ADVERTISEMENT

ಸ್ಥಳೀಯ ಸಂಸ್ಥೆ ಚುನಾವಣೆ: ಶೇ 75ರಷ್ಟು ಮತದಾನ, 31ರಂದು ಮತ ಎಣಿಕೆ

​ಪ್ರಜಾವಾಣಿ ವಾರ್ತೆ
Published 29 ಮೇ 2019, 13:49 IST
Last Updated 29 ಮೇ 2019, 13:49 IST
ಧಾರವಾಡದ ಅಳ್ನಾವರದಲ್ಲಿ ಬುಧವಾರ ನಡೆದ ಮತದಾನದಲ್ಲಿ ಉತ್ಸಾಹದಿಂದ ಪಾಲ್ಗೊಂಡ ಮತದಾರರು ಗುರುತಿನ ಚೀಟಿ ಪ್ರದರ್ಶಿಸಿದರು
ಧಾರವಾಡದ ಅಳ್ನಾವರದಲ್ಲಿ ಬುಧವಾರ ನಡೆದ ಮತದಾನದಲ್ಲಿ ಉತ್ಸಾಹದಿಂದ ಪಾಲ್ಗೊಂಡ ಮತದಾರರು ಗುರುತಿನ ಚೀಟಿ ಪ್ರದರ್ಶಿಸಿದರು   

ಧಾರವಾಡ: ನವಲಗುಂದ ಪುರಸಭೆ, ಅಳ್ನಾವರ ಮತ್ತು ಕಲಘಟಗಿ ಪಟ್ಟಣ ಪಂಚಾಯ್ತಿಗೆ ಬುಧವಾರ ನಡೆದ ಚುನಾವಣೆ ಶಾಂತಿಯುತವಾಗಿ ನಡೆದಿದ್ದು, ಒಟ್ಟು ಶೇ 75ರಷ್ಟು ಮತದಾನವಾಗಿದೆ.

ಲೋಕಸಭಾ ಚುನಾವಣೆ ನಂತರ ಬಂದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲೂ ಮತದಾರರ ಉತ್ಸಾಹ ಕುಗ್ಗಲಿಲ್ಲ. ಕಲಘಟಗಿಯಲ್ಲಿ ಅತಿ ಹೆಚ್ಚು ಶೇ 77.87ರಷ್ಟು ಮತದಾನವಾದರೆ, ಅಳ್ನಾವರ ಪಟ್ಟಣ ಪಂಚಾಯ್ತಿಯಲ್ಲಿ ಕಡಿಮೆ ಶೇ 65.04ರಷ್ಟು ಮತದಾನ ದಾಖಲಾಗಿದೆ.

ನವಲಗುಮದ ಪುರಸಭೆಯ 23 ವಾರ್ಡ್‌ಗಳಿಗೆ ಜರುಗಿದ ಚುನಾವಣೆಯಲ್ಲಿ 87 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಒಟ್ಟು 19,512 ಮತದಾರರ ಪೈಕಿ 14,658 ಮತದಾರರು ತಮ್ಮ ಹಕ್ಕು ಚಲಾಯಿಸಿದರು. ಇದರಿಂದಾಗಿ ಇಲ್ಲಿ ಒಟ್ಟು ಶೇ 75.12ರಷ್ಟು ಮತದಾನವಾಗಿದೆ.

ADVERTISEMENT

ಅಳ್ನಾವರ ಪಟ್ಟಣ ಪಂಚಾಯ್ತಿಯ 18 ವಾರ್ಡ್‌ಗಳಿಗೆ ನಡೆದ ಚುನಾವಣೆಯಲ್ಲಿ 76 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಒಟ್ಟು 15,249 ಮತದಾರರ ಪೈಕಿ 9,918 ಮತದಾರರು ಮತದಾನದಲ್ಲಿ ಪಾಲ್ಗೊಂಡರು.

ಕಲಘಟಗಿ ಪಟ್ಟಣ ಪಂಚಾಯ್ತಿಯ 17 ವಾರ್ಡ್‌ಗಳ ಪೈಕಿ ವಾರ್ಡ್‌ 16ಕ್ಕೆ ಅವಿರೋಧ ಆಯ್ಕೆಯಾಗಿದೆ. ಉಳಿದ 16 ವಾರ್ಡ್‌ಗಳಿಗೆ ನಡೆದ ಚುನಾವಣೆಯಲ್ಲಿ 47 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಒಟ್ಟು 12,919 ಮತದಾರರ ಪೈಕಿ 9,494 ಮತದಾರರು ತಮ್ಮ ಮತ ಚಲಾಯಿಸಿದ್ದಾರೆ.

ಜಿಲ್ಲಾಧಿಕಾರಿ ದೀಪಾ ಚೋಳನ್‌ ಅವರು ಅಳ್ನಾವರ ಪಟ್ಟನ ಪಂಚಾಯ್ತಿ ವ್ಯಾಪ್ತಿಯ ಏಳಕ್ಕೂ ಹೆಚ್ಚು ಮತಗಟ್ಟೆಗಳಿಗೆ ಭೇಟಿ ನೀಡಿ ಮತದಾನ ಕಾರ್ಯ, ಮತಗಟ್ಟೆಗಳಿಗೆ ಒದಗಿಸಲಾದ ಸೌಕರ್ಯಗಳನ್ನು ಪರಿಶೀಲಿಸಿದರು.ಅಳ್ನಾವರ ಚುನಾವಣಾಧಿಕಾರಿಯಾಗಿರುವ ಧಾರವಾಡ ತಹಶೀಲ್ದಾರ ಪ್ರಕಾಶ ಕುದರಿ ಹಾಗೂ ಅಳ್ನಾವರ ತಹಶೀಲ್ದಾರ ಅಮರೇಶ ಪಮ್ಮಾರ ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದರು.

ಮೇ 31 ರಂದು ಮತ ಎಣಿಕೆ: ನವಲಗುಂದ ಪುರಸಭೆಗೆ ಜರುಗಿದ ಚುನಾವಣೆಯ ಮತ ಎಣಿಕೆಯು ನವಲಗುಂದ ಮಾಡೆಲ್ ಹೈಸ್ಕೂಲ್, ಅಳ್ನಾವರ ಪಟ್ಟಣ ಪಂಚಾಯತಿ ಚುನಾವಣೆಯ ಮತ ಎಣಿಕೆಯು ಅಳ್ನಾವರ ಪಟ್ಟಣ ಪಂಚಾಯ್ತಿ ಕಚೇರಿಯಲ್ಲಿ ಹಾಗೂ ಕಲಘಟಗಿ ಪಟ್ಟಣ ಪಂಚಾಯ್ತಿ ಚುನಾವಣೆಯ ಮತ ಎಣಿಕೆಯು ಕಲಘಟಗಿ ತಹಶೀಲ್ದಾರ ಕಚೇರಿಯಲ್ಲಿ ನಡೆಯಲಿದೆ.

ಅಂದು ಬೆಳಿಗ್ಗೆ 8ಕ್ಕೆ ಮತ ಎಣಿಕೆ ಆರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ತಿಳಿಸಿದರು. ಮೂರು ನಗರ ಸ್ಥಳೀಯ ಸಂಸ್ಥೆಗಳಿಗೆ ಜರುಗಿದ ಚುನಾವಣೆಯಲ್ಲಿ ಉತ್ಸಾಹದಿಂದ ಶಾಂತಿಯುತವಾಗಿ ಮತದಾನ ಮಾಡಿದ ಮತದಾರರಿಗೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.