ಕಲಘಟಗಿ: ಅಂಗನವಾಡಿ ಮಕ್ಕಳ ಪೌಷ್ಟಿಕ ಆಹಾರವನ್ನು ಅಕ್ರಮವಾಗಿ ಸಂಗ್ರಹಿಸಿ ದಾಸ್ತಾನು ಮಾಡಿದ ಮನೆಯೊಂದರ ಮೇಲೆ ಪೊಲೀಸರು ಹಾಗೂ ಆಹಾರ ಇಲಾಖೆ ಅಧಿಕಾರಿಗಳು ಭಾನುವಾರ ದಾಳಿ ನಡೆಸಿ ₹ 1,83,072 ಮೌಲ್ಯದ ಆಹಾರ ದಾಸ್ತಾನು ವಶಕ್ಕೆ ಪಡೆದರು.
ತಾಲ್ಲೂಕಿನ ಯಲವದಾಳ ಗ್ರಾಮದ ನಿವಾಸಿ, ಅಂಗನವಾಡಿಗಳಿಗೆ ಆಹಾರ ಧಾನ್ಯ ಪೂರೈಸುತ್ತಿದ್ದ ಚಂದ್ರಕಾಂತ ವಂಡಕರ ಎಂಬುವವರ ಮನೆಯಲ್ಲಿ ಆಹಾರ ಧಾನ್ಯಗಳನ್ನು ಸಂಗ್ರಹಿಸಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದಾರೆ.
ಬೆಲ್ಲ 147 ಕೆ.ಜಿ, ಅಕ್ಕಿ 882 ಕೆ.ಜಿ, ಮಕ್ಕಳಿಗೆ ಆಹಾರದ ಕಿಟ್ 1058 ಕೆ.ಜಿ, ಮಿಲ್ಲೆಟ್ ಲಡ್ಡು ಮಿಶ್ರಣ 679 ಕೆ.ಜಿ, ಗೋಧಿ ನುಚ್ಚು 566 ಕೆ.ಜಿ, ಮಿಲ್ಲೆಟ್ ಲಾಡು 1411 ಕೆ.ಜಿ, ರವಾ 1608 ಕೆ.ಜಿ ಎಲ್ಲ ಆಹಾರದ ಪದಾರ್ಥಗಳು ಸರ್ಕಾರದಿಂದ ಉಚಿತ ಪೂರೈಕೆಯಾಗಿ ಅಂಗನವಾಡಿ ಮಕ್ಕಳಿಗೆ ನೀಡಬೇಕಾಗಿತ್ತು. ಅವುಗಳನ್ನು ತಮ್ಮ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟು ಕೊಂಡಿದ್ದರು. ಕಲಘಟಗಿ ಪೊಲೀಸರು ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ.
ಸಿಪಿಐ ಶ್ರೀಶೈಲ ಕೌಜಲಗಿ ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡಿದ್ದಾರೆ.
‘ಆಹಾರ ದಾನ್ಯ ವಶಕ್ಕೆ ಪಡೆದು ದೂರು ದಾಖಲಿಸಲಾಗಿದೆ. ತನಿಖೆ ನಂತರ ಸಂಪೂರ್ಣ ಮಾಹಿತಿ ಗೊತ್ತಾಗಲಿದೆ’ ಎಂದು ತಾಲ್ಲೂಕ ಸಿಡಿಪಿಒ ವಿದ್ಯಾ ಬಡಿಗೇರ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.