ADVERTISEMENT

ಮಹದಾಯಿ: ಕಾಮಗಾರಿಗೆ ಕೂಡಿ ಬಾರದ ಕಾಲ

ಬಳಕೆಯಾಗದ ಬಜೆಟ್‌ನಲ್ಲಿ ಘೋಷಿಸಿದ್ದ ₹500 ಕೋಟಿ ಅನುದಾನ

ಬಸವರಾಜ ಹವಾಲ್ದಾರ
Published 11 ಫೆಬ್ರುವರಿ 2022, 2:47 IST
Last Updated 11 ಫೆಬ್ರುವರಿ 2022, 2:47 IST
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಕಣಕುಂಬಿ ಅರಣ್ಯ ಪ್ರದೇಶದಲ್ಲಿ ಹರಿಯುತ್ತಿರುವ ಮಹದಾಯಿ ನದಿ (ಸಂಗ್ರಹ ಚಿತ್ರ)
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಕಣಕುಂಬಿ ಅರಣ್ಯ ಪ್ರದೇಶದಲ್ಲಿ ಹರಿಯುತ್ತಿರುವ ಮಹದಾಯಿ ನದಿ (ಸಂಗ್ರಹ ಚಿತ್ರ)   

ಹುಬ್ಬಳ್ಳಿ: ಕಳಸಾ–ಬಂಡೂರಿ ಮಹದಾಯಿ ತಿರುವು ಯೋಜನೆಯಡಿ ನ್ಯಾಯ ಮಂಡಳಿ ರಾಜ್ಯಕ್ಕೆ ಒಟ್ಟು 13.42 ಟಿಎಂಸಿ ಅಡಿ ನೀರು ಹಂಚಿಕೆ ಮಾಡಿದಾಗ ಈ ಭಾಗದ ರೈತರ ಸಂಭ್ರಮ ಮುಗಿಲು ಮುಟ್ಟಿತ್ತು. ನೀರು ಹರಿಯುವ ಕನಸು ಕಂಡಿದ್ದರು. ನ್ಯಾಯ ಮಂಡಳಿ ತೀರ್ಪು ನೀಡಿ ಮೂರು ವರ್ಷಗಳೇ ಕಳೆದು ಹೋಗಿವೆ. ಆದರೆ, ಕಾಮಗಾರಿ ಆರಂಭಕ್ಕೆ ಮಾತ್ರ ಇನ್ನೂ ಮುಹೂರ್ತ ಕೂಡಿ ಬಂದಿಲ್ಲ.

ರಾಜ್ಯ ಸರ್ಕಾರವುಮಹದಾಯಿ ನೀರಿನ ಯೋಜನೆ ಜಾರಿಗಾಗಿ ₹1,677 ಕೋಟಿ ಮೊತ್ತಕ್ಕೆ 2021–22ರ ಬಜೆಟ್‌ನಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಿತ್ತು. ಅದಕ್ಕೂ ಮೊದಲಿನ ಬಜೆಟ್‌ನಲ್ಲಿ (2020–21) ಈ ಕಾಮಗಾರಿಗೆ ₹ 500 ಕೋಟಿ ನೀಡಲಾಗಿತ್ತು. ಅನುದಾನ ಘೋಷಿಸಿ ಎರಡು ವರ್ಷಗಳೇ ಕಳೆದರೂ, ಬಳಕೆ ಮಾತ್ರ ಸಾಧ್ಯವಾಗಿಲ್ಲ. ಕಾಮಗಾರಿ ಆರಂಭ ವಿಳಂಬವಾದಷ್ಟೂ ವೆಚ್ಚ ಹೆಚ್ಚಾಗಲಿದೆ.

ಕಳಸಾ–ಬಂಡೂರಿ ತಿರುವಿನಿಂದ ರಾಜ್ಯಕ್ಕೆ 32.5 ಟಿಎಂಸಿ ಅಡಿ ನೀರು ಬೇಕೆಂದು ರಾಜ್ಯ ಸರ್ಕಾರ ವಾದ ಮಂಡಿಸಿತ್ತು. ನ್ಯಾಯ ಮಂಡಳಿ ಕಳಸಾದಿಂದ 1.72 ಟಿಎಂಸಿ ಅಡಿ, ಬಂಡೂರಿಯಿಂದ 2.18 ಟಿಎಂಸಿ ಅಡಿ, ಮಹದಾಯಿ ಕಣಿವೆ ಪ್ರದೇಶದ ಜನರ ಕುಡಿಯುವ ನೀರಿಗಾಗಿ 1.50 ಟಿಎಂಸಿ ಅಡಿ ಹಾಗೂ 8.02 ಟಿಎಂಸಿ ಅಡಿ ಜಲ ವಿದ್ಯುತ್‌ಗೆ (ವಿದ್ಯುತ್ ಉತ್ಪಾದನೆ ನಂತರ ನದಿ ಹರಿಬಿಡಲಾಗುತ್ತದೆ) ಬಳಸಿಕೊಳ್ಳಬಹುದಾಗಿದೆ.

