ಹುಬ್ಬಳ್ಳಿ: ‘ತವರು ಮನೆ ಸ್ವಲ್ಪ ಕೆಟ್ಟಿದೆ. ಅದು ಸರಿಯಾಗಬೇಕು ಎಂಬುದು ಅಲ್ಲಿಗೆ ಹೋಗಲು ಬಯಸುವ ಗೃಹಿಣಿಯ ಅಪೇಕ್ಷೆ. ಅಣ್ಣ– ತಮ್ಮ ಸರಿಯಾಗಿ ನಡೆದುಕೊಳ್ಳುತ್ತಿಲ್ಲ. ತಂದೆ, ತಾಯಿ ಇದನ್ನು ಗಮನಿಸಬೇಕು’ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
‘ವಾಪಸ್ ತವರು ಮನೆಗೆ (ಬಿಜೆಪಿ) ಹೋಗುತ್ತೀರಾ’ ಎಂಬ ಸುದ್ದಿಗಾರರ ಪ್ರಶ್ನೆಗೆ ಗುರುವಾರ ಹೀಗೆ ಪ್ರತಿಕ್ರಿಯಿಸಿದ ಅವರು, ‘ಲಕ್ಷಾಂತರ ಕಾರ್ಯಕರ್ತರು ಬೆವರು ಸುರಿಸಿ ಬಿಜೆಪಿ ಕಟ್ಟಿ, ಬೆಳೆಸಿದ್ದಾರೆ. ತವರಿನ ಕಾರ್ಯಕ್ರಮಕ್ಕೆ ಅಣ್ಣ ಕರೆದಿಲ್ಲ ಎಂಬ ಸಿಟ್ಟು ಇರುತ್ತದೆ. ಕಾಲ ಕೂಡಿ ಬಂದಾಗ ಎಲ್ಲವೂ ಸರಿಯಾಗುತ್ತದೆ’ ಎಂದರು.
‘ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 66 ಸ್ಥಾನಕ್ಕೆ ಕುಸಿದರೆ, ಲೋಕಸಭಾ ಚುನಾವಣೆಯಲ್ಲಿ 9 ಸ್ಥಾನ ಕಳೆದುಕೊಂಡಿತು. ಶಿವಮೊಗ್ಗದಲ್ಲಿ ಕೆಎಂಎಫ್, ಡಿಸಿಸಿ ಬ್ಯಾಂಕ್ ಕೈತಪ್ಪಿತು. ಇನ್ನೂ ಯಾವ ರೂಪದಲ್ಲಿ ಅವರಿಗೆ ಬುದ್ಧಿ ಬರಬೇಕು? ಅದಕ್ಕೆ ನಾನು ಬುದ್ಧಿ ಕಲಿಸುವ ಕೆಲಸ ಆರಂಭಿಸಿದ್ದೆ. ಯತ್ನಾಳ ಮತ್ತು ಅವರ ಸ್ನೇಹಿತರು ಅದನ್ನು ಮುಂದುವರಿಸಿದ್ದಾರೆ’ ಎಂದರು.
‘ರಾಜ್ಯದಲ್ಲಿ ಆರು ತಿಂಗಳು ಬಿಜೆಪಿ ಅಧ್ಯಕ್ಷ ಸ್ಥಾನ ಖಾಲಿ ಇತ್ತು. ಯಡಿಯೂರಪ್ಪ ಏನೋ ಮೋಡಿ ಮಾಡಿ ತಮ್ಮ ಮಗನನ್ನು ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಇದು ಬಹಳ ದಿನ ನಡೆಯಲ್ಲ. ಕುಟುಂಬ ರಾಜಕಾರಣ, ಸ್ವಜನ ಪಕ್ಷಪಾತ, ಹೊಂದಾಣಿಕೆ ರಾಜಕಾರಣ ಕೇಂದ್ರ, ರಾಜ್ಯದ ನಾಯಕರಿಗೆ ಅರ್ಥವಾಗಲಿ ಎಂದು ನಾನು ಚುನಾವಣೆಗೆ ಸ್ಪರ್ಧಿಸಿದೆ. ಯಡಿಯೂರಪ್ಪ ಬಿಟ್ಟರೆ ಬಿಜೆಪಿ ಇಲ್ಲ ಎಂಬ ಸ್ಥಿತಿ ನಿರ್ಮಾಣ ಮಾಡಿದ್ದಾರೆ. ಅದು ಹೋಗಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.