
ನವಲಗುಂದ: ಗೋವಿನಜೋಳ ಬೆಲೆ ನಿಗದಿ ಮತ್ತು ಖರೀದಿ ಕೇಂದ್ರ ಪ್ರಾರಂಭಿಸಬೇಕು. ಬೆಳೆ ಪರಿಹಾರವನ್ನು ಸಮರ್ಪಕವಾಗಿ ವಿತರಿಸಬೇಕು ಎಂದು ಒತ್ತಾಯಿಸಿ ಬಿಜೆಪಿ ನವಲಗುಂದ ಮಂಡಲದವರು ಶನಿವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಯಿತು. ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಮಾತನಾಡಿ, ಸತತವಾಗಿ ಸುರಿದ ಮಳೆಯಿಂದ ಮೆಕ್ಕೆಜೋಳ, ಈರುಳ್ಳಿ ಇತರ ಬೆಳೆಗಳು ಹಾನಿಯಾಗಿದ್ದವು. ಅಳಿದುಳಿದ ಮೆಕ್ಕೆಜೋಳ ಮಾರಾಟ ಮಾಡಲು ಬೆಲೆ ಕುಸಿದಿದೆ. ಬೆಳೆಗಾರರು ಸಂಕಷ್ಟಕ್ಕೀಡಾಗಿದ್ಧಾರೆ ಎಂದರು.
‘ಕೇಂದ್ರ ಸರ್ಕಾರವು ಮೆಕ್ಕೆಜೋಳಕ್ಕೆ ಕ್ವಿಂಟಲ್‌ಗೆ ₹2,400 ಬೆಂಬಲ ಬೆಲೆ ನಿಗದಿಪಡಿಸಿದೆ. ಮಾರುಕಟ್ಟೆಯಲ್ಲಿ ಮೆಕ್ಕೆಜೋಳ ಬೆಲೆ ₹ 1600 ಇದೆ. ರಾಜ್ಯ ಸರ್ಕಾರ ಖರೀದಿ ಕೇಂದ್ರ ಪ್ರಾರಂಭ ಮಾಡಿ ರೈತರ ಕಷ್ಟಕ್ಕೆ ಸ್ಪಂದಿಸಬೇಕು‘ ಎಂದು ಒತ್ತಾಯಿಸಿದರು.
‘ಕೇಂದ್ರ ಸರ್ಕಾರದ ಎಂಎಸ್‌ಪಿ ದರ ₹2400 ಹಾಗೂ ರಾಜ್ಯ ಸರ್ಕಾರದ ಪ್ರೋತ್ಸಾಹಧನ ₹600 ಸೇರಿಸಿ ಒಟ್ಟು ₹3 ಸಾವಿರ ಪ್ರತಿ ಕ್ವಿಂಟಲ್‌ಗೆ ದರ ನಿಗದಿ ಪಡಿಸಬೇಕು. ಹಾನಿಯಾದ ಎಲ್ಲ ಬೆಳೆಗಳಿಗೂ ಪರಿಹಾರ ವಿತರಿಸಬೇಕು’ ಎಂದು ಒತ್ತಾಯಿಸಿದರು
ಮಂಡಲ ಅಧ್ಯಕ್ಷ ಗಂಗಪ್ಪ ಮನಮಿ, ಎ.ಬಿ.ಹಿರೇಮಠ, ಪ್ರಭು ಇಬ್ರಾಹಿಂಪುರ, ಜಯಪ್ರಕಾಶ ಬದಾಮಿ, ನಾಗೇಶ ಮುದಿಗೌಡ್ರ, ಷಣ್ಮುಖ ಗುರಿಕಾರ, ಮಂಜುನಾಥ್ ಗಣಿ, ಸಿದ್ದಣ್ಣ ಕಿಟಗೇರಿ, ಸಿದ್ದನಗೌಡ ಪಾಟೀಲ್, ಬಸವರಾಜ ಕಟ್ಟಿಮನಿ, ಬಸವರಾಜ್ ಚಕ್ರಸಾಲಿ, ಮಹಾಂತೇಶ ಕಲಾಲ, ಶರಣಪ್ಪ ಹಕ್ಕರಕಿ, ಬಸವರಾಜ ಕಾತರಕಿ, ದೇವರಾಜ ದಡಿಬಾವಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.