ADVERTISEMENT

ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲಿ: ನಾರಾಯಣಸ್ವಾಮಿ ಆಗ್ರಹ

ಪಂಚಾಯ್ತಿಗಳ ಶಕ್ತಿ ಬಲಗೊಳಿಸಲು ಸಭೆ: ನಾರಾಯಣಸ್ವಾಮಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2021, 12:42 IST
Last Updated 5 ಆಗಸ್ಟ್ 2021, 12:42 IST
ಹುಬ್ಬಳ್ಳಿಯಲ್ಲಿ ಗುರುವಾರ ನಡೆದ ಸಭೆಯಲ್ಲಿ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ರಾಷ್ಟ್ರೀಯ ಸಲಹಾ ಮಂಡಳಿ ಸದಸ್ಯ ಡಿ.ಆರ್‌. ಪಾಟೀಲ ಮಾತನಾಡಿದರು
ಹುಬ್ಬಳ್ಳಿಯಲ್ಲಿ ಗುರುವಾರ ನಡೆದ ಸಭೆಯಲ್ಲಿ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ರಾಷ್ಟ್ರೀಯ ಸಲಹಾ ಮಂಡಳಿ ಸದಸ್ಯ ಡಿ.ಆರ್‌. ಪಾಟೀಲ ಮಾತನಾಡಿದರು   

ಹುಬ್ಬಳ್ಳಿ: ಪ್ರಜಾಸತಾತ್ಮಕ ವ್ಯವಸ್ಥೆಯಲ್ಲಿ ಚುನಾವಣೆ ಮಹತ್ವದ್ದಾಗಿದ್ದು, ಸುರಕ್ಷತೆಗೆ ಒತ್ತು ಕೊಟ್ಟು ಆಯೋಗ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಬೇಕು ಎಂದು ಕಾಂಗ್ರೆಸ್‌ನ ‌ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ರಾಜ್ಯ ಘಟಕದ ಅಧ್ಯಕ್ಷ ಸಿ. ನಾರಾಯಣಸ್ವಾಮಿ ಆಗ್ರಹಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ’‍ಪ್ರಜಾಪ್ರಭುತ್ವದಲ್ಲಿ ಅಧಿಕಾರ ವಿಕೇಂದ್ರೀಕರಣ ಅಗತ್ಯವಾಗಿದೆ. ಗ್ರಾಮ ಮಟ್ಟದಲ್ಲಿ ಜನ ಪ್ರತಿನಿಧಿಗಳು ಅಧಿಕಾರ ಚಲಾಯಿಸುವಂತಾದರೆ ಅಭಿವೃದ್ಧಿಯ ವೇಗ ಹೆಚ್ಚಾಗುತ್ತದೆ. ಆದ್ದರಿಂದ ಸರ್ಕಾರದ ವಾದಕ್ಕೆ ಮನ್ನಣೆ ನೀಡದೆ ಚುನಾವಣೆ ನಡೆಸಬೇಕು’ ಎಂದರು.

‘ಕೋವಿಡ್‌ ನಡುವೆಯೂ ಪಂಚರಾಜ್ಯಗಳ ಚುನಾವಣೆ, ರಾಜ್ಯದಲ್ಲಿ ಉಪಚುನಾವಣೆ ಮತ್ತು ಗ್ರಾಮ ಪಂಚಾಯ್ತಿ ಚುನಾವಣೆ ನಡೆದಿದೆ. ರಾಷ್ಟ್ರೀಯ ತುರ್ತು ಪರಿಸ್ಥಿತಿ ಹೊರತುಪಡಿಸಿ ಬೇರೆ ಯಾವ ಕಾರಣಕ್ಕೂ ಚುನಾವಣೆ ಮುಂದೂಡುವಂತಿಲ್ಲ. ಆದ್ದರಿಂದ ಆಯೋಗ ಸುರಕ್ಷತಾ ಕ್ರಮ ಪಾಲಿಸಿ ಚುನಾವಣಾ ವೇಳಾಪಟ್ಟಿ ಹೊರಡಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಚುನಾವಣೆ ಮುಂದೂಡುವಂತೆ ಸರ್ಕಾರ ನ್ಯಾಯಾಲಯದ ಮೊರೆ ಹೋಗಿದ್ದು, ನಾವೂ ಅರ್ಜಿ ಸಲ್ಲಿಸಿದ್ದೇವೆ. ಇದೇ 13ರಂದು ಅರ್ಜಿಯ ವಿಚಾರಣೆ ನಡೆಯಲಿದೆ’ ಎಂದರು.

