ADVERTISEMENT

ಸದ್ಯಕ್ಕಿಲ್ಲ ಕಿಮ್ಸ್‌ ನಿರ್ದೇಶಕ ಹುದ್ದೆಗೆ ಆಯ್ಕೆ?

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2019, 19:31 IST
Last Updated 18 ನವೆಂಬರ್ 2019, 19:31 IST
ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ
ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ   

ಹುಬ್ಬಳ್ಳಿ: ರಾಜ್ಯದಲ್ಲಿ ನಡೆಯುತ್ತಿರುವ ಉಪ ಚುನಾವಣೆಯ ಪರಿಣಾಮ ಕಿಮ್ಸ್‌ ನಿರ್ದೇಶಕರ ಹುದ್ದೆಗೆ ಆಯ್ಕೆ ಪ್ರಕ್ರಿಯೆ ವಿಳಂಬವಾಗುವ ಸಾಧ್ಯತೆ ಇದೆ. ಈ ಹುದ್ದೆಗೆ ಲಾಭಿ ನಡೆಸುತ್ತಿರುವ ಆಕಾಂಕ್ಷಿಗಳು ಅನಿವಾರ್ಯವಾಗಿ ಚುನಾವಣೆ ಮುಗಿಯುವವರೆಗೂ ಕಾಯಬೇಕಿದೆ.

ಈಗಾಗಲೇ ನಿರ್ದೇಶಕರ ಹುದ್ದೆಗೆ ಕಿಮ್ಸ್‌ನ 11 ಹಿರಿಯ ವೈದ್ಯರು ಅರ್ಜಿ ಸಲ್ಲಿಸಿದ್ದಾರೆ. ನ.16ರ ಒಳಗೆ ಬೆಂಗಳೂರಿನಲ್ಲಿ ನಿರ್ದೇಶಕರ ಸ್ಥಾನಕ್ಕೆ ಸಂದರ್ಶನ ನಡೆಯಲಿದೆ ಎಂದು ಸರ್ಕಾರ ಈ ಮೊದಲು ತಿಳಿಸಿತ್ತು. ಆದರೆ, ಉಪ ಚುನಾವಣೆ ಹಿನ್ನೆಲೆಯಲ್ಲಿ ಸಂದರ್ಶನ ಮುಂದೂಡಲಾಗಿದೆ ಎಂದು ಖಚಿತ ಮೂಲಗಳಿಂದ ತಿಳಿದು ಬಂದಿದೆ.

ನಿರ್ದೇಶಕರ ಆಯ್ಕೆ ಸಮಿತಿಯಲ್ಲಿ ಉನ್ನತ ಶಿಕ್ಷಣ ಮತ್ತು ವೈದ್ಯಕೀಯ ಸಚಿವರೇ ಮುಖ್ಯಸ್ಥರಾಗಿದ್ದಾರೆ. ಅವರ ಸಮ್ಮುಖದಲ್ಲಿಯೇ ಆಯ್ಕೆ ಪ್ರಕ್ರಿಯೆ ನಡೆಯಬೇಕಾಗಿದೆ. ಆದರೆ, ಸಚಿವರು ಚುನಾವಣಾ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ. ಹೀಗಾಗಿ ಡಿ.9ರಂದು ಉಪ ಚುನಾವಣಾ ಫಲಿತಾಂಶ ಪ್ರಕಟವಾಗಲಿದ್ದು, ಅದರ ನಂತರ ಸಂದರ್ಶನ ನಡೆಯಲಿದೆ. ಅಲ್ಲಿಯವರೆಗೆ ನಿರ್ದೇಶಕ ಹುದ್ದೆಯ ಆಕಾಂಕ್ಷಿಗಳು ಕಾಯಬೇಕಾಗಿದೆ.

ADVERTISEMENT

ನಿರ್ದೇಶಕರ ಹುದ್ದೆಗೆ ಸಲ್ಲಿಸಿದ ಅರ್ಜಿಗಳನ್ನು ಪರಿಶೀಲನೆ ಮಾಡಲು ಸರ್ಕಾರ ಉನ್ನತ ಮಟ್ಟದ ಆಯ್ಕೆ ಸಮಿತಿಯೊಂದನ್ನು ರಚಿಸಿದೆ. ಈ ಸಮಿತಿ 11 ಅರ್ಜಿಗಳಲ್ಲಿ ಐದು ಅರ್ಜಿಗಳನ್ನು ಅಂತಿಮಗೊಳಿಸಿ ಸರ್ಕಾರದ ಮುಖ್ಯಕಾರ್ಯದರ್ಶಿಗೆ ವರದಿ ಸಲ್ಲಿಸಲಿದೆ. ಆ ವರದಿ ಆಧಾರದ ಮೇಲೆ ವೈದ್ಯಕೀಯ ಸಚಿವರು, ಸರ್ಕಾರದ ಮುಖ್ಯ ಕಾರ್ಯದರ್ಶಿ, ವೈದ್ಯಕೀಯ ಮುಖ್ಯ ಕಾರ್ಯದರ್ಶಿ ಒಳಗೊಂಡ ತಂಡ ನಿರ್ದೇಶಕರ ಸಂದರ್ಶನ ನಡೆಸಲಿದೆ.

ಪ್ರಬಲ ಪೈಪೋಟಿ: ಪ್ರಭಾರ ನಿರ್ದೇಶಕರಾಗಿ ಸದ್ಯ ಕಾರ್ಯ ನಿರ್ವಹಿಸುತ್ತಿರುವ ಡಾ. ರಾಮಲಿಂಗಪ್ಪ ಅಂಟರತಾನಿ ಅವರಿಗೆ ಶರೀರಶಾಸ್ತ್ರ ವಿಭಾಗದ ಮುಖ್ಯಸ್ಥ ಕೆ.ಎಫ್‌. ಕಮ್ಮಾರ ಅವರು ಪ್ರಬಲ ಪೈಪೋಟಿ ನೀಡುತ್ತಿದ್ದಾರೆ. ಇವರಿಬ್ಬರಿಗೂ ಜೀವ ರಸಾಯನಶಾಸ್ತ್ರ ವಿಜ್ಞಾನ ವಿಭಾಗದ ಮುಖ್ಯಸ್ಥ ಎಂ.ಸಿ. ಚಂದ್ರು ಹಾಗೂ ಸರ್ಜರಿ ವಿಭಾಗದ ಮುಖ್ಯಸ್ಥ ಡಾ. ಗುರುಶಾಂತಪ್ಪ ಅವರು ಪ್ರತಿಸ್ಪರ್ಧಿಯಾಗಿದ್ದಾರೆ.

ರದ್ದಾಗಿತ್ತು: ಕಳೆದ ಜನವರಿಯಲ್ಲೂ ಕಿಮ್ಸ್‌ ನಿರ್ದೇಶಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿತ್ತು. ಆಗಲೂ 11 ಆಕಾಂಕ್ಷಿಗಳಿಂದ ಅರ್ಜಿ ಸಲ್ಲಿಕೆಯಾಗಿತ್ತು. 15 ದಿನದೊಳಗೆ ಆಯ್ಕೆ ಪ್ರಕ್ರಿಯೆ ಮುಕ್ತಾಯವಾಗಲಿದೆ ಎಂದು ತಿಳಿಸಲಾಗಿತ್ತು. ಆದರೆ, ಯಾವುದೇ ಕಾರಣ ನೀಡದೆ ಸರ್ಕಾರ ಆಯ್ಕೆಯನ್ನೇ ರದ್ದು ಪಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.