ADVERTISEMENT

ಪ್ರಯೋಗಾಲಯದ ಸಂಶೋಧನೆ ರೈತರ ಅಂಗಳಕ್ಕೆ...

‘ಸ್ನೇಹ ತಂಡ’ದಿಂದ ರೈತರಿಗೆ ಮಾಹಿತಿಯ ಮಹಾಪೂರ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2022, 1:42 IST
Last Updated 20 ಸೆಪ್ಟೆಂಬರ್ 2022, 1:42 IST
ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಸ್ನೇಹತಂಡದ ವಿದ್ಯಾರ್ಥಿಗಳು ಆವಿಷ್ಕಾರ ಮಾಡಿರುವ ಮಂಗಗಳ ಕಾಟಕ್ಕೊಂದು ಶಬ್ದ ಬಾಣ ಎಂಬ ಸಾಧನದ ಪ್ರಾತ್ಯಕ್ಷಿಕೆ ನೀಡುತ್ತಿರುವ ವಿದ್ಯಾರ್ಥಿ
ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಸ್ನೇಹತಂಡದ ವಿದ್ಯಾರ್ಥಿಗಳು ಆವಿಷ್ಕಾರ ಮಾಡಿರುವ ಮಂಗಗಳ ಕಾಟಕ್ಕೊಂದು ಶಬ್ದ ಬಾಣ ಎಂಬ ಸಾಧನದ ಪ್ರಾತ್ಯಕ್ಷಿಕೆ ನೀಡುತ್ತಿರುವ ವಿದ್ಯಾರ್ಥಿ   

ಧಾರವಾಡ: ಕೃಷಿ ವಿದ್ಯಾರ್ಥಿಗಳು ಪ್ರಯೋಗಾಲಯದಲ್ಲಿ ಮಾಡುವ ಸಂಶೋಧನೆಗಳು ಹಾಗೂ ಆವಿಷ್ಕಾರಗಳು ರೈತರನ್ನು ತಲುಪಬೇಕು. ಆಗ ಮಾತ್ರ ಸಂಶೋಧನೆಗೆ ಅರ್ಥ ಎಂಬ ಮಾತಿದೆ. ಇದನ್ನು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಬಿಎಸ್ಸಿ ಅಗ್ರಿಕಲ್ಚರ್‌ ಮತ್ತು ಬಿಎಸ್ಸಿ ಮಾರ್ಕೆಟಿಂಗ್‌ನ ವಿದ್ಯಾರ್ಥಿಗಳು ಸಾಕಾರ ಮಾಡುತ್ತಿದ್ದಾರೆ.

ವಿ.ವಿಯ ಎರಡೂ ವಿಭಾಗದ 2ನೇ ಮತ್ತು 4ನೇ ವರ್ಷದ ತಲಾ 20 ವಿದ್ಯಾರ್ಥಿಗಳು ‘ಸ್ನೇಹತಂಡ’ ಬಳಗದ ಮೂಲಕ ಹೊಸ ಆವಿಷ್ಕಾರಗಳನ್ನು ರೈತರಿಗೆ ಪರಿಚಯಿಸುತ್ತಿದ್ದಾರೆ. ಈ ಬಾರಿಯ ಕೃಷಿ ಮೇಳದಲ್ಲಿ ಮಂಗಗಳನ್ನು ಶಬ್ದದ ಮೂಲಕ ಓಡಿಸುವ ಸಾಧನ, ಈರುಳ್ಳಿ ಎಲೆಗಳನ್ನು ಕತ್ತರಿಸುವ ಸಾಧನ, ತರಕಾರಿ ತೊಳೆಯುವ ಯಂತ್ರ ಹಾಗೂ ಸೈಕಲ್‌ ಚಾಲಿತ ನೀರೆತ್ತುವ ಸಾಧನಗಳು ಆಕರ್ಷಣೆಯ ಕೇಂದ್ರ ಬಿಂದುವಾಗಿವೆ.

ಕಡಿಮೆ ವೆಚ್ಚ ಹೆಚ್ಚು ಲಾಭ: ಮೋಟರ್ ಪಂಪ್‌ ಹಾಗೂ ಸೈಕಲ್‌ ಬಿಡಿಭಾಗಗಳನ್ನು ಬಳಸಿ ನೀರೆತ್ತುವ ಸಾಧನ ಅಭಿವೃದ್ಧಿಪಡಿಸಲಾಗಿದೆ. ಈ ಸಾಧನದಿಂದ ನೂರು ಮೀಟರ್‌ವರೆಗೆ ಯಾವುದೇ ಜಾಗದಿಂದಾದರೂ ನೀರು ಸರಬರಾಜು ಮಾಡಬಹುದು. ಯಾವುದೇ ಇಂಧನ ಸಹಾಯವಿಲ್ಲದೆ ಈ ಯಂತ್ರ ಕಾರ್ಯನಿರ್ವಹಿಸುತ್ತದೆ. ಅಲ್ಲದೇ ಇದನ್ನು ಬಳಸುವುದರಿಂದ ವ್ಯಾಯಾಮವೂ ಆಗುತ್ತದೆ. ಇದೇ ರೀತಿ ಸೈಕಲ್‌ ಬಿಡಿಭಾಗ ಹಾಗೂ ಟಯರ್‌ಗಳಿಂದ ತರಕಾರಿ ತೊಳೆಯುವ ಸಾಧನವನ್ನೂ ಆವಿಷ್ಕಾರ ಮಾಡಲಾಗಿದೆ.

