ADVERTISEMENT

ಧಾರವಾಡ: ಕಪ್ಪತಗುಡ್ಡವನ್ನು ಕರ್ನಾಟಕಕ್ಕೆ ಬೆಸೆದು ಸಂರಕ್ಷಣೆ

ಗದಗ ಕಪೋತಗಿರಿ ನಂದಿವೇರಿಮಠದ ಶಿವಕುಮಾರ ಸ್ವಾಮೀಜಿ ಆಶಯ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2023, 6:56 IST
Last Updated 4 ಫೆಬ್ರುವರಿ 2023, 6:56 IST
ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಶಿವಕುಮಾರ ಸ್ವಾಮೀಜಿ ಮಾತನಾಡಿದರು. ಶಂಕರ ಕುಂಬಿ, ಚಂದ್ರಕಾಂತ ಬೆಲ್ಲದ, ಡಾ. ಎಸ್.ಆರ್.ರಾಮನಗೌಡರ, ಪ್ರೊ. ಬಸಯ್ಯ ಎಸ್. ಶಿರೋಳ ಇದ್ದಾರೆ.
ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಶಿವಕುಮಾರ ಸ್ವಾಮೀಜಿ ಮಾತನಾಡಿದರು. ಶಂಕರ ಕುಂಬಿ, ಚಂದ್ರಕಾಂತ ಬೆಲ್ಲದ, ಡಾ. ಎಸ್.ಆರ್.ರಾಮನಗೌಡರ, ಪ್ರೊ. ಬಸಯ್ಯ ಎಸ್. ಶಿರೋಳ ಇದ್ದಾರೆ.   

ಧಾರವಾಡ: ‘ಬಳ್ಳಾರಿ ಹಾಗೂ ಸಂಡೂರಿನಲ್ಲಿದ್ದ ನಿಸರ್ಗ ಸಂಪತ್ತಿನ ಗುಡ್ಡಗಳನ್ನು ಕಳೆದುಕೊಂಡು ವ್ಯಥೆಪಡುತ್ತಿರುವ ನಾವು, ಕೈಯಲ್ಲಿರುವ ಕಪ್ಪತಗುಡ್ಡವನ್ನು ಸಮಸ್ತ ಕರ್ನಾಟಕಕ್ಕೆ ಬೆಸೆಯುವ ಮೂಲಕ ಸಂರಕ್ಷಿಸಬೇಕಾಗಿದೆ’ ಎಂದು ಗದಗ ಕಪೋತಗಿರಿ ನಂದಿವೇರಿಮಠದ ಶಿವಕುಮಾರ ಸ್ವಾಮೀಜಿ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘವು ಶುಕ್ರವಾರ ಆಯೋಜಿಸಿದ್ದ ಪ್ರೊ. ಬಸಯ್ಯ ಶಿವಯ್ಯ ಶಿರೋಳ ಅವರ 83ನೇ ಜನ್ಮದಿನದ ಅಂಗವಾಗಿ ನಡೆದ ದತ್ತಿ ಕಾರ್ಯಕ್ರಮದಲ್ಲಿ ಕಪ್ಪತಗುಡ್ಡ ಸಂರಕ್ಷಣೆ ವಿಷಯ ಕುರಿತು ಅವರು ಮಾತನಾಡಿದರು.

‘ಔಷಧ, ಸುಗಂಧ, ಕಾಡು ಹಣ್ಣುಗಳು ಹಾಗೂ ಅರಣ್ಯ ಸಸ್ಯಗಳು ಹೇರಳವಾಗಿರುವ ಕಪ್ಪತಗುಡ್ಡ ಕುರಿತು ರಾಜಕಾರಣಿಗಳು ಹಾಗೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಸುಮಾರು 340ಕ್ಕೂ ಹೆಚ್ಚು ಅಪರೂಪದ ಹಾಗೂ ಅಳಿವಿನಂಚಿನಲ್ಲಿರುವ ಔಷಧೀಯ ಸಸ್ಯಗಳು ಇಲ್ಲಿವೆ. ಜೀವ ನೀಡುವ ಇಂಥ ಹಸಿರು ಬಂಗಾರವನ್ನು ಸಂರಕ್ಷಿಸುವ ಬದಲು, ಎಲ್ಲರೂ ಹಳದಿ ಬಂಗಾರದ ಹಿಂದೆ ಬಿದ್ದಿರುವುದು ವಿಪರ್ಯಾಸ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಕಪ್ಪದಗುಡ್ಡ ಉಳಿಸುವಲ್ಲಿ ಗದುಗಿನ ತೋಂಟದಾರ್ಯ ಮಠದ ಡಾ. ಸಿದ್ಧಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಪರಿಸರ ಪ್ರೇಮಿಗಳ ಹೋರಾಟದ ಫಲವಾಗಿ ಇಲ್ಲಿಯವರೆಗೂ ಕಪ್ಪತಗುಡ್ಡವನ್ನು ಉಳಿಸಿಕೊಂಡು ಬರಲಾಗಿದೆ. ಇಲ್ಲಿಗೆ ಬರುವ ರಾಜಕಾರಣಿಗಳು ಹಾಗೂ ಅಧಿಕಾರಿಗಳು ಇಲ್ಲಿನ ಸಿಬ್ಬಂದಿ ಬಳಿ ಈಗಲೂ ಮ್ಯಾಂಗನೀಸ್ ಇರುವ ಜಾಗ ತೋರಿಸು ಎಂದು ಕೇಳುತ್ತಲೇ ಇದ್ದಾರೆ. ದೊಡ್ಡ ಕಂಪನಿಗಳು ಹಾಗೂ ಕಲ್ಲು ಕ್ವಾರಿಯವರು ಗಣಿಗಾರಿಕೆಗೆ ಹವಣಿಸುತ್ತಲೇ ಇದ್ದಾರೆ. ಸುಪ್ರೀಂ ಕೋರ್ಟ್‌ನ ಹಸಿರುಪೀಠದ ಸ್ಪಷ್ಟ ನಿರ್ದೇಶನವಿದ್ದರೂ, ಸರ್ಕಾರ ಇವರಿಗೆ ಹೇಗೆ ಅನುಮತಿಸುತ್ತಿವೆ ಗೊತ್ತಿಲ್ಲ’ ಎಂದು ಆಶ್ಚರ್ಯ ವ್ಯಕ್ತಪಡಿಸಿದರು.

