ADVERTISEMENT

ಧಾರವಾಡ: ₹5 ವೆಚ್ಚದಲ್ಲಿ ಗಣಿತ ರಸಪ್ರಶ್ನೆ ಫಲಕ!

ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳ ಪ್ರಯೋಗ

ಬಿ.ಜೆ.ಧನ್ಯಪ್ರಸಾದ್
Published 30 ಆಗಸ್ಟ್ 2023, 5:55 IST
Last Updated 30 ಆಗಸ್ಟ್ 2023, 5:55 IST
ಧಾರವಾಡ ಜಿಲ್ಲೆಯ ಕಲಘಟಗಿ ತಾಲ್ಲೂಕಿನ ಕುರುವಿನಕೊಪ್ಪದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಸೋಮಲಿಂಗ ಉಣಕಲ್ ಮತ್ತು ವಿನಾಯಕ ದೇಶತ್ ಸಿದ್ಧಪಡಿಸಿದ ಗಣಿತ ರಸಪ್ರಶ್ನೆ ಫಲಕದ ಮಾದರಿ
ಧಾರವಾಡ ಜಿಲ್ಲೆಯ ಕಲಘಟಗಿ ತಾಲ್ಲೂಕಿನ ಕುರುವಿನಕೊಪ್ಪದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಸೋಮಲಿಂಗ ಉಣಕಲ್ ಮತ್ತು ವಿನಾಯಕ ದೇಶತ್ ಸಿದ್ಧಪಡಿಸಿದ ಗಣಿತ ರಸಪ್ರಶ್ನೆ ಫಲಕದ ಮಾದರಿ    ಪ್ರಜಾವಾಣಿ ಚಿತ್ರ: ಬಿ.ಎಂ.ಕೇದಾರನಾಥ

ಧಾರವಾಡ: ಜಿಲ್ಲೆಯ ಕಲಘಟಗಿ ತಾಲ್ಲೂಕಿನ ಕುರುವಿನಕೊಪ್ಪದ ಸರ್ಕಾರಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿಗಳಾದ ಸೋಮಲಿಂಗ ಉಣಕಲ್ ಮತ್ತು ವಿನಾಯಕ ದೇಶತ್ ಅವರು ವಿದ್ಯುತ್‌ ಮಂಡಲ (ಎಲೆಕ್ಟ್ರಿಕ್‌ ಸರ್ಕಿಟ್) ಕಾರ್ಯವಿಧಾನ ಆಧರಿಸಿ ಗಣಿತ ರಸಪ್ರಶ್ನೆ ಫಲಕ ಮಾದರಿ ಸಿದ್ಧಪಡಿಸಿದ್ದಾರೆ.

‘ಎಲಿಮೀಟರ್‌’, ‘ಚಿಕ್ಕ ಫ್ಯಾನ್‌’, ‘ವೈರ್‌’, ‘ರಟ್ಟಿನ ಬಾಕ್ಸ್‌’, ‘6 ವ್ಯಾಟ್‌ ಬ್ಯಾಟರಿ’, ‘ಎರಡು ಲೋಹದ ಕಡ್ಡಿ’ ಬಳಸಿ ಈ ಪ್ರಶ್ನೆ ಮತ್ತು ಉತ್ತರ ಹೊಂದಿಕೆ ಮಾದರಿಯನ್ನು ₹ 5 ವೆಚ್ಚದಲ್ಲಿ ಅವರು ತಯಾರಿಸಿದ್ದಾರೆ.

ಮಾದರಿಯ ಫಲಕದಲ್ಲಿ ಪ್ರಶ್ನೆ ಮತ್ತು ಉತ್ತರದ ಎರಡು ಭಾಗಗಳು (ಪ್ರಶ್ನೆ– ಉತ್ತರ ಹೊಂದಿಸುವ ವಿಧಾನ) ಇವೆ.

ADVERTISEMENT

ಪ್ರಶ್ನೆಗಳು ಸಾಲಿನಲ್ಲಿ ರೇಖಾಗಣಿತದ ಪಿತಾಮಹ, ಶೂನ್ಯ ಕಂಡುಹಿಡಿದವರು ಸಹಿತ  ಆರು ಪ್ರಶ್ನೆಗಳು ಇವೆ. ಪಕ್ಕದಲ್ಲಿ ಉತ್ತರ ಸಾಲಿನಲ್ಲಿ ಯುಕ್ಲಿಡ್‌, ಆರ್ಯಭಟ.. ಆರು ಉತ್ತರಗಳು ಇವೆ.

ಫಲಕದ ಮೇಲ್ಭಾಗದಲ್ಲಿ ಸಣ್ಣ ಫ್ಯಾನ್‌ ಇದೆ. ಪ್ರತಿ ಪ್ರಶ್ನೆ ಮತ್ತು ಉತ್ತರದ ಪಕ್ಕದಲ್ಲಿ ‘ಸ್ಕ್ರೂ‘ ಅಳವಡಿಸಲಾಗಿದೆ. ವೈರ್‌ ಜೋಡಿಸಿದ ಎರಡು ಲೋಹದ ಕಡ್ಡಿಗಳನ್ನು ಎರಡೂ ಸಾಲುಗಳ ತುದಿ ಭಾಗದಲ್ಲಿ ಅಳವಡಿಸಲಾಗಿದೆ.

