ADVERTISEMENT

ದ್ರಾಕ್ಷಿ: ಈ ಬಾರಿ ಬೆಳೆಗಾರರಿಗೂ ‘ಸಿಹಿ’

ಪ್ರಸಕ್ತ ವರ್ಷ 15,000 ಟನ್‌ ಇಳುವರಿ | ವೈನ್ ತಯಾರಿಕೆಗೆ ಉತ್ತೇಜನ

ಕಲಾವತಿ ಬೈಚಬಾಳ
Published 25 ಜುಲೈ 2025, 23:30 IST
Last Updated 25 ಜುಲೈ 2025, 23:30 IST
ವೈನ್ ದ್ರಾಕ್ಷಿ 
ವೈನ್ ದ್ರಾಕ್ಷಿ    

ಹುಬ್ಬಳ್ಳಿ: ದ್ರಾಕ್ಷಾರಸ (ವೈನ್) ತಯಾರಿಕೆಗೆ ಬೇಕಾದ ತಳಿಯ ದ್ರಾಕ್ಷಿಯನ್ನು ರಾಜ್ಯದಲ್ಲಿ 2,500 ಎಕರೆ ಪ್ರದೇಶದಲ್ಲಿ ಬೆಳೆಯುತ್ತಿದ್ದು, ಸಕಾಲಿಕ ಮಳೆ, ಹವಾಮಾನದ ಪರಿಣಾಮ ಉತ್ತಮ ಇಳುವರಿ ಇದೆ. ಪ್ರಸಕ್ತ ವರ್ಷ ದ್ರಾಕ್ಷಿಯು ಬೆಳೆಗಾರರಿಗೂ ‘ಸಿಹಿ’ಯಾಗುವ ಸೂಚನೆಗಳಿವೆ.

ಜನವರಿಯಿಂದ ಮೇ ತಿಂಗಳವರೆಗೆ ದ್ರಾಕ್ಷಿ ಕೃಷಿ ನಡೆಯಲಿದ್ದು, ಜೂನ್‌ನಿಂದ ಜುಲೈ ಅಂತ್ಯದವರೆಗೆ ವೈನ್ ತಯಾರಿಕೆ ಪ್ರಕ್ರಿಯೆ ನಡೆಯುತ್ತದೆ. ರಾಜ್ಯದಲ್ಲಿ ವಿಜಯಪುರ, ಬಾಗಲಕೋಟೆ, ಬೆಳಗಾವಿ, ಬೀದರ್‌, ಕಲಬುರಗಿ, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಸೇರಿ 16 ಜಿಲ್ಲೆಗಳಲ್ಲಿ ವೈನ್‌ ಉತ್ಪಾದನೆಗೆ ಬಳಸಲಾಗುವ ತಳಿಯ ದ್ರಾಕ್ಷಿಗಳನ್ನು ಬೆಳೆಯಲಾಗುತ್ತದೆ. 

ಕೆಂಪು ವೈನ್‌ ತಯಾರಿಕೆಗೆ ಶಿರಾಜ್‌ ಕೆಬರ್‌ನೆಟ್‌ ಸಾವಿಗ್ನಾನ್‌, ಮೆರ್ಲೋ, ಜಿನ್‌ ಪ್ಯಾಂಡಲ್‌ ತಳಿಯ ದ್ರಾಕ್ಷಿಯನ್ನು ಹಾಗೂ ಬಿಳಿ ವೈನ್‌ ತಯಾರಿಕೆಗೆ ಚಿನಿನ್‌ ಬ್ಲಾಂಕ್‌, ಚಾರಡೋನಿ, ಸಾವಿಗ್ನಾನ್‌ ಬ್ಲಾಂಕ್‌ ತಳಿಯ ದ್ರಾಕ್ಷಿಯನ್ನು ಅಧಿಕವಾಗಿ ಬೆಳೆಯಲಾಗುತ್ತದೆ.

ADVERTISEMENT

ರಾಜ್ಯದಲ್ಲಿ 19 ಖಾಸಗಿ ವೈನರಿಗಳಿವೆ. 2024–25ರಲ್ಲಿ 15,000 ಮೆಟ್ರಿಕ್‌ ಟನ್‌ ದ್ರಾಕ್ಷಿ ಇಳುವರಿ ಬಂದಿತ್ತು. 2023–24ನೇ ಸಾಲಿಗೆ ಹೋಲಿಸಿದರೆ 2024–25ರಲ್ಲಿ 1.39 ಲಕ್ಷ ಲೀಟರ್‌ ವೈನ್ ಅಧಿಕ ಉತ್ಪಾದನೆಯಾಗಿತ್ತು. 

2023–24ರಲ್ಲಿ 96.75 ಲಕ್ಷ ಲೀಟರ್‌ ವೈನ್‌ ಮಾರಾಟವಾಗಿ, ₹387 ಕೋಟಿ ವಹಿವಾಟು ನಡೆದಿದ್ದರೆ, 2024–25ರಲ್ಲಿ 98.14 ಲಕ್ಷ ಲೀಟರ್‌ ವೈನ್‌ ಮಾರಾಟವಾಗಿ, ₹388 ಕೋಟಿ ವಹಿವಾಟು ನಡೆದಿತ್ತು.

