ADVERTISEMENT

ಸಂಕ್ರಮಣ ಸಡಗರ; ಎಳ್ಳು ಬೆಲ್ಲ ಹಂಚಿ ಸಂಭ್ರಮ

ದೇವಾಲಯಗಳಲ್ಲಿ ವಿಶೇಷ ಪೂಜೆ; ಗ್ರಾಮೀಣ ಭಾಗದಲ್ಲಿ ಸುಗ್ಗಿಯ ಹಿಗ್ಗು

​ಪ್ರಜಾವಾಣಿ ವಾರ್ತೆ
Published 15 ಜನವರಿ 2022, 8:39 IST
Last Updated 15 ಜನವರಿ 2022, 8:39 IST
ಹುಬ್ಬಳ್ಳಿಯ ಗೂಡ್‌ಶೆಡ್‌ ರಸ್ತೆಯ ಮನೆಗಳಲ್ಲಿ ಸಂಕ್ರಾಂತಿ ಅಂಗವಾಗಿ ಶುಕ್ರವಾರ ಮಹಿಳೆಯರು ಅಡುಗೆ ತಯಾರಿಸಿದರು
ಹುಬ್ಬಳ್ಳಿಯ ಗೂಡ್‌ಶೆಡ್‌ ರಸ್ತೆಯ ಮನೆಗಳಲ್ಲಿ ಸಂಕ್ರಾಂತಿ ಅಂಗವಾಗಿ ಶುಕ್ರವಾರ ಮಹಿಳೆಯರು ಅಡುಗೆ ತಯಾರಿಸಿದರು   

ಧಾರವಾಡ:ಮಾನವೀಯ ಸಂಬಂಧ ಬೆಸೆಯುವ ಉತ್ತರಾಯಣ ಪುಣ್ಯಕಾಲದ ಮಕರ ಸಂಕ್ರಾಂತಿ ಹಬ್ಬವನ್ನು ಜಿಲ್ಲೆಯಲ್ಲಿ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.

ಬೆಳಿಗ್ಗೆ ಜನ ಅಂಗಡಿಗಳಿಗೆ ತೆರಳಿ ಎಳ್ಳು–ಬೆಲ್ಲ ಖರೀದಿಸಿ, ಮನೆಗಳಲ್ಲಿ ತಳಿರು ತೋರಣಗಳಿಂದ ಸಿಂಗರಿಸಿ ವಿಶೇಷ ಪೂಜೆ ಸಲ್ಲಿಸಿದರು. ನಗರದ ವಿವಿಧ ದೇವಾಲಯಗಳಲ್ಲಿ ಧಾರ್ಮಿಕ ಕೈಂಕರ್ಯಗಳನ್ನು ನೆರವೇರಿಸಿ ಪೂಜೆ ಸಲ್ಲಿಸಲಾಯಿತು.

ಎಳ್ಳು ಬೆಲ್ಲ(ಸಕ್ಕರೆ) ಶೇಂಗಾ, ಸಕ್ಕರೆ ಅಚ್ಚು, ಕೊಬ್ಬರಿ, ಕಬ್ಬು ಬೆರೆಸಿದ ಸಿಹಿಯನ್ನು ದೇವರಿಗೆ ನೈವೇದ್ಯ ಮಾಡಿ ನಂತರ ಹೆಣ್ಣು ಮಕ್ಕಳು ತಮ್ಮ ಆಪ್ತರು, ನೆರೆ ಹೊರೆಯವರಿಗೆ ಸಿಹಿ ಹಂಚಿ ಸಂಭ್ರಮಿಸಿದರು.

ADVERTISEMENT

ಮಾದ್ಲಿ, ಸಜ್ಜಿ ರೊಟ್ಟಿ, ಜೋಳದ ರೊಟ್ಟಿ, ಹೋಳಿಗೆ, ಬದನೆಕಾಯಿ ಬರ್ತಾ, ಕಡ್ಲಿ ಚಟ್ನಿ, ಶೇಂಗಾ ಚಟ್ನಿ ಸೇರಿದಂತೆ ಬಗೆ ಬಗೆಯ ಸಿಹಿ ತಿಂಡಿಗಳು, ಇನ್ನಿತರ ಭಕ್ಷ್ಯ ಭೋಜನಗಳನ್ನು ಮನೆಯಲ್ಲಿ ಕುಟುಂಬದ ಸದಸ್ಯರು ಸವಿದರು.

ಗ್ರಾಮೀಣ ಪ್ರದೇಶಗಳಲ್ಲಿ ರೈತಾಪಿ ವರ್ಗ ಸಂಕ್ರಾಂತಿ ಹಬ್ಬವನ್ನು ಭಕ್ತಿ ಭಾವವೊಂದಿಗೆ ಆಚರಿಸಿದರು. ಹಳ್ಳಿಗಳಲ್ಲಿ ಬೆಳಿಗ್ಗೆಯಿಂದಲೇ ಹಬ್ಬದ ಸಡಗರ ಮನೆ ಮಾಡಿತ್ತು. ಸುಗ್ಗಿ ಹಬ್ಬ ಎಂದೇ ಹೆಸರಾಗಿರುವ ಮಕರ ಸಂಕ್ರಾಂತಿಯ ಸಡಗರ ಗ್ರಾಮೀಣ ಪ್ರದೇಶದಲ್ಲೂ ಕಳೆಕಳೆಯಾಗಿತ್ತು. ಗ್ರಾಮಾಂತರ ಪ್ರದೇಶದ ಜನರು ತಮ್ಮ ಕಣ, ಹೊಲಗಳಲ್ಲಿ ಧಾನ್ಯ, ಕಬ್ಬಿನ ರಾಶಿ ಪೂಜೆ ಮಾಡಿದರು. ರಾಶಿಯ ಪಕ್ಕದಲ್ಲೇ ಊಟ ಮಾಡಿ, ಮುಂದಿನ ದಿನಗಳಲ್ಲಿ ಉತ್ತಮ ಮಳೆ-ಬೆಳೆಗೆ ಪ್ರಾರ್ಥಿಸಿದರು.

ಸಂಜೆ ನಗರದ ವಿವಿಧ ಬಡಾವಣೆಗಳಲ್ಲಿ ಸ್ನೇಹಿತರು, ಸಂಬಂಧಿಕರ ಮನೆಗಳಿಗೆ ತೆರಳಿ ಎಳ್ಳು–ಬೆಲ್ಲ ಹಂಚಿ ಸ್ನೇಹ ಸಂಬಂಧ ಗಟ್ಟಿಗೊಳಿಸುವ ಎಳ್ಳು–ಬೆಲ್ಲ ತಿಂದು ಒಳ್ಳೊಳ್ಳೆ ಮಾತಾಡೂಣ... ಎಂದು ಶುಭಾಷಯಗಳನ್ನು ವಿನಿಮಯ ಮಾಡಿಕೊಳ್ಳುತ್ತಿರುವ ದೃಶ್ಯಗಳು ಸಾಮಾನ್ಯವಾಗಿತ್ತು.

ನಿಗದಿ, ಮನಗುಂಡಿ, ಮನಸೂರು, ದೇವರಹುಬ್ಬಳ್ಳಿ, ದೇವಗಿರಿ, ಲಾಳಗಟ್ಟಿ, ಮುರಕಟ್ಟಿ ಗ್ರಾಮಗಳಲ್ಲಿಯೂ ಸಂಕ್ರಾಂತಿ ಹಬ್ಬವನ್ನು ಗ್ರಾಮಸ್ಥರು ಸಂಭ್ರಮದಿಂದ ಆಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.