‘1890ರಲ್ಲಿ ಕಪ್ಪತಗುಡ್ಡವನ್ನು ಸಂರಕ್ಷಿತ ಅರಣ್ಯ ಪ್ರದೇಶ ಎಂದು ಘೋಷಿಸಿದ್ದಾರೆ. ಸೋಡಿಯಂ ಸಯನೈಡ್ ಬಳಸಿ ಚಿನ್ನ ತೆಗೆಯುವ ಪ್ರಯತ್ನವನ್ನೂ ಈ ಹಿಂದೆ ನಡೆಸಿದ್ದಾರೆ. ಒಂದೇ ಸರ್ಕಾರದಲ್ಲಿ ಗಣಿಗಾರಿಕೆಗೆ ಅನುಮತಿ ನಿರಾಕರಿಸಿ, ಮರಳಿ ಅನುಮತಿ ನೀಡುವ ದ್ವಂದ್ವ ಆದೇಶಗಳೂ ಹೊರಬಿದ್ದಿವೆ. ಸರ್ಕಾರ, ಮುಖ್ಯಮಂತ್ರಿ, ಅರಣ್ಯಾಧಿಕಾರಿಗಳು, ಅಮವಾಸ್ಯೆ, ಹುಣ್ಣಿಮೆ ಬಂದರೂ ಇಲ್ಲಿನ ಜನರಲ್ಲಿ ಆತಂಕ ಶುರುವಾಗುತ್ತದೆ’ ಎಂದು ಸ್ವಾಮೀಜಿ ಹೇಳಿದರು.

ಅಧ್ಯಕ್ಷತೆಯನ್ನು ಡಾ. ಎಸ್.ಆರ್.ರಾಮನಗೌಡರ ವಹಿಸಿದ್ದರು. ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ಪ್ರೊ. ಬಸಯ್ಯ ಎಸ್. ಶಿರೋಳ, ಶಂಕರ ಕುಂಬಿ ಇದ್ದರು.

‘ಪ್ರಜಾವಾಣಿ’ ವರದಿಗಳ ಉಲ್ಲೇಖ

‘ಕಪ್ಪತಗುಡ್ಡ ಉಳಿಸುವ ಹೋರಾಟದಲ್ಲಿ ಅಂದಿನಿಂದ ಇಂದಿನನವರೆಗೂ ‘ಪ್ರಜಾವಾಣಿ’ ಪತ್ರಿಕೆ ನಿರಂತರವಾಗಿ ವರದಿಗಳನ್ನು ಪ್ರಕಟಿಸಿ ಜನ ಹಾಗೂ ಸರ್ಕಾರವನ್ನು ಎಚ್ಚರಿಸುತ್ತಲೇ ಇದೆ. ಇತ್ತೀಚೆಗೆ ಕಲ್ಲು ಗಣಿಗಾರಿಕೆಗೆ ಅನುಮತಿ ಕೋರಿದ 24 ಕಂಪನಿಗಳ ಕುರಿತೂ ವರದಿ ಮಾಡಿತ್ತು. ಮುಖ್ಯಮಂತ್ರಿ ಅವರು ಆ ಅರ್ಜಿಗಳನ್ನು ವಜಾಗೊಳಿಸಲಾಗಿದೆ ಎಂದಿದ್ದಾರೆ. ಇದು ‘ಪ್ರಜಾವಾಣಿ’ ವರದಿಗೆ ಸಂದ ಫಲ’ ಎಂದು ಶಿವಕುಮಾರ ಸ್ವಾಮೀಜಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.