ಹುಬ್ಬಳ್ಳಿ: ರಾಜ್ಯದ ವಿವಿಧೆಡೆ ಉತ್ತಮ ಮಳೆಯಾಗುತ್ತಿದ್ದು, ಕೆರೆಗಳು ಬಹುತೇಕ ಭರ್ತಿಯಾಗಿವೆ. ಆದರೆ, ಅವುಗಳ ಸಮೀಕ್ಷೆ ಮತ್ತು ಒತ್ತುವರಿ ತೆರವು ಕಾರ್ಯ ಮಾತ್ರ ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ.
ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಅಭಿವೃದ್ಧಿ, ಕಟ್ಟಡ ನಿರ್ಮಾಣ, ವಸತಿ ಸೌಲಭ್ಯಕ್ಕಾಗಿ ಕೆರೆಗಳನ್ನು ಒತ್ತುವರಿ ಮಾಡಲಾಗಿದೆ. ಕೆಲ ಕಡೆ ಬರಿದಾದ ಕೆರೆಯಂಗಳದ ಸುತ್ತಲೂ ಬೇಲಿ ಹಾಕಿ, ಒತ್ತುವರಿ ಮಾಡಿಕೊಳ್ಳಲಾಗಿದೆ.
ರಾಜ್ಯದಲ್ಲಿ ಈವರೆಗೆ 30,244 ಕೆರೆಗಳ ಸಮೀಕ್ಷೆ ನಡೆದಿದ್ದು, 10,931 ಕೆರೆಗಳು ಒತ್ತುವರಿ ಆಗಿರುವುದು ಪತ್ತೆಯಾಗಿದೆ. ಅವುಗಳಲ್ಲಿ 6,065 ಕೆರೆಗಳ ಒತ್ತುವರಿ ಮಾತ್ರ ತೆರವುಗೊಳಿಸಲಾಗಿದೆ. ಇನ್ನೂ 4,866 ಕೆರೆಗಳ ಒತ್ತುವರಿ ತೆರವು ಆಗಬೇಕಿದೆ. ಇವೆಲ್ಲದರ ಮಧ್ಯೆ 10,754 ಕೆರೆಗಳ 2,23,344 ಎಕರೆ ಜಾಗದ ಸಮೀಕ್ಷೆ ಆಗುವುದು ಇನ್ನೂ ಬಾಕಿ ಇದೆ.
ಧಾರವಾಡ ಜಿಲ್ಲೆಯಲ್ಲಿ 1,261 ಕೆರೆಗಳಿವೆ. ಜಿಲ್ಲೆಯಲ್ಲಿಯೂ ಕೆರೆಗಳ ಒತ್ತುವರಿ ಹಾವಳಿ ತಪ್ಪಿಲ್ಲ. 127 ಕೆರೆಗಳ 190ಕ್ಕೂ ಹೆಚ್ಚು ಎಕರೆ ಪ್ರದೇಶ ಒತ್ತುವರಿ ಆಗಿದೆ. ಅವುಗಳಲ್ಲಿ 76 ಕೆರೆಗಳ 91 ಎಕರೆ ಪ್ರದೇಶವನ್ನು ಒತ್ತುವರಿ ಮುಕ್ತಗೊಳಿಸಲಾಗಿದೆ. ಇನ್ನೂ 51 ಕೆರೆಗಳ 109 ಎಕರೆ ಪ್ರದೇಶ ಅತಿಕ್ರಮಣಕಾರರ ವಶದಲ್ಲಿದ್ದು, ತೆರವುಗೊಳಿಸಬೇಕಿದೆ.
‘ಸಂಬಂಧಪಟ್ಟ ಇಲಾಖೆಗಳ ನಡುವೆ ಸಮನ್ವಯ ಕೊರತೆಯಿದ್ದು, ಕೆರೆಗಳ ಒತ್ತುವರಿ ತೆರವಿಗೆ ಹಿನ್ನಡೆ ಆಗಿದೆ. ಕೆರೆ ಒತ್ತುವರಿ ಮಾಡಿದವರಲ್ಲಿ ಪ್ರಭಾವಿಗಳು ಇದ್ದಾರೆ. ಅವರು ಒತ್ತುವರಿ ತೆರವು ಮಾಡಿಸದಂತೆ ಜನಪ್ರತಿನಿಧಿಗಳು, ಅಧಿಕಾರಿಗಳ ಮೇಲೆ ಒತ್ತಡ ತರುತ್ತಾರೆ’ ಎಂದು ರೈತ ಮುಖಂಡ ಶಂಕರಪ್ಪ ಅಂಬಲಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಕೆರೆ ಜಾಗ ಒತ್ತುವರಿ ತೆರವಿಗೆ ಸರ್ಕಾರ ವಿಶೇಷ ಕಾರ್ಯಪಡೆ ರಚಿಸಬೇಕು. ಸಮರ್ಪಕವಾಗಿ ಕೆರೆಗಳ ಜಾಗದ ಸರ್ವೆ ಮಾಡಬೇಕು. ಮಳೆ ನೀರು ಸರಾಗವಾಗಿ ಕೆರೆಗೆ ಹರಿದು ಬರುವಂತೆ ವ್ಯವಸ್ಥೆ ಮಾಡಬೇಕು. ಈ ಬಗ್ಗೆ ಸರಿಯಾಗಿ ಕಾರ್ಯನಿರ್ವಹಿಸದ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು’ ಎಂದರು.
ಕೆರೆಗಳ ಸಂರಕ್ಷಣೆಗೆ ಕಂದಾಯ ಇಲಾಖೆ ಸಹಯೋಗದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಜಿಲ್ಲಾ ಕೆರೆ ಸಂರಕ್ಷಣಾ ಸಮಿತಿ ರಚಿಸಲಾಗಿದೆ. ಒತ್ತುವರಿದಾರರು ಎಷ್ಟೇ ಪ್ರಭಾವಿಗಳಾಗಿದ್ದರೂ ತೆರವು ಮಾಡಿಸುತ್ತೇವೆ
–ಎನ್.ಎಸ್. ಬೋಸರಾಜು ಸಣ್ಣ ನೀರಾವರಿ ಸಚಿವ
ಧಾರವಾಡ ಜಿಲ್ಲೆಯಲ್ಲಿನ ಕೆರೆಗಳನ್ನು ಸರ್ವೆ ಮಾಡಿಸಿ ಒತ್ತುವರಿಯಾದ ಕೆರೆಗಳನ್ನು ಗುರುತಿಸಲಾಗಿದೆ. ಈಗಾಗಲೇ 76 ಕೆರೆಗಳ ಒತ್ತುವರಿ ತೆರವು ಮಾಡಲಾಗಿದ್ದು ಶೀಘ್ರ ಸಂಪೂರ್ಣವಾಗಿ ಒತ್ತುವರಿ ತೆರವುಗೊಳಿಸಲಾಗುವುದು
–ದಿವ್ಯಪ್ರಭು ಜಿಲ್ಲಾಧಿಕಾರಿ
ಅಂಕಿ–ಅಂಶ 40998 ರಾಜ್ಯದಲ್ಲಿರುವ ಒಟ್ಟು ಕೆರೆಗಳು 763832 ಕೆರೆಗಳ ಒಟ್ಟು ವಿಸ್ತೀರ್ಣ (ಎಕರೆ) 10931 ಒತ್ತುವರಿಯಾದ ಕೆರೆಗಳು 4866 ಒತ್ತುವರಿ ತೆರವು ಬಾಕಿ ಇರುವ ಕೆರೆಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.