ADVERTISEMENT

ರಂಗಾಯಣದಲ್ಲಿ ಕಾವ್ಯ–ಗಾನ ಲಹರಿ

ಸಂಭ್ರಮದ ‘ಪ್ರಜಾವಾಣಿ‘ ಅಮೃತ ಮಹೋತ್ಸವ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2022, 16:22 IST
Last Updated 30 ನವೆಂಬರ್ 2022, 16:22 IST
‘ಪ್ರಜಾವಾಣಿ’ ಅಮೃತಮಹೋತ್ಸವ ಅಂಗವಾಗಿ ಧಾರವಾಡದ ರಂಗಾಯಣದಲ್ಲಿ ಬುಧವಾರ ನಡೆದ ಕವಿ-ಕಾವ್ಯ ಗಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕವಿಗಳು ಹಾಗೂ ಹುಬ್ಬಳ್ಳಿ ಜೆ.ಸಿ.ನಗರದ ಎಸ್‌ಜೆಎಂವಿಎಸ್‌ ಕಲಾ ಹಾಗೂ ವಾಣಿಜ್ಯ ಮಹಿಳಾ ಮಹಾವಿದ್ಯಾಲಯದ ಸಂಗೀತ ವಿಭಾಗದ ವಿದ್ಯಾರ್ಥಿಗಳು
‘ಪ್ರಜಾವಾಣಿ’ ಅಮೃತಮಹೋತ್ಸವ ಅಂಗವಾಗಿ ಧಾರವಾಡದ ರಂಗಾಯಣದಲ್ಲಿ ಬುಧವಾರ ನಡೆದ ಕವಿ-ಕಾವ್ಯ ಗಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕವಿಗಳು ಹಾಗೂ ಹುಬ್ಬಳ್ಳಿ ಜೆ.ಸಿ.ನಗರದ ಎಸ್‌ಜೆಎಂವಿಎಸ್‌ ಕಲಾ ಹಾಗೂ ವಾಣಿಜ್ಯ ಮಹಿಳಾ ಮಹಾವಿದ್ಯಾಲಯದ ಸಂಗೀತ ವಿಭಾಗದ ವಿದ್ಯಾರ್ಥಿಗಳು   

ಧಾರವಾಡ: ಎಳೆ ಬಿಸಿಲಿನ ಕಾವು ರಂಗಾಯಣದ ಹೊರಗೆ, ಸಾಹಿತ್ಯದ ಬಿಸುಪು ಸಭಾಂಗಣದ ಒಳಗೆ. ಕವಿಗಳು, ತಮ್ಮಿಷ್ಟದ ರಚನೆಗಳನ್ನು ಓದಿದರು. ತಮಗಿಷ್ಟವಾದ ಹಿರಿಯ ಕವಿಗಳ ರಚನೆಯನ್ನೂ ಓದಿದರು. ನಡುನಡುವೆ ನಾದದ ಸವಿಯೂಟ, ಉಣಬಡಿಸಲು, ಶುಭ್ರಶ್ವೇತ ವಸ್ತ್ರಧಾರಿಣಿಯರಾದ ವಿದ್ಯಾರ್ಥಿಗಳು ಇದ್ದರು. ಅವರ ಸುಶ್ರಾವ್ಯ ಗಾಯನ ಕಾರ್ಯಕ್ರಮ ಕಳೆಗಟ್ಟುವಂತೆ ಮಾಡಿತು.

ನಗರದ ರಂಗಾಯಣದಲ್ಲಿ ‘ಪ್ರಜಾವಾಣಿ’ಯ ಅಮೃತ ಮಹೋತ್ಸವ ವರ್ಷಾಚರಣೆಯ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ‘ಕಾವ್ಯ–ಗಾನ ಲಹರಿ’ ಕಾರ್ಯಕ್ರಮದಲ್ಲಿ ಕಂಡುಬಂದ ಝಲಕ್‌ಗಳಿವು.

‘ನಾಡಗೀತೆ’ಯೊಂದಿಗೆ ಆರಂಭವಾದ ಕಾರ್ಯಕ್ರಮದುದ್ದಕ್ಕೂ ‘ಕನ್ನಡತನ’ ಅನುರಣಿಸಿತು. ನಾಲ್ವರು ಕವಿಗಳು ತಮ್ಮಿಷ್ಟದ ಕವನ ವಾಚನದೊಂದಿಗೆ ಇನ್ನಷ್ಟು ಮೆರುಗು ತಂದರು.

