ADVERTISEMENT

ರಾಜ್ಯಕ್ಕೆ ಕೇಜ್ರಿವಾಲ್ ಭೇಟಿ ಮಾರ್ಚ್ 4ಕ್ಕೆ

ಮಾರ್ಚ್ ಮೊದಲ ವಾರ ಪಕ್ಷದ ಚುನಾವಣಾ ಪ್ರಣಾಳಿಕೆ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2023, 5:53 IST
Last Updated 8 ಫೆಬ್ರುವರಿ 2023, 5:53 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಹುಬ್ಬಳ್ಳಿ: ‘ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಎಎಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು, ಮಾರ್ಚ್ 4ರಂದು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಫೆಬ್ರುವರಿ ಅಂತ್ಯದಲ್ಲಿ ಅಥವಾ ಮಾರ್ಚ್ ಮೊದಲ ವಾರದಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದೆ’ ಎಂದು ಪಕ್ಷದ ಕಾರ್ಯಾಧ್ಯಕ್ಷ ರವಿಚಂದ್ರ ನೆರಬೆಂಚಿ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ಆಯೋಜಿಸಿರುವ ಪಕ್ಷದ ಸಮಾವೇಶದಲ್ಲಿ ಪಾಲ್ಗೊಳ್ಳಲಿರುವ ಕೇಜ್ರಿವಾಲ್ ಅವರು, ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲಿದ್ದಾರೆ. ಸಮಾವೇಶದಲ್ಲಿ ರಾಜ್ಯದಾದ್ಯಂತ ಇರುವ ಬ್ಲಾಕ್ ಮತ್ತು ಬೂತ್ ಮಟ್ಟದ 25 ಸಾವಿರ ಪದಾಧಿಕಾರಿಗಳು ಪ್ರಮಾಣವಚನ ಸ್ವೀಕರಿಸಲಿದ್ದಾರೆ’ ಎಂದರು.

‘ಪಕ್ಷದ ಉಪಾಧ್ಯಕ್ಷ ಭಾಸ್ಕರರಾವ್ ನೇತೃತ್ವದ ಸಮಿತಿ ಚುನಾವಣಾ ಪ್ರಣಾಳಿಕೆ ಸಿದ್ಧಪಡಿಸುತ್ತಿದ್ದು, ಫೆಬ್ರುವರಿ ಅಂತ್ಯದಲ್ಲಿ ಅಥವಾ ಮಾರ್ಚ್ ಮೊದಲ ವಾರದಲ್ಲಿ ಬಿಡುಗಡೆ ಮಾಡಲಾಗುವುದು. ಈ ಎಲ್ಲಾ 224 ಕ್ಷೇತ್ರಗಳಲ್ಲಿ ಪಕ್ಷ ಸ್ಪರ್ಧಿಸಲಿದೆ. ದೆಹಲಿಯ ಸಚಿವರು ಹಾಗೂ ಶಾಸಕರು ಪ್ರಚಾರದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲಿದ್ದಾರೆ. ದೆಹಲಿಯ ಎಂಟು ಜನರ ತಂಡ ರಾಜ್ಯಕ್ಕೆ ಭೇಟಿ ನೀಡಿ, ಚುನಾವಣಾ ತಯಾರಿ ಬಗ್ಗೆ ಪರಿಶೀಲನೆ ನಡೆಸಿ ಮಾರ್ಗದರ್ಶನ ಮಾಡುತ್ತಿದೆ’ ಎಂದು ತಿಳಿಸಿದರು.

