ADVERTISEMENT

ಸಡಗರ, ಸಂಭ್ರಮದ ಲಕ್ಷ್ಮಿದೇವಿ ಜಾತ್ರೆ

ಬೆಣಚಿ: 15 ವರ್ಷದ ನಂತರ ನಡೆದ ಗ್ರಾಮದೇವಿ ಜಾತ್ರೆ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2025, 15:56 IST
Last Updated 18 ಏಪ್ರಿಲ್ 2025, 15:56 IST
ಅಳ್ನಾವರ ಸಮೀಪದ ಬೆಣಚಿ ಗ್ರಾಮದೇವಿ ಜಾತ್ರೆಯ ಭವ್ಯ ರಥೋತ್ವದ ಭಕ್ತರ ಹರ್ಷೋದ್ಘಾರದ ಮಧ್ಯೆ ಸಡಗರದಿಂದ ನಡೆಯಿತು 
ಅಳ್ನಾವರ ಸಮೀಪದ ಬೆಣಚಿ ಗ್ರಾಮದೇವಿ ಜಾತ್ರೆಯ ಭವ್ಯ ರಥೋತ್ವದ ಭಕ್ತರ ಹರ್ಷೋದ್ಘಾರದ ಮಧ್ಯೆ ಸಡಗರದಿಂದ ನಡೆಯಿತು    

ಪ್ರಜಾವಾಣಿ ವಾರ್ತೆ

ಅಳ್ನಾವರ: ತಾಲ್ಲೂಕಿನ ಬೆಣಚಿ ಗ್ರಾಮದಲ್ಲಿ ಹದಿನೈದು ವರ್ಷಗಳ ನಂತರ ನಡೆದ ಗ್ರಾಮದೇವಿ ಜಾತ್ರಾ ಉತ್ಸವದಲ್ಲಿ ಕಳೆದ ಎರಡು ದಿನ ಹೊನ್ನಾಟ ನಡೆದಿತ್ತು. ಮುಖ್ಯ ಘಟ್ಟ ರಥೋತ್ಸವ ಸಹಸ್ರಾರು ಭಕ್ತರ ಹರ್ಷೋದ್ಘಾರದ ಮಧ್ಯೆ ಶುಕ್ರವಾರ ವಿಜೃಂಭಣೆಯಿಂದ ಜರುಗಿತು. ಲಕ್ಷ್ಮಿ ಮಾತಾ ಕೀ ಜೈ ಜಯಘೋಷಗಳು ಮುಗಿಲ ಮುಟ್ಟಿದ್ದವು.

ಭವ್ಯ ರಥದಲ್ಲಿ ವಿರಾಜಮಾನಳಾದ ಶಾಂತ ಸ್ವರೂಪಿಣಿ ಲಕ್ಷ್ಮಿದೇವಿ ತೇರು ಮಧ್ಯಾಹ್ನ ದೇವಸ್ಥಾನದಿಂದ ಹೊರಟು ಗ್ರಾಮದ ಮುಖ್ಯಬೀದಿಯಲ್ಲಿ ಸಾಗಿತು. ಹೊನ್ನಾಟದಿಂದ ರಸ್ತೆಗಳು ಹಳದಿ ಬಣ್ಣದ ಬಂಢಾರಮಯವಾಗಿದ್ದವು. ರಥಕ್ಕೆ ಗುಲಾಬಿ ಹೂವಿನ ಬೃಹತ್ ಹೂಮಾಲೆ ಹಾಕಲಾಗಿತ್ತು. ನಿಧಾನವಾಗಿ ತೇರು ಸಾಗುತ್ತಿದ್ದಂತೆ ಆಯೋಜಕರು ಧ್ವನಿ ವರ್ಧಕದಲ್ಲಿ ತೇರು ಯಾವ ದಿಕ್ಕಿಗೆ ಎಳೆಯಬೇಕು ಎಂದು ತಿಳಿಸುತ್ತಿದ್ದರು. ತೇರಿನ ಪ್ರತಿ ಅಂಕಣಕ್ಕೆ ಧರ್ಮದ ಧ್ವಜ ಹಾಕಲಾಗಿತ್ತು. ರಥದ ಜೊತೆಗೆ ಜೋಗುತಿಯರು ಕೈಯಲ್ಲಿ ಚಾಮರ ಹಿಡಿದು ಉಘೇ..ಉಘೇ.. ಹೇಳುತ್ತಾ ಸಾಗಿ ಭಕ್ತಿ ಲೋಕ ಸೃಷ್ಟಿದ್ದರು.

