುವವರಲ್ಲ’ ಎಂದರು.

ಹಿಂದೂ ಜನ ಜಾಗೃತಿ ಸಮಿತಿ ವಕ್ತಾರ ರಾಜು ದರೆಣ್ಣವರ, ಶಿವಾನಂದ ಸತ್ತಿಗೇರಿ, ಮಹಾಂತೇಶ ಟಿ., ಅಣ್ಣಪ್ಪ ದೇವಟಗಿ, ಬಸವರಾಜ ದುರ್ಗದ, ಮಂಜುನಾಥ ಕಾಟಕರ, ಪೂರ್ಣಿಮಾ ಕಾಡಮ್ಮನವರ ಹಾಗೂ ಇತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.