ADVERTISEMENT

ಡಿ‌.1ರಿಂದ ಐದು ದಿನಗಳ ‘ಕನಕ ಪಂಚಮಿ ಸಾಂಸ್ಕೃತಿಕ ಉತ್ಸವ-2020’

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2020, 6:49 IST
Last Updated 17 ನವೆಂಬರ್ 2020, 6:49 IST

ಹುಬ್ಬಳ್ಳಿ: ಮನಸೂರಿನ ಜಗದ್ಗುರು ರೇವಣಸಿದ್ದೇಶ್ವರ ವಿದ್ಯಾಪೀಠವು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಡಿ.1ರಿಂದ 5ರವರೆಗೆ ಐದು ದಿನ ‘ಕನಕ ಪಂಚಮಿ ಸಾಂಸ್ಕೃತಿಕ ಉತ್ಸವ -2020’ ಆಯೋಜಿಸಿದೆ ಎಂದು‌ ಮಠದ ಬಸವರಾಜ ದೇವರು ಹೇಳಿದರು.

ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಪಾಟೀಲ ಪುಟ್ಟಪ್ಪ ಸಭಾಂಗಣದಲ್ಲಿ ಉತ್ಸವ ನಡೆಯಲಿದೆ. ಕನಕದಾಸರ ಬದುಕು-ಬರಹ, ವಿಚಾರ ಸಂಕಿರಣ, ಕನಕ ಪ್ರಶಸ್ತಿ, ಕವಿಗೋಷ್ಠಿ, ಕನಕ ಸಂಗೀತ, ನೃತ್ಯ, ನಾಟಕ, ರೂಪಕ, ಹಾಸ್ಯ, ಜನಪದ ಕಲಾತಂಡಗಳ ಪ್ರದರ್ಶನ, ಸಾಂಸ್ಕೃತಿಕ ಉತ್ಸವ, ಕೈಮಗ್ಗ ಜವಳಿ ವಸ್ತುಗಳ ಮಾರಾಟ ಮೇಳ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ಉತ್ಸವ ನಿಮಿತ್ತ ಹಮ್ಮಿಕೊಳ್ಳಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ಬಾರಿ ‘ಕನಕ ಪ್ರಶಸ್ತಿ’ಗೆ ಪರಿವರ್ತನಾ ವಿಭಾಗದಲ್ಲಿ ಬೆಂಗಳೂರಿನ ಕನಕಶ್ರೀ ಚಾರಿಟೇಬಲ್ ಟ್ರಸ್ಟ್ ಮುಖ್ಯಸ್ಥ ಟಿ.ಬಿ. ಬಳಗಾವಿ, ಸಾಮಾಜಿಕ ಪರಿವರ್ತನೆಗಾಗಿ ಹುನಗುಂದದ ಎಸ್.ಆರ್.ಎನ್.ಇ ಫೌಂಡೇಷನ್ ಮುಖ್ಯಸ್ಥ ಎಸ್.ಆರ್. ನವಲಿ ಹಿರೇಮಠ, ಸಾಮಾಜಿಕ ನ್ಯಾಯ/ರಾಜ ನೀತಿ (ಮರಣೋತ್ತರ) ದಿವಂಗತ ಬಸವಕಲ್ಯಾಣ ಬಿ. ನಾರಾಯಣರಾವ್, ಸಾಹಿತ್ಯದಲ್ಲಿ ತುಮಕೂರಿನ ಪ್ರೊ. ಚಿಕ್ಕಣ್ಣ ಯಣ್ಣಿಕಟ್ಟಿ, ಶಿಕ್ಷಣದಲ್ಲಿ ಶಹಾಪುರದ ಅಮಾತ್ಯೆಪ್ಪ ಕಂದಕೂರ, ಸಮಾಸೇವೆ(ಉದ್ಯಮ) ಬೆಂಗಳೂರಿನ ಚಿಕ್ಕರೇವಣ್ಣ ರಾಮದುರ್ಗ, ಆಡಳಿತದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಹಾಗೂ ಹಾಲುಮತ ಅಭಿವೃದ್ದಿಗಾಗಿ ಬೆಂಗಳೂರಿನ ಡಿ. ವೆಂಕಟೇಶ ಮೂರ್ತಿ ಅವರಿಗೆ ನೀಡಲಾಗುತ್ತಿದೆ ಎಂದರು.

ADVERTISEMENT

ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ನಾನೇ ಸಾನ್ನಿಧ್ಯ ವಹಿಸಲಿದ್ದೇನೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಸಚಿವ ಕೆ.ಎಸ್. ಈಶ್ವರಪ್ಪ, ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಹಾಗೂ ಕುಂದಗೋಳ ಶಾಸಕಿ ಕುಸುಮಾವತಿ ಶಿವಳ್ಳಿ ಅವರು ಭಾಗವಹಿಸಲಿದ್ದಾರೆ. ಪ್ರಶಸ್ತಿಯನ್ನು ಸಚಿವರಾದ ಜಗದೀಶ ಶೆಟ್ಟರ್, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ಬಿಜೆಪಿ ಮುಖಂಡ ಸಿ.ಟಿ. ರವಿ ಪ್ರದಾನ ಮಾಡಲಿದ್ದಾರೆ ಎಂದು ತಿಳಿಸಿದರು.

ರಂಗಕರ್ಮಿ ಪ್ರಭು ಹಂಚಿನಾಳ ಮತ್ತು ಕುರುಬರ ಸಂಘದ ಮಲ್ಲಿಕಾರ್ಜುನ ತಾಳೂರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.