ADVERTISEMENT

ಮಂಗಗಳ ಓಡಿಸಲು ಶಬ್ದಬಾಣ: ಮಂಗಗಳ ಕಾಟದಿಂದ ತಪ್ಪಿಸಿಕೊಳ್ಳಲು ‘ಮಂಗಗಳ ಕಾಟಕ್ಕೊಂದು ಶಬ್ದ ಬಾಣ’ ಎನ್ನುವ ಸಾಧನ ಪರಿಚಯಿಸಲಾಗಿದೆ. ಕಡಿಮೆ ವೆಚ್ಚದಲ್ಲಿ ಈ ಎಲ್ಲ ಸಾಧನಗಳನ್ನು ರೈತರೇ ಮಾಡಿಕೊಳ್ಳಬಹುದಾಗಿದೆ. ವಿದ್ಯಾರ್ಥಿಗಳು ಪರಿಚಯಿಸಿರುವ ಆವಿಷ್ಕಾರಗಳ ಬಳಕೆ, ಅದರ ಲಾಭ ಮತ್ತು ಯಾವೆಲ್ಲ ಸಾಧನಗಳನ್ನು ಬಳಸಬೇಕು ಎನ್ನುವುದರ ಕುರಿತು ವಿದ್ಯಾರ್ಥಿಗಳು ‘ಕೃಷಿ ತಾಂತ್ರಿಕತೆಗಳ ಬತ್ತಳಕೆ’ ಎನ್ನುವ ಪುಸ್ತಕವನ್ನು ಪ್ರಕಟಿಸಿದ್ದು, ₹20ಕ್ಕೆ ಮಾರಾಟ ಮಾಡಲಾಗುತ್ತಿದೆ.

ಮಾರ್ಗದರ್ಶನ: ‘ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ಪ್ರಯೋಗಾಲಯದಲ್ಲಿ ನಡೆಯುವ ಸಂಶೋಧನೆಗಳನ್ನು ರೈತರಿಗೆ ತಲುಪಿಸಬೇಕು ಎನ್ನುವ ಉದ್ದೇಶದಿಂದ 2004ರಲ್ಲಿ ಪ್ರಾರಂಭಿಸಿದ ತಂಡವನ್ನು ಮುಂದುವರಿಸಿಕೊಂಡು ಬಂದಿದ್ದೇವೆ’ ಎಂದು ಸ್ನೇಹ ತಂಡದ ರಾಮರಡ್ಡಿ ಮಾಡಳ್ಳಿ ಹೇಳಿದರು.

‘ನಮ್ಮ ಪ್ರಯತ್ನಕ್ಕೆ ಉಪನ್ಯಾಸಕರು ಹಾಗೂ ವಿ.ವಿಯ ಕುಲಪತಿ ಡಾ.ಆರ್‌.ಬಸವರಾಜಪ್ಪ ಅವರುಸೇರಿದಂತೆ ಹಲವರು ಸಹಕಾರ ಹಾಗೂ ಪ್ರೋತ್ಸಾಹ ನೀಡಿದ್ದಾರೆ’ ಎಂದರು.

ರೈತರಿಗೆ ಮಾಹಿತಿ:ಕೃಷಿ ಮೇಳಕ್ಕೆ ಬರುವ ರೈತರಿಗೆಸ್ನೇಹ ತಂಡದ ಸದಸ್ಯರು ಜಾನುವಾರುಗಳನ್ನು ಕಾಡುತ್ತಿರುವ ಚರ್ಮ ಗಂಟು ರೋಗದ ಬಗ್ಗೆ ಹಾಗೂ ಎಮ್ಮೆಗಳಲ್ಲಿ ಕಾಣಿಸಿಕೊಳ್ಳುವ ಸಾಂಕ್ರಾಮಿಕ ಬೋವೈನ್‌ ರೈನೋಟ್ರಾಕೈಟಿಸ್‌ ಎಂಬ ವೈರಾಣು ಸೇರಿದಂತೆ ವಿವಿಧ ರೋಗಗಳನ್ನು ತಡೆಯುವ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಇದರೊಂದಿಗೆ ಉತ್ತಮ ಇಳುವರಿ ಪಡೆಯುವುದು ಹಾಗೂ ಇಳುವರಿಯ ಸಂರಕ್ಷಣೆಯ ಕುರಿತು ಸಹ ಮಾಹಿತಿ ನೀಡುತ್ತಿರುವುದು ವಿಶೇಷವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.