ADVERTISEMENT

ಧಾರವಾಡ: ಕಂಬಾರಗಣವಿ ರಸ್ತೆ ಬಂದ್ ; ಜನರ ಪರದಾಟ

ಅಳ್ನಾವರ ತಾಲ್ಲೂಕಿನಲ್ಲಿ ಬಿರುಸಿನ ಮಳೆ ಹೂಲಿಕೇರಿ ಇಂದಿರಮ್ಮನ ಕೆರೆ ಭರ್ತಿ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2020, 15:40 IST
Last Updated 16 ಆಗಸ್ಟ್ 2020, 15:40 IST
ಕಂಬಾರಗಣವಿ ರಸ್ತೆ ಸಂಪರ್ಕ ಕಡಿತವಾಗಿರುವುದು
ಕಂಬಾರಗಣವಿ ರಸ್ತೆ ಸಂಪರ್ಕ ಕಡಿತವಾಗಿರುವುದು   

ಅಳ್ನಾವರ: ಶನಿವಾರ ಆರಂಭವಾದ ಮಳೆ ನಿರಂತರವಾಗಿಸುರಿದ ಕಾರಣ ಭಾನುವಾರ ಪಟ್ಟಣದ ಸುತ್ತಮುತ್ತಲಿನ ಕೆರೆಗಳು ಭರ್ತಿಯಾಗಿವೆ.ಡೌಗಿ ನಾಲಾ ಹಳ್ಳ ಮತ್ತೆ ತುಂಬಿ ಹರಿಯುತ್ತಿದೆ.ಕಂಬಾರಗಣವಿ ರಸ್ತೆ ಬಂದ್ ಆಗಿದ್ದು, ಜನ ಪರದಾಡುವಂತಾಗಿದೆ.

ಶನಿವಾರ 37.4 ಮೀ.ಮೀ. ಮಳೆ ಸುರಿದಿದೆ.ಸಮೀಪದ ಹೂಲಿಕೇರಿ ಇಂದಿರಮ್ಮನ ಕೆರೆ ಭರ್ತಿಯಾಗಿದ್ದು, ಕೆರೆಯ ಹಳೆ ಕೋಡಿಕಟ್ಟೆ ಕಳೆದ ವರ್ಷ ಪ್ರವಾಹಕ್ಕೆ ಕಿತ್ತು ಹೋಗಿತ್ತು. ಈ ಭಾಗದಲ್ಲಿ ಈಗ ಮತ್ತೆ ಪ್ರವಾಹ ಭೀತಿಯಿದೆ. ಮುಂಜಾಗ್ರತಾ ಕ್ರಮವಾಗಿ ಕೆರೆಯ ನೀರನ್ನು ಕಾಲುವೆ ಮೂಲಕ ಹೊರ ಬಿಡಲಾಗುತ್ತಿದೆ.

ಇಲ್ಲಿನ ಹಿರೇಕರೆ, ಊರು ಕೆರೆ, ಬಾಗವಾನ ಕೆರೆ ತುಂಬಿವೆ. ಸಮೀಪದ ಡೋರಿ ಕೆರೆಯೂ ತುಂಬಿದ್ದು, ಶೇನಟ್ಟಿ ಕೆರೆ ಕೋಡಿ ಬಿದ್ದಿದೆ. ಕೆರೆಯ ನಯನ ಮನೋಹರ ದೃಶ್ಯ ನೋಡಲು ಗ್ರಾಮಸ್ಥರು ತಂಡೋಪತೋಂಡವಾಗಿ ಬರುತ್ತಿದ್ದಾರೆ. ತಾಲ್ಲೂಕಿನ ಕಂಬಾರಗಣವಿ ಗ್ರಾಮಕ್ಕೆ ಸೇರುವ ಸೇತುವೆ ಮೇಲೆ ಹತ್ತು ಅಡಿ ನೀರು ಇತ್ತು. ಸಂಪರ್ಕ ಕಡಿತವಾಗಿನಡುಗಡ್ಡೆಯಲ್ಲಿ ವಾಸಿಸುತ್ತಿರುವ ಅನುಭವವಾಗುತ್ತಿದೆ ಎಂದುಗ್ರಾಮದ ಯುವಕ ಇಮ್ರಾನ್ ರಾಣೆಬೆನ್ನೂರ ಹೇಳಿದರು.

ADVERTISEMENT

ವೈದ್ಯರಿಲ್ಲ: ಅಳ್ನಾವರ ಸೇರಿದಂತೆ ಸುತ್ತಮುತ್ತಲಿನ ಊರುಗಳಿಗೆ ಹೋಗಲುರಸ್ತೆ ಸಂಪರ್ಕ ಇಲ್ಲದ ಕಾರಣ ಕಂಬಾರಗಣವಿ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಗ್ರಾಮದಲ್ಲಿ ವೈದ್ಯರ ಸೌಲಭ್ಯವಿಲ್ಲ. ಕೋವಿಡ್‌ ಸಮಯದಲ್ಲಿಯೂ ತುರ್ತು ಸೇವೆ ಜನರಿಗೆ ಇಲ್ಲದಂತಾಗಿದೆ ಎಂದು ಆ ಗ್ರಾಮದ ಜನ ಬೇಸರ ವ್ಯಕ್ತಪಡಿಸಿದ್ದಾರೆ. ಗ್ರಾಮಕ್ಕೆ ವೈದ್ಯಕೀಯ ಸೌಲಭ್ಯ ಕಲ್ಪಿಸುವ ಕುರಿತುಕಳೆದ ವಾರದ ಅಳ್ನಾವರ ಪಟ್ಟಣ ಪಂಚಾಯ್ತಿ ಸಭೆಯಲ್ಲಿ ಚರ್ಚೆಯೂ ಆಗಿತ್ತು.

ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಇನ್ನೂಂದು ರಸ್ತೆ ರಾಮಾಪೂರ ಭಾಗದಲ್ಲಿದೆ. ಅಲ್ಲಿನ ಕೆರೆ ನೀರು ಹೆಚ್ಚಾಗಿ ಹರಿದು ಬಂದು ಆ ರಸ್ತೆಯ ಸಂಚಾರ ಕೂಡ ಕಡಿತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.