‘ಈ ತಳಿಯ ದ್ರಾಕ್ಷಿ ದರ ಕೆ.ಜಿಗೆ ₹40 ರಿಂದ ₹75ರವರೆಗೆ (ತಳಿಗಳ ಆಧಾರದಲ್ಲಿ) ಮಾರಾಟ ಆಗಿದೆ. ಒಟ್ಟು ದ್ರಾಕ್ಷಿ ಇಳುವರಿಯಲ್ಲಿ ಶೇ 70ರಷ್ಟು ಒಣದ್ರಾಕ್ಷಿಗೆ ಬಳಕೆಯಾದರೆ, ಶೇ10ರಷ್ಟು ವೈನ್‌ ತಯಾರಿಕೆಗೆ ಬಳಕೆ ಆಗುತ್ತದೆ. ಶೇ 20ರಷ್ಟು ದ್ರಾಕ್ಷಿ ಮಾರಲಾಗುತ್ತದೆ’ ಎಂದು ರಾಜ್ಯ ದ್ರಾಕ್ಷಿ ಮತ್ತು ದ್ರಾಕ್ಷಾರಸ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಟಿ.ಸೋಮು ‘ಪ್ರಜಾವಾಣಿ’ಗೆ ತಿಳಿಸಿದರು.

ದ್ರಾಕ್ಷಾ ರಸದಿಂದ ತಯಾರಾದ ವೈನ್
ಅಭಯಕುಮಾರ ನಾಂದ್ರೇಕರ
ಟಿ.ಸೋಮು
ದ್ರಾಕ್ಷಿ ಕೆಜಿಗೆ ₹80 ರಿಂದ ₹85ರ ದರದಲ್ಲಿ ಮಾರಾಟವಾದರೆ ರೈತರಿಗೆ ಅನುಕೂಲ. ಫೋರ್ಟಿಫೈಡ್ ವೈನ್‌ ತಯಾರಿಕೆಯಲ್ಲಿ ಸ್ಪಿರಿಟ್ ಬಳಸಲಾಗುತ್ತದೆ. ಅಂಥ ವೈನ್‌ಗಳನ್ನು ನಿರ್ಬಂಧಿಸಬೇಕು.
ಅಭಯಕುಮಾರ ನಾಂದ್ರೇಕರ ಅಧ್ಯಕ್ಷ ಕರ್ನಾಟಕ ರಾಜ್ಯ ದ್ರಾಕ್ಷಿ ಬೆಳೆಗಾರರ ಸಂಘ ರಾಜ್ಯ ಘಟಕ
2020–21ರಿಂದ ಈವರೆಗೆ ರಾಜ್ಯದಲ್ಲಿ 450.88 ಲಕ್ಷ ಲೀಟರ್‌ ವೈನ್‌ ತಯಾರಿಸಲಾಗಿದೆ. 2020–21ರಿಂದ 2024–25ರವರೆಗೆ ವೈನ್ ಮಾರಾಟದಿಂದ ₹1724 ಕೋಟಿ ಮೊತ್ತದ ವಹಿವಾಟು ನಡೆದಿದೆ
ಟಿ.ಸೋಮು ವ್ಯವಸ್ಥಾಪಕ ನಿರ್ದೇಶಕ ರಾಜ್ಯ ದ್ರಾಕ್ಷಿ ಮತ್ತು ದ್ರಾಕ್ಷಾರಸ ಮಂಡಳಿ

ಒಣ ದ್ರಾಕ್ಷಿ ಸಂಸ್ಕರಣೆ ಘಟಕ ಸ್ಥಾಪನೆ’

‘ನಬಾರ್ಡ್ ಯೋಜನೆಯಡಿ ಕರ್ನಾಟಕ ದ್ರಾಕ್ಷಿ ಮತ್ತು ದ್ರಾಕ್ಷಾರಸ ಮಂಡಳಿ ವಿಜಯಪುರದ ತೊರವಿಯಲ್ಲಿ 10 ಸಾವಿರ ಟನ್‌ ಸಾಮರ್ಥ್ಯದ ಒಣದ್ರಾಕ್ಷಿ ಸಂಗ್ರಹ ಶೀತಲ ಹಾಗೂ ಸಂಸ್ಕರಣ ಘಟಕ ಸ್ಥಾಪಿಸಲಿದ್ದು ಕಾಮಗಾರಿ ಪ್ರಗತಿಯಲ್ಲಿದೆ’ ಎಂದು ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಟಿ.ಸೋಮು ತಿಳಿಸಿದರು. ‘ಬೆಂಗಳೂರು ಬ್ಲ್ಯೂ’ಗೆ ಬೇಡಿಕೆ: ‌ಬೆಂಗಳೂರು ಗ್ರಾಮಾಂತರ ಚಿಕ್ಕಬಳ್ಳಾಪುರ ಜಿಲ್ಲೆಗಳ 4 ಸಾವಿರ ಎಕರೆ ಪ್ರದೇಶದಲ್ಲಿ ‘ಬೆಂಗಳೂರು ಬ್ಲ್ಯೂ’ ತಳಿಯ ದ್ರಾಕ್ಷಿ ಬೆಳೆಯಲಾಗುತ್ತಿದೆ. ಈ ವರ್ಷ 50 ಸಾವಿರ ಮೆಟ್ರಿಕ್‌ ಟನ್‌ ಇಳುವರಿ ಬಂದಿದೆ. ಈ ಪೈಕಿ 10 ಸಾವಿರ ಟನ್‌ ದ್ರಾಕ್ಷಿಯನ್ನು ಫೋರ್ಟಿಫೈಡ್‌ ವೈನ್‌ ತಯಾರಿಕೆಗೆ ಬಳಸಲಾಗುತ್ತಿದೆ’ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.