ADVERTISEMENT

ಅರಣ್ಯ ಇಲಾಖೆಗೆ ಸವಾಲಾದ ಚಿರತೆ ಸೆರೆ; ಸುತಗಟ್ಟಿಯತ್ತ ಸಾಗಿದ ಚಿರತೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2026, 4:40 IST
Last Updated 24 ಜನವರಿ 2026, 4:40 IST

ಹುಬ್ಬಳ್ಳಿ: ಒಂದು ತಿಂಗಳಿನಿಂದ ಕಾಡಿನಿಂದ ನಗರದ ಪ್ರದೇಶಕ್ಕೆ ಬಂದು ಓಡಾಡುತ್ತಿರುವ ಚಿರತೆ ಸಾರ್ವಜನಿಕರಿಗಷ್ಟೇ ಅಲ್ಲದೆ, ಅರಣ್ಯ ಇಲಾಖೆ ಸಿಬ್ಬಂದಿಯ ನಿದ್ದೆಯನ್ನೂ ಕೆಡಿಸಿದೆ. ಕಳೆದ ಒಂದು ವಾರದಿಂದ ವಿಶೇಷ ಕಾರ್ಯಾಚರಣೆ ಪಡೆ ಅದರ ಸೆರೆಗೆ ಹರಸಾಹಸ ಪಡುತ್ತಿದೆ.

ಗಾಮನಗಟ್ಟಿ ರಸ್ತೆ ಹಾಗೂ ವಿಮಾನ ನಿಲ್ದಾಣದ ಆವರಣದ ಒಳಗಿನ ಕುರುಚಲು ಪ್ರದೇಶದಲ್ಲಿ ಬೀಡುಬಿಟ್ಟಿದ್ದ ಚಿರತೆ, ಇದೀಗ ನವನಗರದ ಸುತಗಟ್ಟಿ ಪ್ರದೇಶದಲ್ಲಿ ಕಾಣಿಸಿಕೊಂಡಿದೆ. ಆ ಪ್ರದೇಶದ ಬಳಿ ಚಿರತೆ ಓಡಾಡುತ್ತಿದ್ದ ದೃಶ್ಯವನ್ನು ಸ್ಥಳೀಯ ನಿವಾಸಿಯೊಬ್ಬರು ಮೊಬೈಲ್‌ ಫೋನ್‌ನಲ್ಲಿ ಸೆರೆ ಹಿಡಿದು, ಅರಣ್ಯ ಇಲಾಖೆಗೆ ರವಾನಿಸಿದ್ದಾರೆ.

ಸುತಗಟ್ಟಿ ನಿವಾಸಿಗಳಲ್ಲಿ ಆತಂಕ ಮನೆ ಮಾಡಿದ್ದು, ಹಗಲಿನ ವೇಳೆಯೂ ಮನೆಯಿಂದ ಹೊರಗೆ ಬರಲು ಭಯಪಡುತ್ತಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಅರಣ್ಯ ಇಲಾಖೆ, ಚಿರತೆ ಕಾಣಿಸಿಕೊಂಡ ಸ್ಥಳದಲ್ಲಿ ಬೋನು ಇಟ್ಟು ಸೆರೆಗೆ ಯೋಜನೆ ರೂಪಿಸಿದ್ದಾರೆ. ಅರವಳಿಕೆ ತಜ್ಞರ ತಂಡವೂ ಕಾರ್ಯಾಚರಣೆಯ ಸನ್ನದ್ಧ ಸ್ಥಿತಿಯಲ್ಲಿದೆ.

ADVERTISEMENT

ವಿಮಾನ ನಿಲ್ದಾಣದ ಆವರಣದಲ್ಲಿ ಥರ್ಮಲ್‌ ಡ್ರೋನ್‌ಲ್ಲಿ ಎರಡು–ಮೂರು ಬಾರಿ ಸೆರೆಯಾಗಿದ್ದ ಚಿರತೆ, ಡ್ರೋನ್‌ ಲೈಟ್‌ ಹಾಗೂ ಅದರ ಸದ್ದಿಗೆ ಬೆದರಿ ಎರಡು ದಿನಗಳಿಂದ ಕಾಣಿಸಿಕೊಳ್ಳುತ್ತಿಲ್ಲ. ಬಹುಶಃ ತನ್ನ ಸ್ಥಾನ ಬದಲಿಸಿ, ಸುತಗಟ್ಟಿ ಕಡೆಗೆ ಹೋಗಿರಬಹುದು. ಅದರ ಹೆಜ್ಜೆ ಗುರುತು ಪತ್ತೆ ಹಚ್ಚಿ, ವಿಮಾನ ನಿಲ್ದಾಣದಲ್ಲಿದ್ದ ಚಿರತೆ ಹೆಜ್ಜೆ ಗುರುತಿಗೆ ಹೋಲಿಕೆ ಮಾಡುವ ಕಾರ್ಯ ನಡೆಯುತ್ತಿದೆ ಎಂದು ಸಿಬ್ಬಂದಿಯೊಬ್ಬರು ತಿಳಿಸಿದರು.

‘ಸುತಗಟ್ಟಿಯಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಧಾರವಾಡದ ಅರಣ್ಯ ಇಲಾಖೆ ತಂಡದ ಜೊತೆ ಬೆಂಗಳೂರು, ಮೈಸೂರು ತಂಡವೂ ಕಾರ್ಯಾಚರಣೆ ನಡೆಸುತ್ತಿದೆ. ಸಾರ್ವಜನಿಕರು ಗೊಂದಲಕ್ಕೆ ಒಳಗಾಗದೆ, ಜಾಗೃತೆಯಿಂದ ಇರಬೇಕು. ಒಂಟಿಯಾಗಿ ಓಡಾಡದೆ ಗುಂಪಿನಲ್ಲಿ ಸಂಚರಿಸಬೇಕು. ಸ್ಪೀಕರ್‌ನಲ್ಲಿ ಹಾಡು ಹಾಕಿಕೊಂಡು, ಕೈಯ್ಯಲ್ಲಿ ಬಡಿಗೆ ಹಿಡಿದು ಸಂಚರಿಸಬೇಕು’ ಎಂದು ಹುಬ್ಬಳ್ಳಿ ವಲಯ ಅರಣ್ಯಾಧಿಕಾರಿ ಆರ್‌.ಎಸ್‌.ಉಪ್ಪಾರ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.