
ಹುಬ್ಬಳ್ಳಿಯಲ್ಲಿನ ಕೆಎಸ್‌ಸಿಎ ಕ್ರೀಡಾಂಗಣದ ನೋಟ
ಹುಬ್ಬಳ್ಳಿ: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆಎಸ್‌ಸಿಎ) ಚುನಾವಣೆ ಘೋಷಣೆಯಾಗಿದ್ದು, ಸಂಸ್ಥೆಯ ಧಾರವಾಡ ವಲಯದ ನೂತನ ನಿಮಂತ್ರಕ ಯಾರಾಗಲಿದ್ಧಾರೆ ಎಂಬುದು ಕುತೂಹಲ ಮೂಡಿಸಿದೆ.
ಬ್ರಿಜೇಶ್ ಪಟೇಲ್ ತಂಡದಿಂದ ವೀರಣ್ಣ ಸವಡಿ, ವೆಂಕಟೇಶ ಪ್ರಸಾದ್ ಅವರ ತಂಡದಿಂದ ಅಹ್ಮದ್ ರಝಾ ಕಿತ್ತೂರು ಅವರು ಸ್ಪರ್ಧಿಸುವ ಸಾಧ್ಯತೆ ಇದೆ. ಯಾರೇ ಆಯ್ಕೆಯಾದರೂ ಮೊದಲ ಬಾರಿಗೆ ನಿಮಂತ್ರಕರಾಗಿ ಆಯ್ಕೆಯಾದಂತಾಗುತ್ತದೆ.
ಹಾಲಿ ಅಧ್ಯಕ್ಷ ನಿಖಿಲ್ ಭೂಸದ ಅವರ ಅವಧಿ ಸೆ.30ರಂದು ಕೊನೆಯಾಗಿದ್ದು, ಚುನಾವಣೆ ನಡೆದು ನೂತನ ನಿಮಂತ್ರಕರು ಆಯ್ಕೆಯಾಗುವವರೆಗೆ ಅವರು ಹಂಗಾಮಿ ನಿಮಂತ್ರಕರಾಗಿ ಮುಂದುವರಿಯಲಿದ್ದಾರೆ.
ವೀರಣ್ಣ ಸವಡಿ ಅವರು 2007ರಿಂದ ಧಾರವಾಡ ವಲಯದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್, ಅನಿಲ್ ಕುಂಬ್ಳೆ, ಬ್ರಿಜೇಶ್ ಪಟೇಲ್, ರೋಜರ್ ಬಿನ್ನಿ ಅವರು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಇವರು ಧಾರವಾಡ ವಲಯದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.
ಅಹ್ಮದ್ ರಝಾ ಕಿತ್ತೂರು ಅವರು ಕೆ– ಸ್ಟಾರ್ ಕ್ಲಬ್‌ನ ಹಾಲಿ ಅಧ್ಯಕ್ಷರಾಗಿದ್ದು, ಕೆಎಸ್‌ಸಿಎ ಧಾರವಾಡ ವಲಯ ಕಮಿಟಿ ಸದಸ್ಯರಾಗಿದ್ಧಾರೆ. ನಿಖಿಲ್ ಭೂಸದ ಅವರು ಅವಿರೋಧವಾಗಿ ಆಯ್ಕೆಯಾಗಿದ್ದರು.
ಮತ ಎಣಿಕೆ 30ಕ್ಕೆ: ನ.12ರಿಂದ 15ರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ಇದ್ದು, ನ.17ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂಪಡೆಯಲು ನ.19 ಅಂತಿಮ ದಿನವಾಗಿದ್ದು, ನ.30ರಂದು ಚುನಾವಣೆ ನಡೆಯಲಿದೆ. ಅಂದೇ ಮತ ಎಣಿಕೆಯೂ ನಡೆಯಲಿದೆ.
