ADVERTISEMENT

ಸೇವಾ ವಲಯದ ರಫ್ತು: ರಾಜ್ಯವೇ ಮೊದಲು

ವಿಟಿಪಿಸಿ ಸಂಸ್ಥೆ ಬೆಂಗಳೂರು ಜಂಟಿ ನಿರ್ದೇಶಕ ಬಾಬು ನಾಗೇಶ ಮಾಹಿತಿ

​ಪ್ರಜಾವಾಣಿ ವಾರ್ತೆ
Published 29 ಜುಲೈ 2025, 3:09 IST
Last Updated 29 ಜುಲೈ 2025, 3:09 IST
ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ರಫ್ತು ನಿರ್ವಹಣಾ ತರಬೇತಿ ಕಾರ್ಯಾಗಾರವನ್ನು ಗಣ್ಯರು ಸೋಮವಾರ ಉದ್ಘಾಟಿಸಿದರು
ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ರಫ್ತು ನಿರ್ವಹಣಾ ತರಬೇತಿ ಕಾರ್ಯಾಗಾರವನ್ನು ಗಣ್ಯರು ಸೋಮವಾರ ಉದ್ಘಾಟಿಸಿದರು   

ಹುಬ್ಬಳ್ಳಿ: ‘ರಫ್ತು ವ್ಯವಹಾರದ ವಿಧಾನಗಳು, ಬೇಡಿಕೆಯಿರುವ ಉತ್ಪನ್ನಗಳ ಆಯ್ಕೆ, ಗುಣಮಟ್ಟ ಹಾಗೂ ಉತ್ತಮ ಪ್ಯಾಕೇಜಿಂಗ್ ನೀತಿ ಅಳವಡಿಸಿಕೊಂಡಲ್ಲಿ ಯಶಸ್ವಿ ರಫ್ತುದಾರರಾಗಲು ಸಾಧ್ಯ’ ಎಂದು ವಿಟಿಪಿಸಿ ಸಂಸ್ಥೆ ಬೆಂಗಳೂರು ಜಂಟಿ ನಿರ್ದೇಶಕ ಬಾಬು ನಾಗೇಶ ತಿಳಿಸಿದರು.

ಭಾವಿ ರಫ್ತುದಾರರಿಗಾಗಿ ಇಲ್ಲಿನ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಆರು ದಿನಗಳ ರಫ್ತು ನಿರ್ವಹಣಾ ತರಬೇತಿ ಕಾರ್ಯಾಗಾರವನ್ನು ಸೋಮವಾರ ಉದ್ಘಾಟಿಸಿದ ಅವರು, ‘ರಫ್ತು ವ್ಯವಹಾರ ಲಾಭದ ಜತೆಗೆ ದೇಶದ ಆರ್ಥಿಕತೆಯ ಅಭಿವೃದ್ಧಿಯಲ್ಲಿ ಪಾಲುದಾರರಾಗಲು ಅವಕಾಶ ನೀಡುತ್ತದೆ’ ಎಂದರು.

‘2024–25ನೇ ಸಾಲಿನಲ್ಲಿ ಸೇವಾ ವಲಯ, ಅಂದರೆ ಸಾಫ್ಟ್‌ವೇರ್ ಕ್ಷೇತ್ರದ ರಫ್ತಿನಲ್ಲಿ ಕರ್ನಾಟಕವು ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಕರ್ನಾಟಕದ ಎಲ್ಲ 31 ಜಿಲ್ಲೆಯಿಂದ ರಫ್ತು ಕೈಗೊಳ್ಳುತ್ತಿರುವುದು ವಿಶೇಷ’ ಎಂದು ತಿಳಿಸಿದರು.

ADVERTISEMENT

ವಿಟಿಪಿಸಿ ಧಾರವಾಡದ ಉಪ ನಿರ್ದೇಶಕ ಟಿ.ಎಸ್. ಮಲ್ಲಿಕಾರ್ಜುನ, ‘ರಫ್ತು ವಿಧಾನಗಳು, ಮಾರುಕಟ್ಟೆ, ಪ್ಯಾಕೇಜಿಂಗ್, ಕ್ರೆಡಿಟ್ ಸೌಲಭ್ಯ, ಕಸ್ಟಮ್ಸ್ ವಿಧಾನಗಳು, ಸಾಗಾಟ ಮತ್ತು ಇ–ಕಾಮರ್ಸ್ ವೇದಿಕೆಯಿಂದ ಸಣ್ಣ ಉದ್ದಿಮೆಗಳಿಗೆ ರಫ್ತಿನಲ್ಲಿ ಇರುವ ಅವಕಾಶಗಳ ಕುರಿತು ಪರಿಣತರಿಂದ ಮಾಹಿತಿ ನೀಡುವುದು ಕಾರ್ಯಾಗಾರದ ಉದ್ದೇಶ’ ಎಂದರು.

ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯದಿಂದ 28 ಭಾವಿ ರಫ್ತುದಾರರು ಪಾಲ್ಗೊಂಡಿದ್ದರು. ವಾಣಿಜ್ಯೋದ್ಯಮ ಸಂಸ್ಥೆಯ ಗೌರವ ಕಾರ್ಯದರ್ಶಿ ರವೀಂದ್ರ ಬಳಿಗಾರ, ಸಹಾಯಕ ಕಾರ್ಯದರ್ಶಿ ನಂದೀಶ ಅಣ್ಣಗೇರಿ ಇದ್ದರು.

ಕೇಂದ್ರ ಸರ್ಕಾರವು ನವೋದ್ಯಮಿಗಳಿಗೆ ಹಲವು ಸೌಲಭ್ಯ ಹಾಗೂ ರಿಯಾಯಿತಿಗಳನ್ನು ನೀಡುತ್ತಿದೆ. ಅವುಗಳ ಪ್ರಯೋಜನ ಪಡೆದು ಯಶಸ್ವಿ ರಫ್ತು ಉದ್ಯಮಿಗಳಾಗಬೇಕು
ಎಸ್.ಪಿ. ಸಂಶಿಮಠ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.