ADVERTISEMENT

ಕಸಾಪ ಜಿಲ್ಲಾ ಘಟಕ ಚುನಾವಣೆ: ಮೂರನೇ ಬಾರಿಗೆ ಅಂಗಡಿಗೆ ಚುಕ್ಕಾಣಿ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2021, 15:46 IST
Last Updated 21 ನವೆಂಬರ್ 2021, 15:46 IST
ಧಾರವಾಡದ ತಹಶೀಲ್ದಾರ್ ಕಚೇರಿಯಲ್ಲಿ ಪ್ರಮಾಣ ಪತ್ರ ಸ್ವೀಕರಿಸಲು ಬಂದ ಲಿಂಗರಾಜ ಅಂಗಡಿ ಅವರನ್ನು ಪ್ರಕಾಶ ಉಡಿಕೇರಿ ಹಾಗೂ ಬೆಂಬಲಿಗರು ಹಾರ ಹಾಕಿ ಅಭಿನಂದಿಸಿದರು
ಧಾರವಾಡದ ತಹಶೀಲ್ದಾರ್ ಕಚೇರಿಯಲ್ಲಿ ಪ್ರಮಾಣ ಪತ್ರ ಸ್ವೀಕರಿಸಲು ಬಂದ ಲಿಂಗರಾಜ ಅಂಗಡಿ ಅವರನ್ನು ಪ್ರಕಾಶ ಉಡಿಕೇರಿ ಹಾಗೂ ಬೆಂಬಲಿಗರು ಹಾರ ಹಾಕಿ ಅಭಿನಂದಿಸಿದರು   

ಧಾರವಾಡ: ತೀವ್ರ ಕುತೂಹಲ ಕೆರಳಿಸಿದ್ದ ಇಲ್ಲಿನ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಚುನಾವಣೆಯಲ್ಲಿ ಲಿಂಗರಾಜ ಅಂಗಡಿಗೆ ಮತದಾರರುಮೂರನೇ ಬಾರಿಗೆ ಅಸ್ತು ಎಂದಿದ್ದಾರೆ.ಆ ಮೂಲಕ ಶಿವಾನಂದ ಗಾಳಿ ಅವರ ನಂತರ ಹ್ಯಾಟ್ರಿಕ್ ಸಾಧನೆ ಮಾಡಿದ 2ನೇ ವ್ಯಕ್ತಿಯಾಗಿ ಅಂಗಡಿ ಹೊರಹೊಮ್ಮಿದ್ದಾರೆ.

ತಮ್ಮ ಸಮೀಪದ ಪ್ರತಿಸ್ಪರ್ಧಿ ರಾಮು ಮೂಲಗಿ ಅವರಿಗಿಂತ ಕೇವಲ 24 ಮತಗಳನ್ನು ಹೆಚ್ಚು ಪಡೆದು ಅಂಗಡಿ ಅವರು ಪ್ರಯಾಸದ ಗೆಲುವು ಸಾಧಿಸಿದರು. ಹ್ಯಾಟ್ರಿಕ್ ಸಾಧನೆಯ ಕನಸು ಹೊತ್ತಿದ್ದ ಅಂಗಡಿ ಒಂದೆಡೆಯಾದರೆ, ಹೊಸಬರಿಗೆ ಅವಕಾಶ ನೀಡಿ ಎಂಬ ಕೋರಿಕೆ ಮೂಲಕ ರಾಮು ಮೂಲಗಿ ಮತ ಯಾಚಿಸಿದ್ದರು. ಅಂತಿಮವಾಗಿ ಲಿಂಗರಾಜ ಅಂಗಡಿ ಅವರು 1244 ಮತಗಳನ್ನು ಪಡೆದರೆ, ರಾಮು ಮೂಲಗಿ ಅವರು 1220 ಮತಗಳನ್ನು ಪಡೆದು ತೀವ್ರ ಪೈಪೋಟಿ ನೀಡಿದರು. ಕೊನೆ ಕ್ಷಣದಲ್ಲಿ ಕಣದಿಂದ ಹಿಂದೆ ಸರಿದು ರಾಮು ಮೂಲಗಿ ಅವರನ್ನು ಬೆಂಬಲಿಸಿದ ನಾಗರಾಜ ಕಿರಣಗಿ ಅವರಿಗೆ 15 ಮತಗಳು, ವಿಜಯಕುಮಾರ ಅವರಿಗೆ 14 ಮತಗಳು ಲಭಿಸಿದವು.

