ADVERTISEMENT

ಹವಾಮಾನ, ಮಾರುಕಟ್ಟೆ ಮಾಹಿತಿಗೆ ‘ಕೃಷಿಧಾರೆ’ ಆ್ಯಪ್‌

ಮಳೆ ಮುನ್ಸೂಚನೆ, ಬೆಳೆ ನಿರ್ವಹಣೆ ವಿಧಾನ, ಮಾರುಕಟ್ಟೆ ಮಾಹಿತಿ ತಿಳಿಸುವ ತಂತ್ರಜ್ಞಾನ

ಬಿ.ಜೆ.ಧನ್ಯಪ್ರಸಾದ್
Published 22 ಸೆಪ್ಟೆಂಬರ್ 2025, 4:06 IST
Last Updated 22 ಸೆಪ್ಟೆಂಬರ್ 2025, 4:06 IST
ಕೃಷಿ ಧಾರೆ ಆ್ಯಪ್‌
ಕೃಷಿ ಧಾರೆ ಆ್ಯಪ್‌   

ಧಾರವಾಡ: ರೈತರಿಗೆ ಮಾರುಕಟ್ಟೆ ಬೆಲೆ ಮತ್ತು ಬೆಳೆ ಕುರಿತು ಹವಾಮಾನ ಆಧಾರಿತ ಮಾರ್ಗದರ್ಶನ ನೀಡುವ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ‘ಕೃಷಿ ಧಾರೆ’ ಆ್ಯಪ್‌ ಅಭಿವೃದ್ಧಿಪಡಿಸಲಾಗಿದೆ. ಈ ಆ್ಯಪ್‌ನಿಂದ ರೈತರು ಹವಾಮಾನ, ಕೀಟರೋಗ ಬಾಧೆ, ಮಾರುಕಟ್ಟೆ ಬೆಲೆ ಮಾಹಿತಿಯನ್ನು ಮುಂಚಿತವಾಗಿ ತಿಳಿದುಕೊಂಡು ಬೆಳೆ ನಿರ್ವಹಣೆ ಮಾಡಬಹುದು.

ಐಸಿಎಆರ್‌–ಎನ್‌ಎಎಸ್‌ಎಫ್‌ ಯೋಜನೆಯಡಿ ಧಾರವಾಡದ ಕೃಷಿ ವಿಶ್ವವಿದ್ಯಾಲಯ, ಕೊಯಮತ್ತೂರಿನ ತಮಿಳುನಾಡು ಕೃಷಿ ವಿ.ವಿ, ಧಾರವಾಡದ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಹಾಗೂ ಬೆಂಗಳೂರಿನ ‘ಅಟಾರೆ’(ಅಗ್ರಿಕಲ್ಚರ್‌ ಟೆಕ್ನಾಲಟಿ ಅಸೆಸ್‌ಮೆಂಟ್‌ ಅಂಡ್‌ ರಿಫೈನ್‌ಮೆಂಟ್‌ ಸೆಂಟರ್‌) ಸಂಸ್ಥೆಯವರು ‘ಕೃಷಿಧಾರೆ’ (ಹವಾಮಾನ ಮತ್ತು ಮಾರುಕಟ್ಟೆ ಆಧಾರಿತ ಕೃಷಿ ಎಕ್ಸ್‌ಪರ್ಟ್‌ ಸಿಸ್ಟಂ) ಅಭಿವೃದ್ಧಿಪಡಿಸಿದ್ದಾರೆ.

ಈಚೆಗೆ ನಡೆದ ಕೃಷಿಮೇಳದಲ್ಲಿ ಆ್ಯಪ್‌ ಬಿಡುಗಡೆಗೊಳಿಸಲಾಗಿದೆ. ಧಾರವಾಡ ತಾಲ್ಲೂಕಿನ ಗರಗ, ನವಲಗುಂದ ತಾಲ್ಲೂಕಿನ ಶಾನುವಾಡ, ಕುಂದಗೋಳ ತಾಲ್ಲೂಕಿನ ಸಂಶಿ ಮತ್ತು ಪಶುಪತಿಹಾಳ ಹಾಗೂ ವಿಜಯಪುರ ಜಿಲ್ಲೆಯ ಉತ್ನಾಳ ಮತ್ತು ಹಿಟ್ನಳ್ಳಿ ಗ್ರಾಮಗಳ ಒಟ್ಟು 320 ರೈತರು ಪ್ರಾಯೋಗಿಕವಾಗಿ ಈ ಆ್ಯಪ್‌ ಬಳಕೆ ಮಾಡುತ್ತಿದ್ದಾರೆ.

