ADVERTISEMENT

ಎಲ್‌ಆರ್‌ಟಿ ಬಂದರೆ ಬಿಆರ್‌ಟಿಎಸ್‌ ಸ್ಥಗಿತ: ಸಚಿವ ಸಂತೋಷ ಲಾಡ್‌

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2025, 4:44 IST
Last Updated 8 ನವೆಂಬರ್ 2025, 4:44 IST
ಸಂತೋಷ ಲಾಡ್‌
ಸಂತೋಷ ಲಾಡ್‌   

ಹುಬ್ಬಳ್ಳಿ: ‘ಹುಬ್ಬಳ್ಳಿ– ಧಾರವಾಡ ಮಹಾನಗರದ ಮಧ್ಯೆ ಎಲ್‌ಆರ್‌ಟಿ (ಲೈಟ್ ರೈಲ್ ಟ್ರಾನ್ಸಿಟ್) ಯೋಜನೆ ಅನುಷ್ಠಾನಕ್ಕೆ ಸರ್ಕಾರ ಒಪ್ಪಿಕೊಂಡರೆ, ಈಗಾಗಲೇ ಕಾರ್ಯಾಚರಣೆಯಲ್ಲಿರುವ ಬಿಆರ್‌ಟಿಎಸ್‌ ಯೋಜನೆ ಸ್ಥಗಿತವಾಗಲಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಹೇಳಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಾರ್ವಜನಿಕ– ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ ಮಾದರಿ) ಎಲ್‌ಆರ್‌ಟಿ ಯೋಜನೆ ಅನುಷ್ಠಾನವಾಗಲಿದ್ದು, ಸಾಧಕ–ಬಾಧಕದ ಕುರಿತು ಚರ್ಚೆ ನಡೆಯುತ್ತಿದೆ. ಕಂಪನಿಯೊಂದು ಸ್ವಯಂ ಪ್ರೇರಿತವಾಗಿ ವಿಸ್ತ್ರತ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಿದ್ದು, ಎರಡು ವಾರದಲ್ಲಿ ಸರ್ಕಾರಕ್ಕೆ ಸಲ್ಲಿಕೆ ಮಾಡಲಿದೆ’ ಎಂದರು.

‘ಎಲ್‌ಆರ್‌ಟಿ ಹೇಗೆ ಕಾರ್ಯಗತಗೊಳ್ಳಲಿದೆ ಎನ್ನುವ ಕುರಿತು ಅವಳಿನಗರ ಮಧ್ಯದ 20 ಕಿ.ಮೀ. ವ್ಯಾಪ್ತಿಯ ವಿಡಿಯೊ ಸಿದ್ಧಪಡಿಸಿ ತೋರಿಸಬೇಕು ಎಂದು ಕಂಪನಿಗೆ ಸೂಚಿಸಲಾಗಿತ್ತು. ಹೀಗಾಗಿ ಡಿಪಿಆರ್‌ ತುಸು ವಿಳಂಬವಾಗಿತ್ತು. ಬಿಆರ್‌ಟಿಎಸ್‌ ಯೋಜನೆಗೆ ವಿಶ್ವಬ್ಯಾಂಕ್‌ ಸಾಲವೇನಾದರೂ ನೀಡಿದ್ದರೆ, ಸರ್ಕಾರವೇ ನೋಡಿಕೊಳ್ಳುತ್ತದೆ. ಎಲ್‌ಆರ್‌ಟಿ ಅಂತರರಾಷ್ಟ್ರೀಯ ಗುಣಮಟ್ಟದ ಯೋಜನೆಯಾಗಿದ್ದು, ಖರ್ಚುವೆಚ್ಚದ ಮೇಲೆ ನಿರ್ಧಾರವಾಗಲಿದೆ’ ಎಂದರು.

ADVERTISEMENT

‘ಧಾರವಾಡ– ಬೆಳಗಾವಿ ನೂತನ ರೈಲು ಮಾರ್ಗದ ಹಳೇ ಪ್ರಸ್ತಾವ ಬದಲಿಸಿ, ಹೊಸ ಪ್ರಸ್ತಾವಕ್ಕೆ ಒಪ್ಪಿಗೆ ನೀಡಿದ್ದೇ ರೈಲ್ವೆ ಇಲಾಖೆ. ಈಗ ಹೊಸ ಪ್ರಸ್ತಾವ ಬೇಡ ಹಳೇ ಪ್ರಸ್ತಾವ ಬೇಕು ಎನ್ನುತ್ತಿದೆ. ಹಳೆಯದಕ್ಕೆ ರೈತರು ಭೂಮಿ ಬಿಟ್ಟುಕೊಡಲು ಒಪ್ಪುತ್ತಿಲ್ಲ, ನಾವು ಬಲವಂತ ಮಾಡಲು ಸಾಧ್ಯವಿಲ್ಲ’ ಎಂದು ಲಾಡ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.