ADVERTISEMENT

ಮರಾಠಾ ನಿಗಮ: ಕರವೇ ವಿರೋಧ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2020, 16:42 IST
Last Updated 19 ನವೆಂಬರ್ 2020, 16:42 IST
ಮರಾಠಾ ನಿಗಮ ಸ್ಥಾಪನೆಗೆ ಮುಂದಾದ ಕ್ರಮ ವಿರೋಧಿಸಿ ಹುಬ್ಬಳ್ಳಿಯಲ್ಲಿ ಗುರುವಾರ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಬಣದ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು
ಮರಾಠಾ ನಿಗಮ ಸ್ಥಾಪನೆಗೆ ಮುಂದಾದ ಕ್ರಮ ವಿರೋಧಿಸಿ ಹುಬ್ಬಳ್ಳಿಯಲ್ಲಿ ಗುರುವಾರ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಬಣದ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು   

ಹುಬ್ಬಳ್ಳಿ: ರಾಜ್ಯ ಸರ್ಕಾರ ಮರಾಠಾ ನಿಗಮ ಸ್ಥಾಪಿಸಲು ಮುಂದಾದ ಕ್ರಮಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಬಣ ವಿರೋಧ ವ್ಯಕ್ತಪಡಿಸಿದ್ದು, ಈ ನಿಗಮಕ್ಕೆ ಮೀಸಲಿಟ್ಟಿರುವ ₹50 ಕೋಟಿ ಹಣವನ್ನು ನೆರೆ ಹಾವಳಿಯಿಂದ ಸಂಕಷ್ಟಕ್ಕೆ ಸಿಲುಕಿದ ಉತ್ತರ ಕರ್ನಾಟಕದ ಜನರಿಗೆ ವಿನಿಯೋಗಿಸಬೇಕು ಎಂದು ಆಗ್ರಹಿಸಿದೆ.

ಗುರುವಾರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ವೇದಿಕೆಯ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ‘ವೋಟ್‌ ಬ್ಯಾಂಕ್‌ಗಾಗಿ ರಾಜ್ಯ ಸರ್ಕಾರ ಮರಾಠಾ ನಿಗಮ ಆರಂಭಕ್ಕೆ ಮುಂದಾಗಿದೆ. ಕೋವಿಡ್‌ ಮತ್ತು ನೆರೆ ಹಾವಳಿಯಿಂದ ಉತ್ತರ ಕರ್ನಾಟಕದ ಜನ ತತ್ತರಿಸಿ ಹೋಗಿದ್ದಾರೆ. ಇಂಥ ಸಂಕಷ್ಟದ ಸಮಯದಲ್ಲಿಯೂ ಮರಾಠಾ ಜನರ ಓಲೈಕೆಗೆ ನಿಗಮ ಸ್ಥಾಪನೆ ವಿಚಾರ ಸರಿಯಲ್ಲ. ತಕ್ಷಣವೇ ಇದನ್ನು ಕೈ ಬಿಡಬೇಕು’ ಎಂದು ಸಂಘಟನೆಯ ಹುಬ್ಬಳ್ಳಿ ತಾಲ್ಲೂಕು ಘಟಕದ ಅಧ್ಯಕ್ಷ ರವಿ ಬೇಜವಾಡ ಒತ್ತಾಯಿಸಿದರು.

‘ಮರಾಠಿಗರ ಬೇಡಿಕೆ ಈಡೇರಿಸುವ ಆತುರದಲ್ಲಿ ಕನ್ನಡಿಗರಿಗೆ ಮುಳುವಾಗುವಂಥ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿದೆ. ಒಂದೊಂದು ಭಾಷಿಕರಿಗೆ ನಿಗಮಗಳನ್ನು ಸ್ಥಾಪಿಸಿದರೆ, ರಾಜ್ಯದಲ್ಲಿ ನೆಲೆಸಿರುವ ಅನ್ಯ ಭಾಷಿಕರು ಕೂಡ ತಮಗೆ ನಿಗಮ ಬೇಕು ಎನ್ನುವ ಬೇಡಿಕೆ ಮುಂದಿಡಬಹುದು. ಒಂದು ವೇಳೆ ಹೀಗಾದರೆ ಕನ್ನಡಿಗರು ತಾಯ್ನಾಡಿನಲ್ಲಿಯೇ ಭೀತಿಯಿಂದ ಬದುಕಬೇಕಾಗುತ್ತದೆ. ಆದ್ದರಿಂದ ಮರಾಠಾ ನಿಗಮ ಸ್ಥಾಪನೆ ನಿರ್ಧಾರದಿಂದ ಸರ್ಕಾರ ಹಿಂದೆ ಸರಿಯದಿದ್ದರೆ ರಾಜ್ಯದಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.