ADVERTISEMENT

‘ಕವಿತೆ’ ಎಂಬ ಕವನದಲ್ಲಿ ‘ತೊಳೆಯಬೇಕಿಲ್ಲ ಒಳಉಡುಪು’ ಸಾಲುಗಳ ಮೂಲಕ ಸ್ತ್ರೀ ಸಂವೇದನೆ ಪರಿಚಯಿಸಿದ ಕವಯತ್ರಿ ನಿರ್ಮಲಾ ಶೆಟ್ಟರ್, ‘ಕಾಲಿಲ್ಲದ ಹೆಜ್ಜೆಗುರುತು’ವಿನಲ್ಲಿ ಅಪ್ಪನ ಒಲವು–ನಿಲುವುಗಳನ್ನು ತೆರೆದಿಟ್ಟರು. ಗಣೇಶ್‌ ಹೊಸ್ಮನೆ ಅವರ ‘ಬೆಂಕಿ ಕಡ್ಡಿ’ ಗಜಲ್‌ ಸಾಲುಗಳ ಮೂಲಕ ಸ್ವ–ಅರಿವಿನ ಮಹತ್ವದ ಮೇಲೆ ಬೆಳಕು ಚೆಲ್ಲಿದರು.

ಕವಿ ಡಾ. ಗೋವಿಂದ ಹೆಗಡೆ ‘ಮಾ ನಿಷಾದ’ದಲ್ಲಿ ಬದುಕಿನ ಚಲನಶೀಲತೆ ಮೇಲೆ ಬೆಳಕು ಚೆಲ್ಲಿದರು. ‘ಬಾಹುಬಲಿ’ಯಲ್ಲಿ ಬಿಟ್ಟುಕೊಡುವುದರಲ್ಲಿ ಇರುವ ಸುಖ ಪರಿಚಯಿಸಿದರು. ಸ್ವರಚಿತ ಗಜಲ್‌ ವಾಚಿಸಿ, ನವೆಂಬರ್‌ನಲ್ಲಿ ಪುಟಿದೇಳುವ ಅಭಿಮಾನ ಅನಂತವಾಗಲಿ ಎಂದು ಆಶಿಸಿದರು.

ಕವಿ ಡಾ. ಬಸು ಬೇವಿನಗಿಡದ ಅಲ್ಲಮಪ್ರಭುವಿನ ಕುರಿತು ವರಕವಿ ದ.ರಾ. ಬೇಂದ್ರೆ ಬರೆದ ‘ಮನದ ಬಯಲಲಿ ಬವಣೆಗೊಂಡೆ’ ಸುನೀತ ವಾಚಿಸಿದರು. ‘ಅಪ್ಪ ಹೊಡೆಯದ ದಿನ’ ಕವಿತೆಯಲ್ಲಿ ನಮ್ಮೂರು ನಮಗೆ ಚೆಂದ ಎಂಬುದನ್ನು ಸಾರಿದರು. ‘ಅಗೋಚರ’ದಲ್ಲಿ ದಕ್ಕದ ಪ್ರೇಮವನ್ನು ನವಿರಾದ ಪದಗಳಲ್ಲಿ ಪೋಣಿಸಿ ‘ಕವಿಗೋಷ್ಠಿ’ಗೆ ತೋರಣಗಟ್ಟಿದರು.

ಕವಯತ್ರಿ ಸುನಂದಾ ಕಡಮೆ ಅವರು ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ ‘ನಿನ್ನ ಮರೆಯೋ ಮಾತು’ ಕವಿತೆ ವಾಚಿಸಿ, ಅಲ್ಲಿದ್ದವರನ್ನು ಪ್ರೇಮಲೋಕಕ್ಕೆ ಕರೆದೊಯ್ದರು. ‘ಜಮಾ–ಖರ್ಚು’ ಹಾಗೂ ‘ಸಾಣಿಗೆಯ ಕಣ್ಣು’ ಕವನಗಳು ಗೃಹಸ್ಥರ ಜೀವನದ ಅನುಕ್ಷಣಗಳಿಗೆ ಅಕ್ಷರದ ಒಗ್ಗರಣೆ ಹಾಕಿದಂತೆ ಘಮ್ಮೆಂದವು.

ಮೂಲತಃ ಮುಂಡಗೋಡಿನ ಗಾಯಕಿ, ಐರ್ಲೆಂಡ್‌ ನಿವಾಸಿ ಅಮಿತಾ ರವಿಕಿರಣ ಅವರ ಗಾಯನ ಕರ್ಣಗಳಿಗಿಂಪು ತಂದಿತು. ವಚನ, ತತ್ವಪದ ಹಾಗೂ ಜನಪದ ಹಾಡುಗಳು ಮೋಡಿ ಮಾಡಿದವು.