ಧಾರವಾಡ ವಲಯದಲ್ಲಿ ಹುಬ್ಬಳ್ಳಿಯ ಹುಬ್ಬಳ್ಳಿ ಸ್ಪೋರ್ಟ್ಸ್ ಕ್ಲಬ್, ಕೆ–ಸ್ಟಾರ್ ಕ್ಲಬ್, ಬಿಡಿಕೆ ಸ್ಪೋರ್ಟ್ಸ್ ಕ್ಲಬ್, ಧಾರವಾಡದ ಕ್ರಿಕೆಟ್ ಕ್ಲಬ್ ಆಫ್ ಕರ್ನಾಟಕ (ಸಿಸಿಕೆ), ಕಾಸ್ಮೋಸ್ ಕ್ರಿಕೆಟ್ ಕ್ಲಬ್, ಬೆಳಗಾವಿಯಲ್ಲಿ ಬೆಳಗಾವಿ ಸ್ಪೋರ್ಟ್ಸ್ ಕ್ಲಬ್, ಯೂನಿಯನ್ ಜಿಮ್ಖಾನ ಕ್ಲಬ್, ಗೋಕಾಕದಲ್ಲಿ ಗೋಕಾಕ ಸ್ಪೋರ್ಟ್ಸ್ ಕ್ಲಬ್‌ಗಳು ಸೇರಿ ಒಟ್ಟು ಎಂಟು ಇನ್‌ಸ್ಟಿಟೂಷನಲ್ ಮೆಂಬರ್ (ಐಎಂ) ಕ್ಲಬ್‌ಗಳು ಮತ್ತು ಆಜೀವ ಸದಸ್ಯ ಭರತ್ ಖಿಮ್ಜಿ ಅವರಿಗೆ ಮತದಾನದ ಹಕ್ಕು ಇದೆ.
ಚುನಾವಣೆಯಲ್ಲಿ 1,561 ಆಜೀವ ಸದಸ್ಯರು, ಐಎಂ ಕ್ಲಬ್‌ಗಳ 343 ಸೇರಿ ಒಟ್ಟು 1,904 ಮತದಾರರಿದ್ದಾರೆ. ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ, ಸಹಾಯಕ ಕಾರ್ಯದರ್ಶಿ, ಖಜಾಂಚಿ ಮತ್ತು ವ್ಯವಸ್ಥಾಪಕ ಸಮಿತಿ ಸದಸ್ಯರು ಸೇರಿ 16 ಸ್ಥಾನಗಳಿಗೆ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ.
‘ಕ್ರೀಡಾಂಗಣಗಳ ಅಭಿವೃದ್ಧಿಗೆ ಒತ್ತು’
‘ಕೆಎಸ್‌ಸಿಎ ಧಾರವಾಡ ವಲಯದ ನಿಮಂತ್ರಕ ಸ್ಥಾನಕ್ಕೆ ವೆಂಕಟೇಶ್ ಪ್ರಸಾದ್ ತಂಡದಿಂದ ನಾಮಪತ್ರ ಸಲ್ಲಿಸಲಿದ್ದೇನೆ. ಕೆ–ಸ್ಟಾರ್ ಕ್ಲಬ್ ಅಧ್ಯಕ್ಷನಾಗಿದ್ದೇನೆ. ಒಂದೆಡೆ ಕ್ರಿಕೆಟ್‌ನ ಜನಪ್ರಿಯತೆ ಹೆಚ್ಚುತ್ತಿದೆ. ಇನ್ನೊಂದೆಡೆ ಅದಕ್ಕೆ ತಕ್ಕಂತೆ ಚಟುವಟಿಕೆ ಯುವ ಕ್ರಿಕೆಟಿಗರಿಗೆ ಪ್ರೋತ್ಸಾಹ ಸಿಗುತ್ತಿಲ್ಲ. ಆಯ್ಕೆಯಾದರೆ ಎಲ್ಲ ಕ್ರೀಡಾಂಗಣಗಳನ್ನು ಅಭಿವೃದ್ಧಿಪಡಿಸಲು ಒತ್ತು ನೀಲಾಗುವುದು’ ಎಂದು ಅಹ್ಮದ್ ರಝಾ ಕಿತ್ತೂರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.