ADVERTISEMENT

ಅನಕ್ಷರತೆ ಬಂಧನ– ಅಕ್ಷರ ಬಿಡುಗಡೆ

ಹುಬ್ಬಳ್ಳಿ ಉಪ ಕಾರಾಗೃಹ ಕೈದಿಗಳಿಗೆ ಸಾಕ್ಷರತಾ ಕಾರ್ಯಕ್ರಮ

ಎಂ.ನವೀನ್ ಕುಮಾರ್
Published 14 ಅಕ್ಟೋಬರ್ 2018, 15:52 IST
Last Updated 14 ಅಕ್ಟೋಬರ್ 2018, 15:52 IST

ಹುಬ್ಬಳ್ಳಿ: ಇಲ್ಲಿನ ಉಪ ಕಾರಾಗೃಹದಲ್ಲಿ ಸಾಕ್ಷರತಾ ಕಾರ್ಯಕ್ರಮ ನಡೆಸಲು ಸಿದ್ಧತೆ ನಡೆದಿದ್ದು, ನಿರಕ್ಷರತೆಯ ಬಂಧನದಲ್ಲಿರುವ ಕೈದಿಗಳು ಅಕ್ಷರ ಬಿಡುಗಡೆ ಕಾಣಲಿದ್ದಾರೆ.

ವಾರದಲ್ಲಿ ಮೂರು ದಿನ ಸಾಕ್ಷರತಾ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಓದು– ಬರಹ ಹಾಗೂ ಸರಳ ಗಣಿತ (ಲೆಕ್ಕಾಚಾರ) ಹೇಳಿಕೊಡಲಾಗುತ್ತದೆ. ಒಂದು ವರ್ಷಗಳ ಕಾಲ ತರಗತಿಗಳು ನಡೆಯಲಿವೆ. ಜೈಲಿನಿಂದ ಬಿಡುಗಡೆಯಾಗುವ ಕೈದಿಗಳು ಅಕ್ಷರಸ್ಥರಾಗಿರುವುದು ಮಾತ್ರವಲ್ಲ, ಸ್ವಂತ ಉದ್ಯೋಗ ನಡೆಸಲು ಸಹ ಶಕ್ತರಾಗಿರಬೇಕು ಎಂಬುದು ಇದರ ಉದ್ದೇಶವಾಗಿದೆ. ಆದ್ದರಿಂದ ಸಾಕ್ಷರತೆಯ ಕಾರ್ಯಕ್ರಮದ ಜೊತೆಗೆ ಉಪ್ಪಿನಕಾಯಿ, ಪೇಪರ್ ಕೈಚೀಲ, ಮೊಂಬತ್ತಿ ಹಾಗೂ ಜಾಮೂನು ಪೌಡರ್ ತಯಾರಿಕೆ ಬಗ್ಗೆ ಸಹ ತರಬೇತಿ ನೀಡಲಾಗುತ್ತದೆ.

‘ಭಾರತ್ ಮಿಷನ್ ಆಫ್ ಗುಡ್‌ವಿಲ್ ಎಂಬ ಸಂಸ್ಥೆಯವರು ಜೈಲಿನಲ್ಲಿ ವಯಸ್ಕರ ಶಿಕ್ಷಣ ಕಾರ್ಯಕ್ರಮ ಆಯೋಜಿಸಲು ಮುಂದೆ ಬಂದಿದ್ದಾರೆ. ಉಚಿತವಾಗಿ ತರಬೇತಿ ನೀಡುವ ಅವರು ಅದಕ್ಕೆ ಬೇಕಾಗಿರುವ ಪುಸ್ತಕ, ಸ್ಲೇಟ್ ಮುಂತಾದ ಪರಿಕರಗಳನ್ನು ಸಹ ಕೈದಿಗಳಿಗೆ ನೀಡುವುದಾಗಿ ಹೇಳಿದ್ದಾರೆ. ಇದರಿಂದ ಜೈಲಿನಲ್ಲಿರುವ ಅನಕ್ಷರಸ್ಥರು ಅಕ್ಷರಭ್ಯಾಸ ಮಾಡಲು ಅವಕಾಶ ಸಿಗುತ್ತದೆ’ ಎಂದು ಕಾರಾಗೃಹ ಅಧೀಕ್ಷಕ ಎಚ್‌.ಎ. ಚೌಗುಲೆ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ತರಗತಿಗಳನ್ನು ನಡೆಸಲು ನಾವು ಸಹ ಸಾಕಷ್ಟು ತಯಾರಿ ಮಾಡಿಕೊಳ್ಳಬೇಕಾಗುತ್ತದೆ. ತರಗತಿ ನಡೆಯುವಾಗ ಭದ್ರತೆಗೆ ಸಿಬ್ಬಂದಿಯನ್ನು ಸಹ ನಿಯೋಜಿಸಬೇಕಾಗುತ್ತದೆ. ಇದಕ್ಕಾಗಿ ಹೆಚ್ಚಿನ ಸಿಬ್ಬಂದಿ ಬೇಕಾಗುತ್ತಾರೆ. ಇದೊಂದು ಒಳ್ಳೆಯ ಕಾರ್ಯಕ್ರಮವಾಗಿರುವುದರಿಂದ ಎಲ್ಲ ರೀತಿಯ ಸಹಕಾರವನ್ನು ನೀಡಲಾಗುವುದು’ ಎಂದು ಅವರು ಹೇಳಿದರು.

‘ಪ್ರತಿ ದಿನ ಒಂದೂವರೆ ಗಂಟೆಗಳ ಕಾಲ, ವಾರದಲ್ಲಿ ಮೂರು ದಿನ ತರಬೇತಿ ನೀಡಲಾಗುತ್ತದೆ. ಕೋರ್ಸ್ ಪೂರ್ಣಗೊಳಿಸಿದವರಿಗೆ ಪ್ರಮಾಣ ಪತ್ರವನ್ನು ಸಹ ವಿತರಿಸಲಾಗುತ್ತದೆ. ಕೊಳೆಗೇರಿಗಳು ಸೇರಿದಂತೆ ಹಲವು ಕಡೆ ಈಗಾಗಲೇ ಇಂತಹ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಗಿದೆ. ತರಬೇತಿ ಪಡೆದವರಿಗೆ ಇದರಿಂದ ಸಾಕಷ್ಟು ಲಾಭವಾಗುತ್ತದೆ’ ಎಂದು ಭಾರತ್ ಮಿಷನ್ ಆಫ್ ಗುಡ್‌ವಿಲ್ ಅಧ್ಯಕ್ಷ ಜರ್ಮಯ್ಯ ಹೇಳಿದರು.

ಕೈದಿಗಳು ಜೈಲಿನಿಂದ ಬಿಡುಗಡೆಯಾದ ನಂತರ ಮನೆಯಲ್ಲಿಯೇ ಸ್ವಂತ ಉದ್ಯೋಗ ಸಹ ಆರಂಭಿಸಿ ಬದುಕು ಕಟ್ಟಿಕೊಳ್ಳಬಹುದು. ಇಚ್ಛೆ ಇದ್ದವರು ವಿದ್ಯಾಭ್ಯಾಸ ಮುಂದುವರೆಸಬಹುದಾಗಿದೆ. ಸದ್ಯ ಕಾರಾಗೃಹದಲ್ಲಿ 150 ಮಂದಿ ಕೈದಿಗಳಿದ್ದು, ಅವರಲ್ಲಿ 40 ಮಂದಿ ಅನಕ್ಷರಸ್ಥರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.