ಪ್ರಶ್ನೆ ಸಾಲಿನ ಲೋಹದ ಕಡ್ಡಿಯನ್ನು ಒಂದು ಪ್ರಶ್ನೆಗೆ (ಸ್ಕ್ರೂ) ಹಿಡಿದು ಉತ್ತರ ಸಾಲಿನ ಕಡ್ಡಿಯನ್ನು ಆ ಪ್ರಶ್ನೆಗೆ ಸರಿಯಾದ ಉತ್ತರಕ್ಕೆ (ಸ್ಕ್ರೂ) ತಾಗಿಸಿದಾಗ ಮಾತ್ರ ಫ್ಯಾನ್‌ ತಿರುಗುತ್ತದೆ. ಬೇರೊಂದು ಉತ್ತರಕ್ಕೆ ತಾಗಿಸಿದರೆ ಫ್ಯಾನ್‌ ತಿರುಗುವುದಿಲ್ಲ.

ಸರ್ಕಿಟ್‌ನಲ್ಲಿ ಪ್ರಶ್ನೆ ಮತ್ತು ಅದರ ಸರಿ ಉತ್ತರಕ್ಕೆ ಆಯಾ ವೈರ್‌ ಜೋಡಿಸಿ ಈ ಮಾದರಿ ಸಿದ್ಧಪಡಿಸಲಾಗಿದೆ.

‘ಧಾರವಾಡದ ಸ್ವಾಮಿ ವಿವೇಕಾನಂದ ಯೂತ್‌ ಮೂವ್‌ಮೆಂಟ್‌ ಸಂಸ್ಥೆಯ ‘ಡಿಐವೈ’ (ಡೂ ಇಟ್‌ ಯುವರ್‌ಸೆಲ್ಪ್‌) ಕಿಟ್‌ನಲ್ಲಿನ ಅಂಶಗಳು ಹಾಗೂ ಶಾಲೆಯ ವಿಜ್ಞಾನ ಶಿಕ್ಷಕರು ತಿಳಿಸಿದ ಅಂಶಗಳನ್ನು ಆಧರಿಸಿ ಮಾದರಿ ಸಿದ್ಧಪಡಿಸಿದೆವು. ಪಾಠದಲ್ಲಿನ ವಿಷಯಗಳನ್ನು ಚೆನ್ನಾಗಿ ಮನದಟ್ಟು ಮಾಡಿಕೊಳ್ಳಲು ಈ ಮಾದರಿ ಸಹಕಾರಿಯಾಗಿದೆ. ಮನೆಯಲ್ಲಿದ್ದ ವಸ್ತುಗಳನ್ನೇ ಬಳಸಿ ಮಾದರಿ ತಯಾರಿಸಿದೆವು. ಮಾದರಿ ತಯಾರಿಗೆ ₹ 5 ವೆಚ್ಚವಾಗಿದೆ’ ಎಂದು ವಿದ್ಯಾರ್ಥಿ ಸೋಮಲಿಂಗ ಉಣಕಲ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಗಣಿತ ಮಾತ್ರವಲ್ಲ ವಿಜ್ಞಾನ, ಸಮಾಜ ವಿಜ್ಞಾನ, ಇತಿಹಾಸ, ಕನ್ನಡ, ಇಂಗ್ಲಿಷ್‌, ಹಿಂದಿ ಎಲ್ಲ ವಿಷಯಗಳ ಪಾಠಗಳಿಗೆ ಸಂಬಂಧಿಸಿದಂತೆಯೂ ಈ ರಸಪ್ರಶ್ನೆ ಫಲಕ ಮಾದರಿ ಸಿದ್ಧಪಡಿಸಬಹುದು. ವಿಷಯ ಗ್ರಹಿಸಲು, ನೆನಪಿನಲ್ಲಿಟ್ಟುಕೊಳ್ಳಲು ಅನುಕೂಲವಾಗುತ್ತದೆ’ ಎಂದು ಅವರು ತಿಳಿಸಿದರು.

ಗಣಿತ ರಸಪ್ರಶ್ನೆ ಮಾದರಿಯಲ್ಲಿ ಬಳಸಿರುವ ಪರಿಕರಗಳು
ಪೈ ದಿನಾಚರಣೆ ಪ್ರಯುಕ್ತ ಗಣಿತ ಮಾದರಿಗಳ ತಯಾರಿಕೆ ಏರ್ಪಡಿಸಿದ್ದೆವು. ವಿದ್ಯಾರ್ಥಿಗಳು 23 ಮಾದರಿಗಳನ್ನು ಸಿದ್ಧಪಡಿಸಿದ್ದರು. ಸೋಮಲಿಂಗ ಉಣಕಲ್‌ ಹಾಗೂ ವಿನಾಯಕ ದೇಶತ್‌ ಪ್ರಥಮ ಬಹುಮಾನ ಗಳಿಸಿದ್ದಾರೆ.
-ಸ್ಮಿತಾ ಕೆ.ಡಿ. ಗಣಿತ ಶಿಕ್ಷಕಿ ಸರ್ಕಾರಿ ಪ್ರೌಢಶಾಲೆ ಕುರುವಿನಕೊಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.