ಮತ ಎಣಿಕೆಯ ಪ್ರತಿ ಹಂತವೂ ಕುತೂಹಲಕಾರಿಯಾಗಿತ್ತು. ಗೆಲುವು ಒಮ್ಮೆ ಮೂಲಗಿ ಅವರತ್ತ ಹಾಗೂ ಮತ್ತೊಮ್ಮೆ ಅಂಗಡಿಯವರೆಡೆಗೆ ಹೊಯ್ದಾಡುತ್ತಿತ್ತು. ಒಂದು ಹಂತದಲ್ಲಿ ರಾಮು ಮೂಲಗಿ ಅವರು ಲಿಂಗರಾಜ ಅಂಗಡಿ ಅವರಿಗಿಂತ 70 ಮತಗಳ ಮುನ್ನಡೆ ಕಾಯ್ದುಕೊಂಡಿದ್ದರು. ಆ ಸಂದರ್ಭದಲ್ಲಿ ಮತ ಎಣಿಕೆ ಕೇಂದ್ರದಿಂದ ಹೊರಬಂದ ಅಂಗಡಿ, ‘ಬಹುತೇಕ ರಾಮು ಅವರದ್ದೇ ಆಗುತ್ತದೆ’ ಎಂದು ಹೇಳಿ ಕಾರು ಹತ್ತಿ ಸ್ಥಳದಿಂದ ನಿರ್ಗಮಿಸಿದರು. ಆ ಹೊತ್ತಿಗಾಗಲೇ ಮತ ಎಣಿಕೆಯಲ್ಲಿ ಅಳ್ನಾವರ ಹಾಗೂ ನವಲಗುಂದದಲ್ಲಿ ಅಂಗಡಿ ಮುಂದಿದ್ದರೆ. ಧಾರವಾಡ, ಕಲಘಟಗಿ, ಕುಂದಗೋಳ, ಅಣ್ಣಿಗೇರಿಯಲ್ಲಿ ಮೂಲಗಿ ಅವರು ಮುನ್ನಡೆ ಕಾಯ್ದುಕೊಂಡಿದ್ದರು.

ADVERTISEMENT

ಆದರೆ ಆ ಹಂತದಲ್ಲಿ ಹುಬ್ಬಳ್ಳಿಯ ಮೂರು ಮತಗಟ್ಟೆಗಳ ಮತ ಎಣಿಕೆ ಆರಂಭಗೊಂಡಿತ್ತು. ಇದರಲ್ಲಿ ಹುಬ್ಬಳ್ಳಿ ಗ್ರಾಮೀಣವೂ ಮೂಲಗಿಗೆ ಬಹುಮತ ನೀಡಿತು. ಆದರೆ ಅಂತಿಮವಾಗಿ ಹುಬ್ಬಳ್ಳಿ ನಗರದ ಎರಡು ಮತಗಟ್ಟೆಗಳು ಲಿಂಗರಾಜ ಅಂಗಡಿ ಕೈಹಿಡಿದವು. ಗೆಲುವು ಖಚಿತವಾಗುತ್ತಿದ್ದಂತೆ ತಹಶೀಲ್ದಾರ್ ಕಚೇರಿಗೆ ಬಂದ ಅಂಗಡಿ ಗೆಲುವಿನ ನಗೆ ಬೀರಿದರು. ಸಪ್ಪೆ ಮುಖ ಹಾಕಿಕೊಂಡಿದ್ದ ಅವರ ಬೆಂಬಲಿಗರು ನಂತರ ಗೆಲುವಿನ ಕೇಕೆ ಹಾಕಿ ಸಂಭ್ರಮಿಸಿದರು.

