ADVERTISEMENT

ಬದಲಾವಣೆ ಕಾಲ ಸನ್ನಿಹಿತ: ದಿಂಗಾಲೇಶ್ವರ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2025, 23:48 IST
Last Updated 15 ಸೆಪ್ಟೆಂಬರ್ 2025, 23:48 IST
ದಿಂಗಾಲೇಶ್ವರ ಸ್ವಾಮೀಜಿ
ದಿಂಗಾಲೇಶ್ವರ ಸ್ವಾಮೀಜಿ   

ಹುಬ್ಬಳ್ಳಿ: ‘ಎಲ್ಲರನ್ನೂ ಒಂದುಗೂಡಿಸಲು ನೇತೃತ್ವ ವಹಿಸಿಕೊಂಡಿರುವೆ. ಬದಲಾವಣೆಗೆ ಕಾಲ ಸನ್ನಿಹಿತವಾಗಿದೆ. ಕಾಲವೇ ಹಂತಹಂತವಾಗಿ ಎಲ್ಲರನ್ನೂ ಒಂದುಗೂಡಿಸುತ್ತದೆ’ ಎಂದು ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.

ಜಾಗತಿಕ ಲಿಂಗಾಯತ ಮಹಾಸಭಾದ ಕಾರ್ಯದರ್ಶಿ ಎಸ್.ಎಂ.ಜಾಮದಾರ ಅವರ ಹೇಳಿಕೆಗೆ ಸೋಮವಾರ ಪ್ರತಿಕ್ರಿಯಿಸಿದ ಅವರು, ‘ಪಂಚ ಪೀಠಾಧಿಪತಿಗಳು ಮತ್ತು ಲಿಂಗಾಯತ ಧರ್ಮ ಪ್ರತಿಪಾದಕರು ಬದಲಾಗಬೇಕು ಎಂಬುದು ನಮ್ಮ ನಿಲುವು’ ಎಂದರು.

‘ಬಾಳೆಹೊನ್ನೂರಿನ ರಂಭಾಪುರಿ ಮಠದ ಶ್ರೀಗಳು ಇದೇ ಮೊದಲಿಗೆ ತಮ್ಮ ದಸರಾ ದರ್ಬಾರ್‌ನಲ್ಲಿ ಬಸವಣ್ಣ ಅವರ ಚಿತ್ರ ಇರಿಸಿಕೊಂಡಿದ್ದಾರೆ. ಇದು ಮೊದಲ ಬದಲಾವಣೆ. ದಿನ ಕಳೆದಂತೆ ಬಸವಣ್ಣ, ರೇಣುಕಾಚಾರ್ಯರ ಭಕ್ತರು ಒಂದಾಗುತ್ತಾರೆ. ಪಂಚಪೀಠಗಳು, ವೀರಕ್ತ ಪೀಠಗಳೂ ಒಂದಾಗುತ್ತವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

ಸಮಾವೇಶದ ತಯಾರಿ: ಸೆ.19ರಂದು ಹುಬ್ಬಳ್ಳಿಯಲ್ಲಿ ‘ವೀರಶೈವ ಲಿಂಗಾಯತ ಏಕತಾ ಸಮಾವೇಶ’ ನಡೆಯಲಿದೆ. ದಿಂಗಾಲೇಶ್ವರ ಸ್ವಾಮೀಜಿ ಮತ್ತು ಅಖಿಲ ಭಾರತೀಯ ವೀರಶೈವ ಮಹಾಸಭಾದಿಂದ ಪೂರ್ವಸಿದ್ಧತೆ ನಡೆದಿದೆ. ಸಮಾವೇಶದಲ್ಲಿ ವಿವಿಧೆಡೆಯಿಂದ ಸಾವಿರಾರು ಜನರು ಹಾಗೂ ವಿವಿಧ ಮಠಾಧೀಶರು ಪಾಲ್ಗೊಳ್ಳುವರು’ ಎಂದರು.

ಒಗ್ಗಟ್ಟಿಗಾಗಿ ಸಮಾವೇಶ: ಖಂಡ್ರೆ

ಹುಬ್ಬಳ್ಳಿ: ‘ಸಮಾಜ ಒಗ್ಗೂಡಿಸಲು ಹುಬ್ಬಳ್ಳಿಯಲ್ಲಿ ಸೆ.19ರಂದು ವೀರಶೈವ ಲಿಂಗಾಯತ ಏಕತಾ ಸಮಾವೇಶ ಏರ್ಪಡಿಸಲಾಗಿದೆ. ಯಾರ ವಿರೋಧಕ್ಕೋ ಪರ್ಯಾಯ ಕಂಡುಕೊಳ್ಳಲು ಅಲ್ಲ’ ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದರು.

‘ಸಮಾಜದಲ್ಲಿ ವೀರಶೈವ ಲಿಂಗಾಯತರು ಸ್ವಾಭಿಮಾನಿಗಳು ಸ್ವಾವಲಂಬಿ ಮತ್ತು ಬಲಾಢ್ಯರಾಗಿ ಬದುಕಬೇಕು. ಸಮಾಜದ ಇತರೆ ಎಲ್ಲರೂ ಬೆಳೆಯಲು ಇದರಿಂದ ಸಾಧ್ಯ’ ಎಂದು ಸೋಮವಾರ ಅವರು ಅಭಿಪ್ರಾಯಪಟ್ಟರು. ‘ಸಮಾಜದ ವಿಷಯದಲ್ಲಿ ಅನಗತ್ಯ ಗೊಂದಲ ಮೂಡಿಸಬಾರದು. ವಿಚಾರವಂತರು ಸ್ವಾಮೀಜಿಗಳು ಅರ್ಥ ಮಾಡಿಕೊಳ್ಳಬೇಕು’ ಎಂದು ಕೋರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.