ADVERTISEMENT

ಸರ್ಕಾರಿ ನೌಕರರಿಗೆ ಖಾದಿ ಕಾಯಂ ಆಗಲಿ

ರಾಜ್ಯಮಟ್ಟದ ಖಾದಿ ವಸ್ತುಪ್ರದರ್ಶನ, ಮಾರಾಟ ಆರಂಭ: ಶೆಟ್ಟರ್‌ ಆಗ್ರಹ

​ಪ್ರಜಾವಾಣಿ ವಾರ್ತೆ
Published 7 ಜನವರಿ 2019, 14:36 IST
Last Updated 7 ಜನವರಿ 2019, 14:36 IST
ಹುಬ್ಬಳ್ಳಿಯಲ್ಲಿ ಸೋಮವಾರ ಆರಂಭವಾದ ಖಾದಿ ಮತ್ತು ಗ್ರಾಮೋದ್ಯೋಗ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ಶಾಸಕ ಜಗದೀಶ ಶೆಟ್ಟರ್‌ ಚಿಗಳಿ ಸವಿದರು
ಹುಬ್ಬಳ್ಳಿಯಲ್ಲಿ ಸೋಮವಾರ ಆರಂಭವಾದ ಖಾದಿ ಮತ್ತು ಗ್ರಾಮೋದ್ಯೋಗ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ಶಾಸಕ ಜಗದೀಶ ಶೆಟ್ಟರ್‌ ಚಿಗಳಿ ಸವಿದರು   

ಹುಬ್ಬಳ್ಳಿ: ರಾಜ್ಯ ಸರ್ಕಾರದ ಎಲ್ಲ ನೌಕರರು ವಾರದಲ್ಲಿ ಒಂದು ದಿನ ಕಡ್ಡಾಯವಾಗಿ ಖಾದಿ ಬಟ್ಟೆ ಧರಿಸುವಂತೆ ಸರ್ಕಾರ ಆದೇಶ ಹೊರಡಿಸಬೇಕು ಎಂದು ಶಾಸಕ ಜಗದೀಶ ಶೆಟ್ಟರ್‌ ಆಗ್ರಹಿಸಿದರು.

ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ, ಬೆಂಗೇರಿಯ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘದ ಜಂಟಿ ಆಶ್ರಯದಲ್ಲಿ ಸೋಮವಾರ ನಗರದಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಖಾದಿ ಮತ್ತು ಗ್ರಾಮೋದ್ಯೋಗ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.

‘ಸ್ವದೇಶಿ ಉತ್ಪನ್ನಗಳಿಗೆ ಹೆಚ್ಚು ಬೇಡಿಕೆ ಲಭಿಸಬೇಕಾದರೆ ಪತಂಜಲಿ ಉತ್ಪನ್ನಗಳ ಮಾದರಿಯಲ್ಲಿ ಬ್ರ್ಯಾಂಡ್‌ ಆಗಿ ರೂಪಿಸಬೇಕು. ಹೆಚ್ಚು ಜನ ಬಳಸುವಂತಾಗಬೇಕು. ರಾಜ್ಯ ಸರ್ಕಾರ ಮತ್ತು ಕೆಎಲ್‌ಇಯಂಥ ದೊಡ್ಡ ಶಿಕ್ಷಣ ಸಂಸ್ಥೆಗಳು ತಮ್ಮ ಸಿಬ್ಬಂದಿಗೆ ಹಾಗೂ ವಿದ್ಯಾರ್ಥಿಗಳಿಗೆ ವಾರದಲ್ಲಿ ಒಂದು ದಿನ ಖಾದಿ ಬಟ್ಟೆ ಧರಿಸುವಂತೆ ನಿಯಮ ಮಾಡಬೇಕು’ ಎಂದರು.

ADVERTISEMENT

‘ಕೇಂದ್ರ ಸರ್ಕಾರದ ನೌಕರರಿಗೂ ಈ ನಿಯಮ ಜಾರಿಗೆ ತರಬೇಕು. ಆಗ ಮಾತ್ರ ಖಾದಿ ಸಂಸ್ಥೆಗಳ ಆದಾಯ ಹೆಚ್ಚಾಗಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಪ್ರಭಾಕರ ಕೋರೆ ಅವರ ಜೊತೆ ಚರ್ಚಿಸುತ್ತೇನೆ’ ಎಂದು ಭರವಸೆ ನೀಡಿದರು.

ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘದ ಅಧ್ಯಕ್ಷ ಪಾಟೀಲ ಪುಟ್ಟಪ್ಪ ಮಾತನಾಡಿ ‘ಸ್ವಾತಂತ್ರ್ಯ ಹೋರಾಟಕ್ಕೆ ಮಹಾತ್ಮ ಗಾಂಧೀಜಿ ಅವರಿಗೆ ಖಾದಿ ಪ್ರಬಲ ಅಸ್ತ್ರವಾಗಿತ್ತು. ನಮ್ಮ ಜಿಲ್ಲೆಯಲ್ಲಿ ತಯಾರಾಗುವ ಖಾದಿ ಉತ್ಪನ್ನಗಳು ದೇಶಾದ್ಯಂತ ಇವೆ ಎನ್ನುವುದೇ ಹೆಮ್ಮೆ’ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಆಯೋಗದ ರಾಜ್ಯ ನಿರ್ದೇಶಕ ನಲ್ಲಮುತ್ತು ‘ಖಾದಿ ತಯಾರಿಕೆಯಿಂದ ಗ್ರಾಮೀಣ ಪ್ರದೇಶದಲ್ಲಿ ಸಾಕಷ್ಟು ಜನರಿಗೆ ಉದ್ಯೋಗದ ಅವಕಾಶಗಳು ಸಿಕ್ಕಿವೆ. ಉತ್ಪನ್ನಗಳ ಹೊರಗಡೆ ಮಾರಾಟ ಮಾಡುವ ಸವಾಲು ನಮ್ಮ ಮುಂದಿದೆ. ಆದ್ದರಿಂದ ಉತ್ತರ ಕರ್ನಾಟಕದಲ್ಲಿ ಖಾದಿಗೆ ಸಂಬಂಧಿಸಿದ ರಾಷ್ಟ್ರೀಯ ಮಟ್ಟದ ಕಾರ್ಯಕ್ರಮ ನಡೆಯಬೇಕು’ ಎಂದು ಅಭಿಪ್ರಾಯಪಟ್ಟರು.

ಮೇಯರ್‌ ಸುಧೀರ ಸರಾಫ್‌, ಪಾಲಿಕೆ ಸದಸ್ಯ ಮೋಹನ ಹಿರೇಮನಿ, ಸಂಯುಕ್ತ ಸಂಘದ ಕಾರ್ಯದರ್ಶಿ ಶಿವಾನಂದ ಮಠಪತಿ, ಆಯೋಗದ ವಿಭಾಗೀಯ ನಿರ್ದೇಶಕ ಎಸ್‌.ಎಲ್‌. ಮಾಸೂರು, ಗರಗ ಖಾದಿ ಮತ್ತು ಗ್ರಾಮೋದ್ಯೋಗ ಕೇಂದ್ರದ ಅಧ್ಯಕ್ಷ ನಾಗಪ್ಪ ತಿರ್ಲಾಪುರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.