ADVERTISEMENT

ಹುಬ್ಬಳ್ಳಿ | ಆನಂದ ನಗರ; ಶಿಥಿಲಗೊಂಡ ಶಾಲಾ ಕಟ್ಟಡ

ಕ್ರಮ ಕೈಗೊಳ್ಳದ ಅಧಿಕಾರಿಗಳು; ಎಂ.ಎಂ.ಭದ್ರಾಪುರ ಆರೋಪ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2023, 6:30 IST
Last Updated 17 ಮಾರ್ಚ್ 2023, 6:30 IST
ಹುಬ್ಬಳ್ಳಿಯ ಆನಂದ ನಗರದಲ್ಲಿರುವ ಸರ್ಕಾರಿ ಉರ್ದು ಮತ್ತು ಕನ್ನಡ ಮಾಧ್ಯಮ ಶಾಲಾ ಕಟ್ಟಡದ ಶಿಥಿಲಗೊಂಡಿರುವುದು
ಹುಬ್ಬಳ್ಳಿಯ ಆನಂದ ನಗರದಲ್ಲಿರುವ ಸರ್ಕಾರಿ ಉರ್ದು ಮತ್ತು ಕನ್ನಡ ಮಾಧ್ಯಮ ಶಾಲಾ ಕಟ್ಟಡದ ಶಿಥಿಲಗೊಂಡಿರುವುದು   

ಹುಬ್ಬಳ್ಳಿ: ‘ಇಲ್ಲಿನ ವಾರ್ಡ್‌ ಸಂಖ್ಯೆ 53ರ ಆನಂದ ನಗರದಲ್ಲಿನ ಕನ್ನಡ ಮತ್ತು ಉರ್ದು ಪ್ರಾಥಮಿಕ ಶಾಲೆಯ ಕಟ್ಟಡ ಶಿಥಿಲಗೊಂಡಿದ್ದು, ಕೂಡಲೇ ನೆಲಸಮಗೊಳಿಸಬೇಕು’ ಎಂದು ಪಾಲಿಕೆ ಸದಸ್ಯ ಎಂ.ಎಂ.ಭದ್ರಾಪುರ ಆಗ್ರಹಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘20 ವರ್ಷಗಳ ಹಿಂದೆ ಕಟ್ಟಡ ನಿರ್ಮಿಸಲಾಗಿದೆ. ಆರಂಭದಲ್ಲಿಯೇ ಕಳಪೆ ಕಾಮಗಾರಿ ನಡೆದಿದೆ. ಒಂದು ವರ್ಷದ ಹಿಂದೆ ಕಟ್ಟಡ ಶಿಥಿಲಗೊಂಡಿದ್ದು, ಮಕ್ಕಳು ಭಯದಲ್ಲೇ ಪಾಠ ಕೇಳುವಂತಾಗಿದೆ’ ಎಂದರು.

‘ಕನ್ನಡ ಮಾಧ್ಯಮದಲ್ಲಿ 320 ಮತ್ತು ಉರ್ದು ಮಾಧ್ಯಮದಲ್ಲಿ 280 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಮೊದಲ ಮಹಡಿಯಲ್ಲಿರುವ ತರಗತಿ ಕೊಠಡಿಗಳಿಗೆ ಬೀಗ ಹಾಕಿ, ನೆಲಮಹಡಿಯ ಕೊಠಡಿಗಳಲ್ಲಿ ತರಗತಿ ನಡೆಸಲಾಗುತ್ತಿದೆ. ಚಾವಣಿ ಬಿರುಕು ಬಿಟ್ಟಿದ್ದು, ಸಿಮೆಂಟ್ ಕಳಚಿ ಮಕ್ಕಳ ಮೇಲೆ ಬಿದ್ದು, ಗಾಯಗೊಂಡಿದ್ದಾರೆ. ಅಪಾಯ ಸಂಭವಿಸುವ ಮುನ್ನ ಎಚ್ಚೆತ್ತುಕೊಳ್ಳಬೇಕು’ ಎಂದರು.

ADVERTISEMENT

ಶಾಲಾ ಕಟ್ಟಡವು ಜಿಲ್ಲಾ ಪಂಚಾಯಿತಿ ಅಧೀನಕ್ಕೆ ಬರುತ್ತದೆ. ಕಟ್ಟಡವನ್ನು ನೆಲಸಮ ಮಾಡುವಂತೆ ಬಿಇಒ, ಜಿಲ್ಲಾ ಪಂಚಾಯಿತಿ ಸಿಇಒಗೆ ಮನವಿ ಸಲ್ಲಿಸಲಾಗಿದೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಶಾಸಕ ಜಗದೀಶ ಶೆಟ್ಟರ್, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೂ ಮನವಿ ಸಲ್ಲಿಸಲಾಗಿದೆ. ಆದರೂ ಕ್ರಮ ಕೈಗೊಂಡಿಲ್ಲ’ ಎಂದು ದೂರಿದರು.

‘ನಾಲ್ಕು ದಿನಗಳ ಹಿಂದೆ ಬಿಇಒ ಅವರನ್ನು ಸಂಪರ್ಕಿಸಿದಾಗ ಎಂಜಿನಿಯರ್ ಒಬ್ಬರನ್ನು ಶಾಲೆಗೆ ಕಳಿಸಿದ್ದರು. ಲೋಕೋಪಯೋಗಿ ಇಲಾಖೆಯಿಂದ ಕಟ್ಟಡದ ಸಾಮರ್ಥ್ಯ ಕುರಿತು ವರದಿ ಪಡೆಯಲಾಗುವುದು ಎಂದು ಹೇಳಿದ್ದರು. ಈಗ ಕರೆ ಸ್ವೀಕರಿಸುತ್ತಿಲ್ಲ. ಈ ಬಗ್ಗೆ ಕಾನೂನು ತಜ್ಞರ ಸಲಹೆ ಪಡೆದು ಜಿಲ್ಲಾ ಪಂಚಾಯಿತಿ ಸಿಇಒ, ಬಿಇಒ ವಿರುದ್ಧ ಹೈಕೋರ್ಟ್‌ನಲ್ಲಿ ದೂರು ದಾಖಲಿಸಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.