ADVERTISEMENT

‘ಅಳ್ನಾವರದ ಕಾಳಿ ನದಿ ನೀರು ಯೋಜನೆ ರಾಜ್ಯಕ್ಕೆ ಮಾದರಿ’: ಶಿವಾನಂದ ಹಿಂಡಸಗೇರಿ

ಅಳ್ನಾವರ ಪಟ್ಟಣ ಪಂಚಾಯಿತಿ ಸಭೆ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2025, 5:26 IST
Last Updated 8 ಆಗಸ್ಟ್ 2025, 5:26 IST
ಅಳ್ನಾವರ ಪಟ್ಟಣ ಪಂಚಾಯಿತಿ ಸಭೆಯಲ್ಲಿ ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಎಂಜಿನಿಯರ್ ಶಿವಾನಂದ ಹಿಂಡಸಗೇರಿ ಮಾತನಾಡಿದರು. ಅಧ್ಯಕ್ಷ ಅಮೋಲ ಗುಂಜೀಕರ ಇದ್ದರು
ಅಳ್ನಾವರ ಪಟ್ಟಣ ಪಂಚಾಯಿತಿ ಸಭೆಯಲ್ಲಿ ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಎಂಜಿನಿಯರ್ ಶಿವಾನಂದ ಹಿಂಡಸಗೇರಿ ಮಾತನಾಡಿದರು. ಅಧ್ಯಕ್ಷ ಅಮೋಲ ಗುಂಜೀಕರ ಇದ್ದರು   

ಅಳ್ನಾವರ: ’ಕಾಳಿ ನದಿಯಿಂದ ನೀರು ತಂದು ಪಟ್ಟಣದ ಜನತೆಗೆ ಶುದ್ಧ ಕುಡಿಯುವ ನೀರು ಪೂರೈಸುವ ಯೋಜನೆ ರಾಜ್ಯಕ್ಕೆ ಮಾದರಿಯಾಗಿದೆ’ ಎಂದು ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಎಂಜಿನಿಯರ್‌ ಶಿವಾನಂದ ಹಿಂಡಸಗೇರಿ ಹೇಳಿದರು.

ಪಟ್ಟಣ ಪಂಚಾಯಿತಿ ಸಭಾಭವನದಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿ, ದೇಶದ ಒಟ್ಟು 20 ನಗರಗಳಲ್ಲಿ ಜಾರಿ ಇರುವ ಉತ್ತಮ ಜಾಲಗಳಲ್ಲಿ ಅಳ್ನಾವರ ಪಟ್ಟಣ ಕೂಡಾ ಒಂದು. ದೇಶದ ’ಉನ್ನತ್ ಅನುಷ್ಠಾನ ಪ್ರಶಸ್ತಿ’ಗೆ ಈ ಜಾಲ ಪರಿಗಣಿಸಲು ಪ್ರಸ್ತಾವ ಸಲ್ಲಿಸಲಾಗಿದೆ ಎಂದರು.

ಕಾಳಿ ನದಿಯ ಪರಿಶುದ್ದವಾದ ನೀರು ಪೂರೈಸುವ ಯೋಜನೆ ಪಟ್ಟಣದ ಜನತೆ, ಜನಪ್ರತಿನಿಧಿಗಳ ಸಹಕಾರದಿಂದ ಯಶಸ್ಸು ಕಂಡಿದೆ. ಇದೇ ಮಾದರಿಯಲ್ಲಿ 24/7 ಮಾದರಿಯಲ್ಲಿ ಜಿಲ್ಲೆಯ ಅಣ್ಣಿಗೇರಿಯಲ್ಲಿ ಕೂಡಾ ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗಿದೆ. ಅಧುನಿಕ ತಂತ್ರಜ್ಞಾನ ಬಳಸಿ ನೀರು ನೀಡುವ ಈ ಯೋಜನೆಯನ್ನು ಬರುವ ದಿನದಲ್ಲಿ ಕಲಬುರಗಿ, ಬೆಳಗಾವಿ, ಬೆಂಗಳೂರು ಹಾಗೂ ಮೈಸೂರು ವಲಯಲದಲ್ಲಿ ಪರಿಚಯಿಸುವ ಉದ್ದೇಶ ಇದೆ ಎಂದರು.

