ಉಪ್ಪಿನಬೆಟಗೇರಿ: ಗ್ರಾಮ ಪಂಚಾಯಿತಿ ಕೇಂದ್ರವಾಗಿರುವ ಉಪ್ಪಿನಬೆಟಗೇರಿಯು ಅಗತ್ಯ ಮೂಲಸೌಕರ್ಯಗಳಿಂದ ವಂಚಿತವಾಗಿದೆ. ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆಯಾಗದೆ ಜನರು ಪರದಾಡುವಂತಾಗಿದೆ.
ಜಲಜೀವನ್ ಮಿಷನ್ ಯೋಜನೆಯಡಿ ಪೈಪ್‌ಲೈನ್ ಅಳವಡಿಸಿ ಮಲಪ್ರಭಾ ನೀರು ಪೂರೈಸಲಾಗುತ್ತದೆ. ಆದರೆ, ಗ್ರಾಮದ 6ನೇ ವಾರ್ಡ್‌ನ ಕಿತ್ತೂರಾರ ಓಣಿ ಸೇರಿದಂತೆ ವಿವಿಧೆಡೆ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ.
ಓಣಿಯಲ್ಲಿ ಅಳವಡಿಸಲಾಗಿರುವ ಮುಖ್ಯ ಪೈಪ್‌ಗೆ 80ಕ್ಕೂ ಹೆಚ್ಚು ನಳಗಳನ್ನು ಅಳವಾಡಿಸಲಾಗಿದೆ. ಇದರಿಂದ ಎಲ್ಲರಿಗೂ ಸಮರ್ಪಕ ನೀರು ಸಿಗುತ್ತಿಲ್ಲ. ಈ ಕುರಿತು ಪಂಚಾಯಿತಿ ಅಧಿಕಾರಿಗಳಿಗೆ ತಿಳಿಸಿದರೆ, ‘ಕಾಮಗರಿ ಪ್ರಗತಿಯಲ್ಲಿದ್ದು, ಸರಿಪಡಿಸುತ್ತೇವೆ’ ಎನ್ನುತ್ತಾ ದಿನ ದೂಡುತ್ತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮದ ವಿವಿಧೆಡೆ ಜಾನುವಾರುಗಳಿಗೆ ಕುಡಿಯುವ ನೀರು ಸಂಗ್ರಹಿಸಲು ಟ್ಯಾಂಕ್ ಇದ್ದು, ಅದು ಪಾಚಿಗಟ್ಟಿ ಸ್ವಚ್ಚತೆ ಇಲ್ಲದಂತಾಗಿದೆ. ಕುಡಿಯುವ ನೀರಿನ ಟ್ಯಾಂಕ್ ಸುತ್ತಲೂ ಸ್ವಚ್ಛತೆ ಮಾಯವಾಗಿದೆ. ನೀರಿಗಾಗಿ ಕೊಡ ಹಿಡಿದು ಗಂಟೆಗಟ್ಟಲೇ ಕಾಯಬೇಕು. ಅಷ್ಟಾದರೂ ಅಲ್ಪ ಪ್ರಮಾಣದಲ್ಲಿ ನೀರು ಬರುತ್ತದೆ. ವಾರ್ಡ್ ಸದಸ್ಯರು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ನಿವಾಸಿ ರವೀಂದ್ರ ಅಷ್ಟೇಕರ ದೂರಿದರು.
ಗ್ರಾಮದ ಮೂರಕಲ್ಲ ಅಗಸಿ ಬಳಿ ಇರುವ ಬಸ್ ತಂಗುದಾಣ ಮದ್ಯವ್ಯಸನಿಗಳ ತಾಣವಾಗಿದೆ. ಎಲ್ಲೆಂದರಲ್ಲಿ ಮದ್ಯದ ಬಾಟಲಿಗಳನ್ನು ಎಸೆಯಲಾಗಿದ್ದು, ಪ್ರಯಾಣಿಕರು ತಂಗುದಾಣದ ಬದಲು ರಸ್ತೆಯಲ್ಲಿ ನಿಂತು ಬಸ್‌ಗಾಗಿ ಕಾಯುವ ಸ್ಥಿತಿ ನಿರ್ಮಾಣವಾಗಿದೆ.
‘ಬಸ್ ತಂಗುದಾಣ ಸೇರಿದಂತೆ ಮಾರ್ಕೆಟ್ ರಸ್ತೆಯ ಚರಂಡಿಯಲ್ಲಿ ತ್ಯಾಜ್ಯ ಸಂಗ್ರಹವಾಗಿತ್ತು. ಈಚೆಗೆ ಸುರಿದ ಮಳೆಗೆ ಕೊಳಚೆ ನೀರು ಮನೆಗೆ ನುಗ್ಗಿತ್ತು. ರಸ್ತೆ ಮೇಲೆ ತ್ಯಾಜ್ಯ ಸಂಗ್ರಹವಾಗಿತ್ತು. ಮಳೆಗಾಲ ಆರಂಭಕ್ಕೂ ಮುನ್ನವೇ ಸಂಬಂಧಪಟ್ಟವರು ಚರಂಡಿ ಸ್ವಚ್ಛಗೊಳಿಸಬೇಕು’ ಎಂದು ನಿವಾಸಿ ಧರಣೇಂದ್ರ ಅಷ್ಟಗಿ ಆಗ್ರಹಿಸಿದರು.
ರಸ್ತೆ ಕಾಮಗಾರಿ ಕಳಪೆ; ಆರೋಪ: ಗ್ರಾಮದಿಂದ ಶಾಪುರ ಮಾರ್ಗವಾಗಿ ಹೊಲಗಳಿಗೆ ತೆರಳುವ ರಸ್ತೆಯನ್ನು ಈಚೆಗೆ ನಿರ್ಮಾಣ ಮಾಡಲಾಗಿದೆ. ಕಾಮಗಾರಿ ಕಳಪೆಯಾಗಿದ್ದು, ಈ ಬಗ್ಗೆ ಸಂಬಂಧಿಸಿದವರನ್ನು ಕೇಳಿದರೆ ಸಮಪರ್ಕ ಉತ್ತರ ನೀಡಲಿಲ್ಲ. ಈ ಬಗ್ಗೆ ಅಧಿಕಾರಿಗಳು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂಬುದು ರೈತ ಬಸವರಾಜ ಬಿಸ್ನಾಳ ಅವರ ಒತ್ತಾಯ.
ಸ್ವಚ್ಛತೆ ಕುಡಿಯುವ ನೀರು ಸೇರಿದಂತೆ ಗ್ರಾಮದಲ್ಲಿನ ಸಮಸ್ಯೆಗಳನ್ನು ಹಂತ ಹಂತವಾಗಿ ಪರಿಹರಿಸಲಾಗುವುದು.
-ಬಿ.ಎ.ಬಾವಾಕಾನವರ ಪಿಡಿಒ ಉಪ್ಪಿನಬೆಟಗೇರಿ ಗ್ರಾಮ ಪಂಚಾಯಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.