ಹುಬ್ಬಳ್ಳಿ ಜೆ.ಸಿ.ನಗರದ ಎಸ್‌ಜೆಎಂವಿಎಸ್‌ ಕಲಾ ಹಾಗೂ ವಾಣಿಜ್ಯ ಮಹಿಳಾ ಮಹಾವಿದ್ಯಾಲಯದ ಸಂಗೀತ ವಿಭಾಗದ ವಿದ್ಯಾರ್ಥಿಗಳಾದ ರೂಪಾ ಕಡಗಾವಿ, ಸರೋಜಿನಿ ಬಡಿಗೇರ, ಭಾರ್ಗವಿ ಕುಲಕರ್ಣಿ, ನಂದಿನಿ ಜಕನೂರ, ಶೋಭಾ ಪೂಜೇರಿ, ಸುಜತಾ ಬಾರ್ಕೇರ, ಐಶ್ವರ್ಯಾ ಸೋಮೇಶ್ವರಮಠ, ಗಾಯತ್ರಿ ಪಿ.ಎಸ್‌., ಕೆ. ಹೆಬ್ಜಿಬ್ಯೂಲಾ, ಸಿದ್ದಮ್ಮಾ ಹರಶೆಟ್ಟಿ, ಮಾಧುರಿ ಕುಲಕರ್ಣಿ ಮತ್ತು ನಿವೇದಿತಾ ಗಂಜಿ ನಾಡಗೀತೆ ಪ್ರಸ್ತುತ ಪಡಿಸಿದರು. ಸಂಗೀತ ವಿಭಾಗದ ಮುಖ್ಯಸ್ಥೆ ಡಾ. ಶಿವಲೀಲಾ ವೈಜನಾಥ ಸಿದ್ದವೀರೆ ಮಾರ್ಗದರ್ಶನ ನೀಡಿದ್ದರು. ರಮೇಶ ರಾಠೋಡ ತಬಲಾ ಹಾಗೂ ಪ್ರಮೋದ ಹೆಬ್ಬಳ್ಳಿ ಹಾರ್ಮೋನಿಯಂ ಸಾಥ್‌ ನೀಡಿದ್ದರು.

ಪ್ರಜಾವಾಣಿ–ಡೆಕ್ಕನ್‌ ಹೆರಾಲ್ಡ್‌ನ ಜಾಹೀರಾತು ವಿಭಾಗದ ಎಜಿಎಂ ದಿವಾಕರ ಭಟ್‌ ಇದ್ದರು.

ಅಮೃತ ಮಹೋತ್ಸವಕ್ಕೆ ಶುಭಾರಂಭ

‘ಪ್ರಜಾವಾಣಿ ಪತ್ರಿಕೆ ಅಮೃತ ಮಹೋತ್ಸವದ ಹೊಸ್ತಿಲಲ್ಲಿದೆ. ಈ ಸಂಭ್ರಮದ ಆರಂಭದಲ್ಲಿ ಹುಬ್ಬಳ್ಳಿ ಬ್ಯೂರೋದಿಂದ ನಡೆಯುತ್ತಿರುವ ಮೊದಲ ಕಾರ್ಯಕ್ರಮವಿದು. ಒಂದೆಡೆ ಕವಿಗಳು ತಮಗೆ ಇಷ್ಟವಾದ ಕವನ ವಾಚಿಸುವುದು, ಇನ್ನೊಂದೆಡೆ ನಾಡಗೀತೆಗಳ ಕಾವ್ಯ ಲಹರಿ. ಸಾಹಿತ್ಯ ಮತ್ತು ಸಂಗೀತ ಒಟ್ಟೊಟ್ಟಿಗೆ ಸಾಗಬೇಕು. ಸಾಹಿತ್ಯ ಮನದಾಳಕ್ಕೆ ಇಳಿಯಬೇಕು, ಸಂಗೀತವನ್ನು ಆಸ್ವಾದಿಸಬೇಕು. ಈಗಿನ ಮಕ್ಕಳು ಹೊಸದನ್ನು ಓದುವುದಿಲ್ಲ ಎನ್ನುವ ವಿಷಾದವಿದೆ. ಹೊಸ ಓದಿನತ್ತ ವಿದ್ಯಾರ್ಥಿಗಳನ್ನು ಸೆಳೆಯಲು ಕಾವ್ಯ–ಗಾನ ಲಹರಿ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದು ‘ಪ್ರಜಾವಾಣಿ’ ಹುಬ್ಬಳ್ಳಿ ಬ್ಯೂರೊ ಮುಖ್ಯಸ್ಥೆ ರಶ್ಮಿ ಎಸ್‌ ಹೇಳಿದರು.

‘ಕಾವ್ಯ–ಗಾನ ಲಹರಿ’ ಕಾರ್ಯಕ್ರಮದ ವಿಡಿಯೊ ವೀಕ್ಷಣೆಗೆ ಲಿಂಕ್: https://www.facebook.com/PvHubli

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.