ADVERTISEMENT

ಇಸ್ಕಾನ್‌ನಲ್ಲಿ ಕೃಷ್ಣ ಜನ್ಮಾಷ್ಟಮಿ 24ರಿಂದ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2019, 10:05 IST
Last Updated 20 ಆಗಸ್ಟ್ 2019, 10:05 IST

ಹುಬ್ಬಳ್ಳಿ: ‘ರಾಯಾಪುರದಲ್ಲಿರುವ ಇಸ್ಕಾನ್‌ನಲ್ಲಿ ಕೃಷ್ಣ ಜನ್ಮಾಷ್ಟಮಿಯನ್ನು ಆಗಸ್ಟ್ 24 ಮತ್ತು 25ರಂದು ಅದ್ಧೂರಿಯಾಗಿ ಆಚರಿಸಲಾಗುವುದು’ ಎಂದು ಇಸ್ಕಾನ್ ಅಧ್ಯಕ್ಷ ರಾಜೀವ್ ಲೋಚನ ದಾಸ ಹೇಳಿದರು.

‘24ರಂದು ಬೆಳಿಗ್ಗೆಯಿಂದ ರಾತ್ರಿ 9ರವರೆಗೆ ಅರ್ಚನೆ ಮತ್ತು ಆರತಿ ನಿರಂತರವಾಗಿ ನಡೆಯಲಿದೆ. ಬೆಳಿಗ್ಗೆ 11ರಿಂದ ರಾತ್ರಿ 8.30ರವರೆಗೆ ಲಡ್ಡು ಗೋಪಾಲನಿಗೆ ತೊಟ್ಟಿಲೋತ್ಸವ, ವಿಶೇಷ ನೈವೇದ್ಯ ಹಾಗೂ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ರಾತ್ರಿ 9.30ರಿಂದ 12ರವರೆಗೆ ಮಹಾಭಿಷೇಕ ನೆರವೇರಲಿದೆ. ಜನ್ಮಾಷ್ಟಮಿ ನಿಮಿತ್ತ ಬೆಳಿಗ್ಗೆ 11ರಿಂದ ರಾತ್ರಿ 1.30ರವರೆಗೆ ಇಸ್ಕಾನ್‌ಗೆ ಬಸ್ ಸೇವೆ ಒದಗಿಸುವಂತೆ ವಾಯವ್ಯ ಸಾರಿಗೆ ಸಂಸ್ಥೆಗೆ ಮನವಿ ಮಾಡಿದ್ದೇವೆ’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘25ರಂದು ಎರಡರಿಂದ 10 ವರ್ಷದ ಮಕ್ಕಳಿಗಾಗಿ ರಾಧಾ–ಕೃಷ್ಣ ವೇಷಭೂಷಣ ಸ್ಪರ್ಧೆ ಏರ್ಪಡಿಸಲಾಗಿದೆ. ಬೆಳಿಗ್ಗೆ 10.30ರಿಂದ ಮಧ್ಯಾಹ್ನ 3ರವರೆಗೆ ಸ್ಪರ್ಧೆ ನಡೆಯಲಿದ್ದು, ಭಾಗವಹಿಸುವ ಎಲ್ಲಾ ಮಕ್ಕಳಿಗೂ ಆಕರ್ಷಕ ಉಡುಗೊರೆ ನೀಡಲಾಗುವುದು’ ಎಂದು ಹೇಳಿದರು.

ADVERTISEMENT

‘ಇದೇ ದಿನ ಇಸ್ಕಾನ್ ಸಂಸ್ಥಾಪಕರಾದ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರ 123ನೇ ಪ್ರಾಕಟ್ಯ ದಿನ ಆಚರಿಸಲಾಗುವುದು. ಭಕ್ತರು ತಮ್ಮ ಮನೆಗಳಿಂದ ತಯಾರಿಸಿ ತರುವ ಸುಮಾರು 400 ಭಕ್ಷ್ಯಗಳನ್ನು ಇಸ್ಕಾನ್ ಮಂದಿರದ ಸಾಂಸ್ಕೃತಿಕ ಭವನದಲ್ಲಿ ಪ್ರಭುಪಾದರ ನೈವೇದ್ಯಕ್ಕೆ ಇಡಲಾಗುವುದು’ ಎಂದು ತಿಳಿಸಿದರು.

ಇಸ್ಕಾನ್ ಉಪಾಧ್ಯಕ್ಷ ರಘೋತ್ತಮ ದಾಸ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.