ಕಂಪ್ಲಿ: ತಾಲ್ಲೂಕಿನ ಕಣವಿ ತಿಮ್ಮಲಾಪುರ ಗ್ರಾಮದಲ್ಲಿ ಮಂಗಳವಾರ ಶ್ರೀಕೃಷ್ಣದೇವರಾಯನ ಕಾಲದ ಕನ್ನಡ ಮತ್ತು ತೆಲುಗು ಮಿಶ್ರಿತ ಶಾಸನ ಪತ್ತೆಯಾಗಿದೆ.
‘ಪತ್ತೆಯಾಗಿರುವ ಶಾಸನ ವಿಜಯನಗರ ಕಾಲದ ಶ್ರೀಕೃಷ್ಣದೇವರಾಯನ ಕಾಲದ ಶಾಸನವಾಗಿದೆ. ಇದರ ಕಾಲ ಸಾಮಾನ್ಯ ಶಕ 1516 ಎಂದು ಗುರುತಿಸಲಾಗಿದೆ’ ಎಂದು ಸಂಡೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ಸಹಾಯಕ ಪ್ರಾಧ್ಯಾಪಕ ತಳವಾರ ನರಸಿಂಹ ತಿಳಿಸಿದರು.
‘ಈ ಶಾಸನವನ್ನು ಕನ್ನಡ ಲಿಪಿಯಲ್ಲಿ ಬರೆಯಲಾಗಿದೆ. ಆದರೆ, ಶಾಸನದ ಭಾಷೆ ತೆಲುಗು. ಮೇಲ್ಭಾಗದಲ್ಲಿ 18 ಸಾಲುಗಳು ಹಾಗೂ ಎಡಭಾಗದ ಅಂಚಿನಲ್ಲಿ ಎರಡು ಸಾಲುಗಳಿಂದ ಕೂಡಿದೆ ಹಾಗೂ ಮೇಲ್ನೋಟಕ್ಕೆ ಇದು ದಾನ ಶಾಸನ ಎಂಬಂತೆ ಗೋಚರಿಸುತ್ತಿದೆ’ ಎಂದರು.
ಕನ್ನಡ ವಿಶ್ವವಿದ್ಯಾಲಯ ಕುಲಪತಿ ಪರಮಶಿವಮೂರ್ತಿ ಅವರು, ಈ ಶಾಸನ ತೆಲುಗು ಭಾಷೆಯಲ್ಲಿದ್ದು, ಹೆಚ್ಚಿನ ಅಧ್ಯಯನಕ್ಕೆ ಸ್ಥಳಕ್ಕೆ ಭೇಟಿ ನೀಡುವುದಾಗಿ ಹೇಳಿದ್ದಾರೆ. ಮೈಸೂರಿನ ಕೇಂದ್ರ ಪುರಾತತ್ವ ಇಲಾಖೆಯ ಶಾಸನ ತಜ್ಞ ಡಾ.ನಾಗರಾಜಪ್ಪ ಅವರು ಶಾಸನ ಪಡಿಯಚ್ಚು ತೆಗೆದುಕೊಂಡಿದ್ದು, ಹೆಚ್ಚಿನ ಅಧ್ಯಯನ ಕೈಗೊಂಡಿದ್ದಾರೆ ಎಂದು ತಿಳಿಸಿದರು.
ಪ್ರಸ್ತುತ ಶಾಸನ ಪತ್ತೆ ಹಚ್ಚುವಲ್ಲಿ ಯಲ್ಲಪ್ಪ, ನಾಗರಾಜ, ಮಾರೆಪ್ಪ ಮತ್ತು ಗ್ರಾಮಸ್ಥರು ಸಹಕರಿಸಿದರು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.