ADVERTISEMENT

ಡೋಲ ತಾಸೆ, ಡೊಳ್ಳು ಕುಣಿತ, ಜಗ್ಗಲಗಿ ಮೇಳ ಮುಂತಾದ ಕಲೆಗಳು ಜಾತ್ರೆಗೆ ವಿಶೇಷ ಮೆರಗು ತಂದಿದ್ದವು. ಸಂಜೆ ಹೊತ್ತಿಗೆ ಗ್ರಾಮದ ಹೊರ ವಲಯದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ನಿರ್ಮಿಸಿರುವ ಬೃಹತ್ ಮಂಟಪದಲ್ಲಿ ದೇವಿಯನ್ನು ಪ್ರತಿಷ್ಠಾಪಿಸಿ ಭಕ್ತರ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು.

ಬಿಸಿಲಿನಿಂದ ರಸ್ತೆಗಳು ಸುಡುತ್ತಿದ್ದವು. ಬರಿಗಾಲಿನಲ್ಲಿ ಭಕ್ತರು ರಥ ಏಳೆದರು. ರಸ್ತೆ ತಂಪಾಗಿಸಲು ನೀರು ಸುರಿಯಲಾಗುತ್ತಿತ್ತು. ರಥ ಸಾಗುವ ಬೀದಿಯಲ್ಲಿನ ವಿದ್ಯುತ್ ಸಂಪರ್ಕ ಕಡಿತ ಮಾಡಿ, ರಥ ಸಾಗಿದ ನಂತರ ಅದನ್ನು ಮರು ಜೋಡಿಸುವಲ್ಲಿ ಹೆಸ್ಕಾಂ ಸಿಬ್ಬಂದಿ ಶ್ರಮಿಸಿದರು.

ಸಾವಿರಾರು ಭಕ್ತರ ಸಮ್ಮುಖದಲ್ಲಿ ಬೆಂಗಳೂರು ಗೋಸಾವಿಮಠದ ಮಂಜುನಾಥ ಭಾರತಿ ಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡಿ ಆಶೀರ್ವನ ನೀಡಿದರು. ಐದು ಅಂಕಣದ ತೇರನ್ನು ಗ್ರಾಮದ ರಾಜು ಮತ್ತು ಮನೋಹರ ಬಡಿಗೇರ ಕುಟುಂಬ ನಿರ್ಮಿಸಿದ್ದಾರೆ. ದೇವಿಗೆ ಬಣ್ಣ ಹಚ್ಚುವ ಕಾರ್ಯವನ್ನು ಹಳಿಯಾಳದ ಸುಭಾಸ ಬಸವಣ್ಣೆಪ್ಪ ಕಮ್ಮಾರ ನೇರವೇರಿಸಿದರು. ದೇವಿ ಹಣೆಗೆ ಕಟ್ಟುವ ಬುಟ್ಟಿ ಬಾಸಿಂಗನ್ನು ದುಸಗಿ ಗ್ರಾಮದ ವಾಸು ಕಮ್ಮಾರ ಸಾಂಪ್ರದಾಯಿಕ ಪದ್ದತಿಯಲ್ಲಿ ತಯಾರಿಸಿದ್ದಾರೆ. ಹಿಂದೆ 2010 ರಲ್ಲಿ ಜಾತ್ರೆ ನಡೆದಿತ್ತು.

ಬೆಣಚಿ ಗ್ರಾಮದೈವ ಲಕ್ಷ್ಮಿದೇವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.