ಹುಬ್ಬಳ್ಳಿ: ‘ಕನ್ನಡ ಹಬ್ಬದ ಆಚರಣೆ ನವೆಂಬರ್ ತಿಂಗಳಿಗಷ್ಟೇ ಸೀಮಿತ ಆಗಬಾರದು. ಪ್ರತಿದಿನವೂ ಕನ್ನಡ ಆರಾಧಿಸಬೇಕು. ಆಗ ಮಾತ್ರ ತಾಯಿ ಭುವನೇಶ್ವರಿ ದೇವಿಯನ್ನು ಪ್ರಾರ್ಥಿಸಿದಂತೆ’ ಎಂದು ಪದ್ಮಶ್ರೀ ಪುರಸ್ಕೃತೆ ಬಿ.ಮಂಜಮ್ಮ ಜೋಗತಿ ಹೇಳಿದರು.
ನಗರದ ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆಯ (ಕೆಎಂಸಿ–ಆರ್‌ಐ) ಕನ್ನಡ ಸಂಘ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ಎರಡು ದಿನ ಹಮ್ಮಿಕೊಂಡಿರುವ ‘ಲಹರಿ’ ಕನ್ನಡ ಹಬ್ಬ- 2025’ ಸಮಾರಂಭಕ್ಕೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.
‘ಪೋಷಕರು ಮಕ್ಕಳನ್ನು ಕನ್ನಡ ಶಾಲೆಯಲ್ಲಿಯೇ ಓದಿಸಬೇಕು. ಆಗ ಮಾತ್ರ ಕನ್ನಡ ಉಳಿಯಲು ಸಾಧ್ಯ. ಬೇರೆ ಭಾಷೆಗಳನ್ನು ಕಲಿಯುವುದು ತಪ್ಪಲ್ಲ. ಆದರೆ, ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕು’ ಎಂದರು.
‘ಕಲಾವಿದರಿಗೆ ರಂಗಭೂಮಿ ಹಾಗೂ ಜಾನಪದ ಕಲೆಯು ಶಕ್ತಿ ತುಂಬುವ ಕೆಲಸ ಮಾಡಿದೆ. ಬೇರೆಯವರ ಹೀಗಳಿಕೆಯ ಮಾತುಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ ಸಾಧನೆಯತ್ತ ಮುನ್ನುಗ್ಗಬೇಕು’ ಎಂದು ತಿಳಿಸಿದರು.
‘ಇಂದಿನ ಯುವಜನತೆಯು ಪೋಷಕರನ್ನು ಗೌರವಿಸುವ ಗುಣ ಬೆಳೆಸಿಕೊಳ್ಳಬೇಕು. ಇಳಿವಯಸ್ಸಿನಲ್ಲಿ ತಂದೆ–ತಾಯಿಯನ್ನು ವೃದ್ಧಾಶ್ರಮಕ್ಕೆ ಸೇರಿಸಿದರೆ, ಮುಂದಿನ ದಿನಗಳಲ್ಲಿ ತಮಗೂ ಈ ಪರಿಸ್ಥಿತಿ ಬರುತ್ತದೆ ಎಂಬುದನ್ನು ಮರೆಯಬಾರದು’ ಎಂದರು.
‘ವೈದ್ಯರು ಮಾಡುವ ಕೆಲಸದಲ್ಲೇ ದೇವರನ್ನು ಕಾಣಬೇಕು. ಸಮಯಪ್ರಜ್ಞೆ ಹಾಗೂ ಕಾಳಜಿಯಿಂದ ಕೆಲಸ ಮಾಡಿದರೆ ರೋಗಿಗಳ ಪಾಲಿಗೆ ವೈದ್ಯರೇ ದೇವರು’ ಎಂದರು.
ಸಾಹಿತಿ ಪ್ರೊ.ಮಾಲತಿ ಪಟ್ಟಣಶೆಟ್ಟಿ ಮಾತನಾಡಿ, ‘ಇಲ್ಲಿನ ವೈದ್ಯಕೀಯ ವಿದ್ಯಾರ್ಥಿಗಳಲ್ಲಿ ಕನ್ನಡ ಭಾಷಾಭಿಮಾನ, ಗೌರವ ಎಲ್ಲರಿಗೂ ಮಾದರಿ. ಇಂತಹ ಕಾರ್ಯಕ್ರಮಗಳು ಪ್ರತಿ ತಿಂಗಳಿಗೊಮ್ಮೆ ನಡೆಯಬೇಕು’ ಎಂದು ತಿಳಿಸಿದರು.
‘ಕನ್ನಡ ಹಬ್ಬ’ ಕೇವಲ ಭಾಷೆಯ ಏಳಿಗೆಗೆ ಸೀಮಿತ ಆಗಬಾರದು. ಸಾಹಿತಿಗಳು, ಕೃತಿ, ಕಥೆ, ಕಾದಂಬರಿ, ಹೋರಾಟಗಾರರು, ಸಾಧಕರ ಬಗ್ಗೆ ತಿಳಿಸುವ ಕೆಲಸ ಆಗಬೇಕು. ಶಿಕ್ಷಣಕ್ಕೆ ಸಾಹಿತ್ಯ ಎಂದಿಗೂ ಅಡ್ಡಬರುವುದಿಲ್ಲ. ಸಾಹಿತ್ಯ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು’ ಎಂದರು.