ADVERTISEMENT

ಪಟ್ಟಣದ ಮಧ್ಯ ಭಾಗದಲ್ಲಿ ಹಾಯ್ದು ಹೋಗುವ ರಾಜ್ಯ ಹೆದ್ದಾರಿಯಲ್ಲಿ 600 ಮೀಟರ್‌ ಉದ್ದದ ರಸ್ತೆಯನ್ನು ₹2.50 ಕೋಟಿ ವೆಚ್ಚದಲ್ಲಿ ಕಾಂಕ್ರಿಟ್‌ ಮಾಡುವ ಕಾಮಗಾರಿಗೆ ವೇಗ ನೀಡಿ ಶೀಘ್ರದಲ್ಲಿ ಮುಗಿಸಿ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು. ಕಡಬಗಟ್ಟಿ ಕ್ರಾಸ್ ಬಳಿಯಿಂದ ಹಳಿಯಾಳ ಗಡಿ ಭಾಗದವರೆಗಿನ ರಸ್ತೆಯನ್ನು ಕಾಂಕ್ರಿಟ್‌ ಮಾಡುವ ₹5.50 ಕೋಟಿ ವೆಚ್ಚದ ಪ್ರಸ್ತಾವ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ ಉತ್ತಮ ಗದಗಕರ ಅವರು ಸಭೆಗೆ ತಿಳಿಸಿದರು.

ಗಣೇಶ ಹಬ್ಬದ ನಿಮಿತ್ತ ಪಟ್ಟಣದ ರಸ್ತೆಗಳಲ್ಲಿನ ಗುಂಡಿ ಮುಚ್ಚಲಾಗುವುದು ಹಾಗೂ ಗಣೇಶ ಮೂರ್ತಿ ವಿಸರ್ಜನೆಗೆ ಬೇಕಾದ ಎಲ್ಲ ಸೌಲಭ್ಯ ಕಲ್ಪಿಸಲಾಗುವುದು ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಮೋಲ ಗುಂಜೀಕರ ತಿಳಿಸಿದರು.

ಆರೋಗ್ಯ ವಿಭಾಗಕ್ಕೆ ಬೇಕಾದ ಸಾಮಾಗ್ರಿ ಮತ್ತು ವಾಹನ ಪೂರೈಸುವ ಟೆಂಡರ ಕೆರೆಯವುದು. ಹೊರ ಗುತ್ತಿಗೆಗೆ ಮಾವನ ಸಂಪನ್ಮೂಲ ಪೂರೈಸಲು ಹಾಗೂ ಸ್ಷೇಶನರಿ ಸಾಮಾಗ್ರಿ ಖರಿದಿಸಲು ವಾರ್ಷಿಕ ಟೆಂಡರ್‌ ಕೆರೆಯಲು ಸಭೆ ಅನುಮೋದನೆ ನೀಡಿತು.

ಸ್ಥಾಯಿ ಸಮಿತಿ ಅಧ್ಯಕ್ಷ ಜೈಲಾನಿ ಸುದರ್ಜಿ, ಸದಸ್ಯರಾದ ನದೀಮ ಕಾಂಟ್ರ್ಯಾಕ್ಟರ್, ರೂಪೇಶ ಗುಂಡಕಲ್, ರಶ್ಮಿ ತೇಗೂರ, ಭಾಗ್ಯವತಿ ಕುರುಬರ, ಶಾಲೆಟ್ ಬೆರೆಟ್ಟೊ, ಮಂಗಳಾ ರವಳಪ್ಪನವರ, ಸುನಂದಾ ಕಲ್ಲು, ಯಲ್ಲಪ್ಪ ಹೂಲಿ, ತಮೀಮ ತೇರಗಾಂವ ,ಯಲ್ಲಾರಿ ಹುಬ್ಳೀಕರ, ನೌಸೀನ ಗೋರಿ, ರಮೇಶ ಕುನ್ನೂರಕರ ಇದ್ದರು.

ನಾಗರಾಜ ಗುರ್ಲ ಹುಸೂರ ಸ್ವಾಗತಿಸಿದರು. ಮುಖ್ಯಾಧಿಕಾರಿ ಪ್ರಕಾಶ ಮುಗದಮು ಹಾಗೂ ಎಂಜಿನಿಯರ್‌ ದೊಡ್ಡಮನಿ ಮಾಹಿತಿ ನೀಡಿದರು. ಎಂ.ಎಸ್.ಬೆಂತೂರ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.