ADVERTISEMENT

‘ದೇಶದಲ್ಲಿ ಭಿನ್ನವಾದ ಆಡಳಿತಕ್ಕೆ ಮುನ್ನಡಿ ಬರೆದಿರುವ ಪಕ್ಷವು ಪ್ರಾಂತ್ಯ, ಜಿಲ್ಲೆ, ರೈತರು, ಕಾರ್ಮಿಕರು, ಮಹಿಳೆಯರು, ಯುವಜನ ಸೇರಿದಂತೆ ವಿವಿಧ ವಿಭಾಗಕ್ಕೆ ಪ್ರತ್ಯೇಕವಾದ ಪ್ರಣಾಳಿಕೆ ಸಿದ್ಧಪಡಿಸುತ್ತಿದೆ. ಈ ನಿಟ್ಟಿನಲ್ಲಿ ವಾಣಿಜ್ಯೋದ್ಯಮ ಸಂಸ್ಥೆಗಳು, ಕಾರ್ಮಿಕ ಮುಖಂಡರು, ಧಾರ್ಮಿಕ ಮುಖಂಡರು ಹಾಗೂ ಸಂಘ-ಸಂಸ್ಥೆಗಳ ಜೊತೆ ಸರಣಿ ಸಭೆ ನಡೆಸಲಾಗುತ್ತಿದೆ’ ಎಂದ ಹೇಳಿದರು.

‘ಬ್ಲಾಕ್ ಮಟ್ಟದಲ್ಲಿ ಕಾರ್ಯಕಾರಿಣಿ ಸಭೆ ನಡೆಸಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರನ್ನು ಚುನಾವಣೆಗೆ ಅಣಿಗೊಳಿಸಲಾಗುತ್ತಿದೆ. ಬೂತ್ ಮತ್ತು ವಾರ್ಡ್ ಮಟ್ಟದಲ್ಲಿ ಕಾರ್ಯಕರ್ತರ ಪಡೆಯನ್ನು ಕಟ್ಟಲಾಗುತ್ತಿದೆ. ತಿಂಗಳ‌ ಹಿಂದೆ ಧಾರವಾಡ ಜಿಲ್ಲೆಯಲ್ಲಿ ನಡೆದ ಮಿಸ್ ಕಾಲ್ ಅಭಿಯಾನದಲ್ಲಿ 18 ಸಾವಿರ ಜನ ಸ್ವಯಂಸೇವಕರಾಗಿ ಕೆಲಸ ಮಾಡಲು ಮುಂದೆ ಬಂದಿದ್ದಾರೆ’ ಎಂದರು.

‘ಅಭ್ಯರ್ಥಿಗಳ ಆಯ್ಕೆಯು ಪಾರದರ್ಶಕವಾಗಿ ನಡೆಯಲಿದೆ. ಭ್ರಷ್ಟಾಚಾರ, ಕೋಮುವಾದ ಹಾಗೂ ಕ್ರಿಮಿನಲ್ ಹಿನ್ನೆಲೆ ಇರುವವರಿಗೆ ನಮ್ಮ ಪಕ್ಷದಲ್ಲಿ ಯಾವುದೇ ಕಾರಣಕ್ಕೂ ಅವಕಾಶವಿಲ್ಲ. ದೆಹಲಿ ಪಾಲಿಕೆಯ ಮೇಯರ್ ಚುನಾವಣೆ ವಿಷಯದಲ್ಲಿ ನಮ್ಮ‌ ಪಕ್ಷವನ್ನು ಕಟ್ಟಿ ಹಾಕಲು ಬಿಜೆಪಿ ಪ್ರಯತ್ನಿಸುತ್ತಿದೆ. ಅಲ್ಲಿನ ಸಚಿವ ಸತ್ಯೇಂದ್ರ ಜೈನ್ ಅವರ ಮೇಲೆ ಸುಳ್ಳು ಆರೋಪ ಹೊರಿಸಿ ಜೈಲಿಗೆ ಕಳಿಸಲಾಗಿದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಪಕ್ಷದ ಮುಖಂಡರಾದ ವಿಕಾಸ ಸೊಪ್ಪಿನ, ಅನಂತಕುಮಾರ ಬುಗಡಿ, ಶಶಿಕುಮಾರ ಸುಳ್ಳದ, ಮಲ್ಲಿಕಾರ್ಜುನ ಹಿರೇಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.