‘ವೈದ್ಯರು ದೇಹಕ್ಕೆ ಚಿಕಿತ್ಸೆ ನೀಡಿದರೆ, ಸಾಹಿತಿಗಳು ಕಥೆ, ಕಾದಂಬರಿಯಿಂದ ಮನಸ್ಸಿಗೆ ಚಿಕಿತ್ಸೆ ನೀಡುತ್ತಾರೆ. ವೈದ್ಯ ವೃತ್ತಿ ಮಹತ್ವದ್ದು. ವೈದ್ಯರು ಹಣಕ್ಕೆ ಆಸೆಪಡದೆ ಬಡವರಿಗೆ ಉಚಿತವಾಗಿ ಚಿಕಿತ್ಸೆ, ಔಷಧೋಪಚಾರ ನೀಡಬೇಕು’ ಎಂದು ಹೇಳಿದರು.
ಕೆಎಂಸಿ–ಆರ್‌ಐ ನಿರ್ದೇಶಕ ಈಶ್ವರ ಹೊಸಮನಿ, ಸಂಸ್ಥೆಯ ವೈದ್ಯಕೀಯ ಅಧೀಕ್ಷಕ ಡಾ.ರಾಜಶೇಖರ ದ್ಯಾಬೇರಿ, ಡಾ.ಕೆ.ಎಫ್.ಕಮ್ಮಾರ, ಸಿ.ಜಿ.ಜಿನಗ, ಅಂಜನಾ ಡಿ., ಡಾ.ಅನ್ನಪೂರ್ಣ, ಕನ್ನಡ ಸಂಘದ ಉಪಕಾರ್ಯದರ್ಶಿ ಉಮಾ ಚಿಕ್ಕರಡ್ಡಿ, ಕನ್ನಡ ಸಂಘದ ಮಾರ್ಗದರ್ಶಕರಾದ ಡಾ.ಸ್ಮಿತಾ ಎಂ., ಡಾ.ಗೋಪಾಲಕೃಷ್ಣ ಮಿತ್ರ ಇದ್ದರು.
ಸುರಭಿ ಪ್ರಾರ್ಥಿಸಿದರು. ಸದಾನಂದ ಕುಲಕರ್ಣಿ ಹಾಗೂ ದಿವ್ಯಾ ಯಲಿಗಾರ ನಿರೂಪಿಸಿದರು. ಸದಾಶಿವ ಬಟಕುರ್ಕಿ ವಂದಿಸಿದರು.
ಲಿಂಗತ್ವ ಅಲ್ಪಸಂಖ್ಯಾತರಿಗೆ ಅವರಿಷ್ಟದಂತೆ ಬದುಕುವ ಹಕ್ಕು ಇದೆ. ಅವರನ್ನು ಗೌರವಿಸಿ. ಸಮಾಜದಲ್ಲಿ ಎಲ್ಲರಂತೆ ಬದುಕಲು ಅವಕಾಶ ಕಲ್ಪಿಸಿ. ಅವರ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಿ ಮಂಜಮ್ಮ -ಜೋಗತಿ ಪದ್ಮಶ್ರೀ ಪುರಸ್ಕೃತೆ
ಮೆರವಣಿಗೆ; ಗಮನ ಸೆಳೆದ ಕಲಾತಂಡ ಕನ್ನಡ ಹಬ್ಬದ ಅಂಗವಾಗಿ ಕೆಎಂಸಿ–ಆರ್‌ಐ ಸಂಸ್ಥೆಯ ಆವರಣ ಕನ್ನಡದ ಕಂಪಿನಿಂದ ಕಂಗೊಳಿಸುತ್ತಿತ್ತು. ಎಲ್ಲೆಡೆ ಕನ್ನಡದ ಬಾವುಟಗಳು ರಾರಾಜಿಸಿದವು. ವೈದ್ಯರು ವೈದ್ಯಕೀಯ ವಿದ್ಯಾರ್ಥಿಗಳು ಬೋಧಕ ಬೋಧಕೇತರ ಸಿಬ್ಬಂದಿ ಹಳದಿ ಕೆಂಪು ಬಣ್ಣದ ಶಾಲುಗಳನ್ನು ಧರಿಸಿ ಗಮನ ಸೆಳೆದರು. ಸಮಾರಂಭದ ಅಂಗವಾಗಿ ಕಾಲೇಜು ಆವರಣದಲ್ಲಿ ಮೆರವಣಿಗೆ ಮಾಡಲಾಯಿತು. ಡೊಳ್ಳು ಕುಣಿತ ಜಗ್ಗಲಗಿ ಮೇಳ ಗೀಗೀ ಪದ ಸೋಬಾನೆ ಪದ ಶಹನಾಯಿ ವಾದನ ಕೊಳಲು ವಾದನ ಜಾನಪದ ಗೀತೆ ತತ್ವಪದ ಹಾಗೂ ವಾದ್ಯ ಸಂಗೀತವು ಮೆರವಣಿಗೆಗೆ ಮೆರುಗು ನೀಡಿದವು. ಮೂಡಲಗಿಯ ಚೈತನ್ಯ ಶಾಲೆ ವಿದ್ಯಾರ್ಥಿಗಳು ಮಲ್ಲಕಂಬ ಪ್ರದರ್ಶನ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.