‘ಕೆಳಹಂತದಿಂದ ಕಾಂಗ್ರೆಸ್ ಪಕ್ಷವನ್ನು ಸಂಘಟಿಸುವ ಜೊತೆಗೆ ಜನರ ಸಮಸ್ಯೆಗಳಿಗೆ ಸ್ಪಂದಿಸಲಾಗುವುದು. ವಾಮ ಮಾರ್ಗದಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಕೋವಿಡ್‌ ನಿರ್ವಹಣೆ ಮಾಡಲು ವಿಫಲವಾಗಿದೆ. ಕೋವಿಡ್‌ನಿಂದಾದ ಸಾವುಗಳು ಸರ್ಕಾರದ ಉದಾಸೀನದಿಂದ ಆದ ಕೊಲೆಗಳು’ ಎಂದು ಆರೋಪಿಸಿದರು.

ಸಂಘಟನೆ ರಾಷ್ಟ್ರೀಯ ಸಲಹಾ ಮಂಡಳಿ ಸದಸ್ಯ ಡಿ.ಆರ್‌. ಪಾಟೀಲ ‘ಈ ಸಲದ ಆಗಸ್ಟ್‌ 15ಕ್ಕೆ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗುತ್ತವೆ. ಇದರ ನೆಪದಲ್ಲಿ ರಾಜ್ಯದ ಪಂಚಾಯ್ತಿಗಳನ್ನು ಬಲಿಷ್ಠಗೊಳಿಸಲಾಗುವುದು. ಗಾಂಧೀಜಿ ಅವರ ಗ್ರಾಮ ಸ್ವರಾಜ್ಯದ ಕನಸು ನನಸಾಗಲು ಗ್ರಾಮ ಮಟ್ಟದಿಂದಲೇ ಅಧಿಕಾರ ಚಲಾವಣೆ ಆಗಬೇಕು. ಈಗ ಶಾಸಕರ ಹಿಡಿತದಲ್ಲಿ ಅಧಿಕಾರವಿದ್ದು ಅದು ಗ್ರಾ.ಪಂ. ಮಟ್ಟಕ್ಕೆ ತಲುಪಲು ಯೋಜನೆ ರೂಪಿಸಿದ್ದೇವೆ’ ಎಂದರು.

ಸಭೆ: ಇದಕ್ಕೂ ಮೊದಲು ನಡೆದ ಸಭೆಯಲ್ಲಿ ನಾಯಕರು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಿದ್ಧತೆ ಕುರಿತು ಜಿಲ್ಲೆಯ ವಿವಿಧ ಮುಖಂಡರ ಜೊತೆ ಸಭೆ ನಡೆಸಿದರು.

ಸಂಘಟನೆ ರಾಷ್ಟ್ರೀಯ ಸಂಚಾಲಕಿ ಬಿನಿತಾ ಓರಾ, ರಾಜ್ಯ ಸಂಚಾಲಕ ವಿಜಯಸಿಂಗ್‌, ಬೆಳಗಾವಿ ವಿಭಾಗದ ಸಂಚಾಲಕ ಉಮೇಶ ಬಾಳಿ, ಜಿಲ್ಲಾ ಸಂಯೋಜಕ ಆರ್‌.ಎಚ್‌. ಕೋನರಡ್ಡಿ, ಕಾಂಗ್ರೆಸ್‌ ಗ್ರಾಮೀಣ ಘಟಕದ ಅಧ್ಯಕ್ಷ ಅನಿಲಕುಮಾರ ಪಾಟೀಲ, ಮುಖಂಡರಾದ ಐ.ಜಿ. ಸನದಿ, ಸದಾನಂದ ಡಂಗವನರ, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮಿ ಪಾಟೀಲ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.