ADVERTISEMENT

ಕೇಂದ್ರ ಸರ್ಕಾರ 2020 ಫೆ.27 ರಂದು ನ್ಯಾಯ ಮಂಡಳಿ ತೀರ್ಪನ್ನು ಗೆಜೆಟ್‌ನಲ್ಲಿ ಪ್ರಕಟಿಸಿದೆ. ಆದರೆ, ಇನ್ನೂ ಕೇಂದ್ರದ ವಿವಿಧ ಇಲಾಖೆಗಳ ಅನುಮತಿ ಸಿಕ್ಕಿಲ್ಲ. ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಸರ್ಕಾರವಿದ್ದರೆ ಅಭಿವೃದ್ಧಿಗೆ ವೇಗ ದೊರೆಯುತ್ತದೆ. ಅಧಿಕಾರ ಸಿಕ್ಕರೆ ಕೂಡಲೇ ಕಾಮಗಾರಿ ಆರಂಭಿಸಲಾಗುವುದು ಎಂದು ಬಿಜೆಪಿ ನಾಯಕರು ಹೇಳಿದ್ದರು. ವರ್ಷಗಳೇ ಕಳೆಯುತ್ತಿದ್ದರೂ ಕುಡಿಯುವ ನೀರಿನ ಯೋಜನೆ ಅನುಮತಿ ದೊರೆಕಿಸಿಕೊಡಲು ಸಾಧ್ಯವಾಗಿಲ್ಲ.

ಸುಪ್ರೀಂ ಕೋರ್ಟ್‌ ಮೊರೆ: ನ್ಯಾಯ ಮಂಡಳಿ ತೀರ್ಪು ನೀಡಿ, ಕೇಂದ್ರ ಸರ್ಕಾರ ಗೆಜೆಟ್‌ ಹೊರಡಿಸಿದ ನಂತರವೂ ರೈತರಿಗೆ ನೀರು ದೊರೆತಿಲ್ಲ. ಕಾಮಗಾರಿ ಆರಂಭಿಸಲು ರಾಜ್ಯ ಸರ್ಕಾರಕ್ಕೆ ಸೂಚಿಸಬೇಕು ಎಂದು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗುವುದು ಎಂದುರೈತ ಸೇನಾ ರಾಜ್ಯ ಘಟಕದ ಅಧ್ಯಕ್ಷ ವೀರೇಶ ಸೊಬರದಮಠ ‘ಪ್ರಜಾವಾಣಿ’ಗೆ ತಿಳಿಸಿದರು.

ಫೆ.15ರ ನಂತರ ಮಹದಾಯಿ ನೀರಿಗಾಗಿ ಮತ್ತೆ ಹೋರಾಟ ಆರಂಭಿಸಲಾಗುವುದು. ಬೆಂಗಳೂರು ಚಲೋ, ಪ್ರತಿಭಟನೆ ಮೂಲಕ ಹೋರಾಟಕ್ಕೆ ಚಾಲನೆ ನೀಡಲಾಗುವುದು. ಹೋರಾಟವಿಲ್ಲದೆ ನೀರು ಸಿಗುವ ಸಾಧ್ಯತೆಗಳು ಕಾಣುತ್ತಿಲ್ಲ ಎಂದು ಅವರು ಹೇಳಿದರು.

ನೀರಿನ ಬಳಕೆ ಆರಂಭವಾದರೆ, ಗದಗ, ಧಾರವಾಡ, ಬಾಗಲಕೋಟೆ ಜಿಲ್ಲೆಗಳ ನೂರಾರು ಹಳ್ಳಿಗಳ ಜನರ ಕುಡಿಯುವ ನೀರಿನ ಬವಣೆ ನೀಗಲಿದೆ.ಮಹದಾಯಿ ನೀರಿಗಾಗಿ ಹೋರಾಟ ಮಾಡಿದ್ದ ಬಸವರಾಜ ಬೊಮ್ಮಾಯಿ ಅವರೇ ಮುಖ್ಯಮಂತ್ರಿಯಾಗಿದ್ದಾರೆ. ಶಂಕರಪಾಟೀಲ ಮುನೇನಕೊಪ್ಪ ಅವರು ಸಚಿವರಾಗಿದ್ದಾರೆ. ಗೋವಾ, ಕರ್ನಾಟಕ, ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗಲೂ ನೀರು ಬಳಕೆ ಸಾಧ್ಯವಾಗಿಲ್ಲ. ಗೋವಾ ವಿಧಾನಸಭೆ ಚುನಾವಣೆಯ ನಂತರ ಅಸ್ತಿತ್ವಕ್ಕೆ ಬರಲಿರುವ ಹೊಸ ಸರ್ಕಾರ ಯಾವ ರೀತಿ ಅಡ್ಡಗಾಲು ಹಾಕಲಿದೆಯೋ ಎಂಬ ಆತಂಕ ರೈತರನ್ನು ಕಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.