ಬೆಂಬಲಿಗರ ಅಭಿನಂದನೆ ಸ್ವೀಕರಿಸಿದ ಸಂದರ್ಭದಲ್ಲೂ ಲಿಂಗರಾಜ ಅಂಗಡಿ ಅವರು, ‘ನಾನು ಪರಾಭವಗೊಂಡೆ ಎಂದುಕೊಂಡಿದ್ದೆ. ಆದರೆ ಹ್ಯಾಟ್ರಿಕ್ ಸಾಧನೆಯ ಕನಸು ನನಸಾಯಿತು’ ಎಂದರು.

ಜಿಲ್ಲೆಯಲ್ಲಿ ಒಟ್ಟು 5,198 ಮತದಾರರು ಇದ್ದಾರೆ. ಜಿಲ್ಲೆಯ ಒಟ್ಟು 10 ಕೇಂದ್ರಗಳಲ್ಲಿ ಭಾನುವಾರ ಬೆಳಿಗ್ಗೆ 8ರಿಂದ ಸಂಜೆ 4ರವರೆಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಇದರಲ್ಲಿ ಒಟ್ಟು 2,511 (ಶೇ 48.3) ಮತದಾರರಷ್ಟೇ ಹಕ್ಕು ಚಲಾಯಿಸಿದರು. ಇದರಲ್ಲಿ ಕಲಘಟಗಿ, ಕುಂದಗೋಳ ಹಾಗೂ ಅಳ್ನಾವರದಲ್ಲಿ ಸುಮಾರು ಶೇ 65ರಷ್ಟು ಮತದಾನವಾದರೆ, ಹುಬ್ಬಳ್ಳಿ ನಗರದಲ್ಲಿ ಕಡಿಮೆ ಶೇ 38ರಷ್ಟು ಮತದಾನವಾಗಿತ್ತು. ಒಟ್ಟು 18 ಮತಗಳು ತಿರಸ್ಕೃತಗೊಂಡವು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಲಿಂಗರಾಜ ಅಂಗಡಿ, ‘ಮತದಾರರು ಹ್ಯಾಟ್ರಿಕ್ ಸಾಧನೆಗೆ ನೆರವಾದರೂ ಒಂದು ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಮುಂದಿನ ಐದು ವರ್ಷಗಳ ಕಾಲ ಅತ್ಯಂತ ಎಚ್ಚರಿಕೆಯಿಂದ ಪರಿಷತ್ ಅನ್ನು ಮುನ್ನಡೆಸುತ್ತೇನೆ. ರಾಮು ಮೂಲಗಿ ಅವರೂ ನನ್ನ ಸ್ನೇಹಿತರು. ಹೀಗಾಗಿ ಎಲ್ಲರ ಸಹಕಾರ ಪಡೆದು ಕೆಲಸ ಮಾಡುತ್ತೇನೆ. ಸದ್ಯ 85 ದತ್ತಿ ಇದ್ದು, ಇದನ್ನು ನೂರಕ್ಕೆ ಏರಿಸಲಾಗುವುದು’ ಎಂದರು.

‘ರಾಜ್ಯಕ್ಕೆ ಮಾದರಿ ಜಿಲ್ಲಾ ಘಟಕವನ್ನಾಗಿ ಬೆಳೆಸುವ ಗುರಿ ಹೊಂದಿದ್ದೇನೆ. ಜಿಲ್ಲೆಯಲ್ಲಿರುವ 8 ತಾಲ್ಲೂಕುಗಳ ಅಧ್ಯಕ್ಷ ಸ್ಥಾನದಲ್ಲಿ ತಲಾ ಒಂದನ್ನು ಪರಿಶಿಷ್ಟ ಜಾತಿ, ಅಲ್ಪಸಂಖ್ಯಾತ ಹಾಗೂ ಮಹಿಳೆಯರಿಗೆ ನೀಡಲಾಗುವುದು. ಈ ಬಾರಿ ಯಾರಿಗೂ ಪೂರ್ಣ ಪ್ರಮಾಣದಲ್ಲಿ ಐದು ವರ್ಷಗಳ ಕಾಲ ನೀಡುವುದಿಲ್ಲ. ಅವರ ಕೆಲಸವನ್ನು ನೋಡಿ ಮುಂದುವರಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.