ADVERTISEMENT

‘ಹವಾಮಾನ ಮತ್ತು ಮಾರುಕಟ್ಟೆಯ ಸಮಗ್ರ ಮಾಹಿತಿ ರೈತರಿಗೆ ಲಭಿಸುವಂತೆ ಈ ಆ್ಯಪ್‌ ಅಭಿವೃದ್ಧಿಪಡಿಸಲಾಗಿದೆ. ಕನ್ನಡ ಮತ್ತು ಇಂಗ್ಲಿಷ್‌ ಭಾಷೆಗಳಲ್ಲಿ ಲಭ್ಯ ಇದೆ. ಆ್ಯಪ್‌ನಲ್ಲಿ ಮೊಬೈಲ್‌ ನಂಬರ್‌ ದಾಖಲಿಸಿ, ಪಾಸ್‌ವರ್ಡ್‌ ಸೆಟ್‌ ಮಾಡಿ ನೋಂದಾಯಿಸಿ ಲಾಗಿನ್‌ ಆಗಬೇಕು. ಮೊದಲ ಬಾರಿ ಲಾಗಿನ್‌ ಆದಾಗ ಹೋಮ್‌ ಪೇಜ್‌ನಲ್ಲಿ ಜಿಲ್ಲೆ, ಊರು, ಬೆಳೆ, ಜಮೀನಿನ ವಿಸ್ತೀರ್ಣ ಇತರ ವಿವರವನ್ನು ಪ್ರೊಫೈಲ್‌ನಲ್ಲಿ ನಮೂದಿಸಬೇಕು’ ಎಂದು ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ವಿಭಾಗದ ಮುಖ್ಯಸ್ಥ ಪ್ರೊ.ಎಸ್‌.ಎಸ್‌.ಡೊಳ್ಳಿ ತಿಳಿಸಿದರು.

‘ಮಳೆ ಐಕಾನ್‌ ಕ್ಲಿಕ್ಕಿಸಿದರೆ ಪೂರ್ತಿ ಹಂಗಾಮಿನ ಮುನ್ಸೂಚನೆ ವಿವರ ಪಡೆಯಬಹುದು, ರೋಗ ಐಕನ್‌ ಕ್ಲಿಕ್ಕಿಸಿದರೆ ಬೆಳೆಗೆ ಯಾವ ರೋಗ ತಗುಲಬಹುದು ಮತ್ತು ಯಾವ ಔಷಧ ಸಿಂಪಡಿಸಬೇಕು, ಕೀಡೆ ಐಕಾನ್‌ ಕ್ಲಿಕ್ಕಿಸಿದರೆ ಯಾವ ಕೀಟಬಾಧೆ ಕಾಡಲಿದೆ ಮತ್ತು ನಿವಾರಣೆಗೆ ಯಾವ ಕೀಟ ನಾಶಕ ಬಳಸಬೇಕು ಎಂಬ ಮಾಹಿತಿ ಲಭಿಸಲಿದೆ. ಮಾರುಕಟ್ಟೆ ವಿಭಾಗದಲ್ಲಿ ಬೆಳೆ (ಟೊಮೆಟೊ, ತೊಗರಿ...) ಮತ್ತು ದಿನಾಂಕ ನಮೂದಿಸಿ ಬೆಲೆ ತಿಳಿದುಕೊಳ್ಳಬಹುದು’ ಎಂದು ವಿವರ ನೀಡಿದರು.

‘ಬೆಳೆಗೆ ಯಾವುದೇ ರೋಗ ಬಾಧಿಸುತ್ತಿರುವುದು ಕಂಡುಬಂದರೆ ಬೆಳೆ ಮೇಲೆ ಫೋನ್‌ ಕ್ಯಾಮೆರಾದಲ್ಲಿ ಕ್ಲಿಕ್‌ ಮಾಡಿ ತಗುಲಿರುವ ರೋಗ ಮತ್ತು ನಿವಾರಣೆಗೆ ಬಳಸಬೇಕಾದ ಔಷಧ ಮಾಹಿತಿ ತಿಳಿದುಕೊಳ್ಳಬಹುದು. ಕೃಷಿ ವಿಧಾನ, ಬಿತ್ತನೆ, ಬೀಜ, ಗೊಬ್ಬರ, ಕಳೆ ನಿರ್ವಹಣೆ ಎಲ್ಲ ಮಾಹಿತಿ ಆ್ಯಪ್‌ನಲ್ಲಿ ಲಭಿಸುತ್ತದೆ’ ಎಂದು ತಿಳಿಸಿದರು.

ಮಾಹಿತಿಗಾಗಿ ಮೊ: 9845142796 ಸಂಪರ್ಕಿಸಬಹುದು. 

ತೊಗರಿ ಹತ್ತಿ ಟೊಮೆಟೊ ಹಾಗೂ ಶೇಂಗಾ ಬೆಳೆಗಳಿಗಾಗಿ ಸೀಮಿತವಾಗಿ ಈ ಆ್ಯಪ್‌ ಅಭಿವೃದ್ಧಿಪಡಿಸಲಾಗಿದೆ. ಎಲ್ಲ ಬೆಳೆಗಳಿಗೂ ವಿಸ್ತರಿಸಲು ಮತ್ತು ರಾಜ್ಯದ ಎಲ್ಲ ರೈತರಿಗೆ ತಲುಪಿಸಲು ಉದ್ದೇಶಿಸಲಾಗಿದೆ. ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ‘ಕೃಷಿಧಾರೆ’ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳಲು ಶೀಘ್ರ ವ್ಯವಸ್ಥೆ ಮಾಡಲಾಗುವುದು
ಪ್ರೊ.ಎಸ್‌.ಎಸ್‌.ಡೊಳ್ಳಿ ಮುಖ್ಯಸ್ಥ ವಿಸ್ತರಣಾ ವಿಭಾಗ ಕೃಷಿ ವಿ.ವಿ. ಧಾರವಾಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.