ADVERTISEMENT

ನಿವೃತ್ತಿ ಮೊತ್ತ ಬಿಡುಗಡೆಗೆ ನೌಕರರ ಆಗ್ರಹ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2020, 14:25 IST
Last Updated 27 ಸೆಪ್ಟೆಂಬರ್ 2020, 14:25 IST

ಹುಬ್ಬಳ್ಳಿ: ನಿವೃತ್ತ ಮೊತ್ತ ಬಿಡುಗಡೆಗೆ ಒತ್ತಾಯಿಸಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರಮೂಲಭೂತ ಹಕ್ಕುಗಳ ವಿಚಾರ ವೇದಿಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿದೆ.

‘ನಿವೃತ್ತಿಯಾಗಿ ಇಪ್ಪತ್ತೆರಡು ತಿಂಗಳಾಗುತ್ತಾ ಬಂದರೂ ನೌಕರರಿಗೆ ನಿವೃತ್ತಿ ಮೊತ್ತ ಸಿಕ್ಕಿಲ್ಲ. ಕೂಡಲೇ ಸರ್ಕಾರ ಮಧ್ಯಸ್ಥಿಕೆ ವಹಿಸಿ ಮೊತ್ತ ಬಿಡುಗಡೆ ಮಾಡಿ, ನಿವೃತ್ತ ನೌಕರರ ಸಂಧ್ಯಾಕಾಲದ ಬದುಕಿಗೆ ನೆರವಾಗಬೇಕು’ ಎಂದು ವೇದಿಕೆ ಅಧ್ಯಕ್ಷ ವೈ.ಎಂ. ಶಿವರಡ್ಡಿ ಒತ್ತಾಯಿಸಿದ್ದಾರೆ.

‘ಸರ್ಕಾರಗಳು ನೌಕರರ ಸಮಸ್ಯೆಗೆ ಇದುವರೆಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಉಳಿದ ನೌಕರರಿಗಿಂತ ಶೇ50ರಷ್ಟು ಕಡಿಮೆ ವೇತನ ಪಡೆಯುವ ನಮಗೆ, ಇತರ ಸರ್ಕಾರಿ ಸೌಲಭ್ಯಗಳು ಹಾಗೂ ಪಿಂಚಣಿ ಇಲ್ಲ. ನಿವೃತ್ತರು ನಿವೃತ್ತಿ ನಂತರದ ಮೊತ್ತಗಳನ್ನು ಪಡೆದುಕೊಳ್ಳಲು ಪರದಾಡುತ್ತಿದ್ದಾರೆ. ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಸರ್ಕಾರವೂ ಕಣ್ಣು ತೆರೆಯುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಸರ್ಕಾರಕ್ಕೆ ಸಾರಿಗೆ ನೌಕರರೆಂದರೆ ’ಆಟಕ್ಕುಂಟು ಲೆಕ್ಕಕ್ಕಿಲ್ಲ’ ಎಂಬಂತಾಗಿದೆ. ಇದೀಗ, ನಿವೃತ್ತಿ ಪಾವತಿ ವಿಳಂಬವಾಗಿರುವುದರಿಂದ ನಮ್ಮ ಬದುಕು ಬೆಂಕಿಯಿಂದ ಬಾಣಲೆಗೆ ಬಿದ್ದಂತಾಗಿದೆ. ಕಚೇರಿಗಳಿಗೆ ಅಲೆದು ಸಾಕಾಗಿದೆ. ಈಗಲಾದರೂ ನಮ್ಮ ಬೇಡಿಕೆಗೆ ಸ್ಪಂದಿಸಿ’ ಎಂದು ಸಂಘದ ಉಪಾಧ್ಯಕ್ಷ ರಫೀಕ ಅಹಮದ ನಾಗನೂರ, ಕೋಶಾಧ್ಯಕ್ಷ ಆರ್‌.ಜಿ. ಮೊರೆ ಹಾಗೂ ಪ್ರಧಾನ ಕಾರ್ಯದರ್ಶಿ ತಿಪ್ಪೇಶ್ವರ ಅಣಜಿಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.