ಹುಬ್ಬಳ್ಳಿ: ಮಾತೃಭಾಷೆ ಕನ್ನಡ ಕೇವಲ ಕವಿ, ಸಾಹಿತಿಗಳಿಂದ ಮಾತ್ರ ಉಳಿಸಲು ಸಾಧ್ಯವಿಲ್ಲ. ಕನ್ನಡ ನಮ್ಮ ನಿತ್ಯ ಜೀವನದಲ್ಲಿ ಬೆರೆಯಬೇಕು, ಅದನ್ನು ಹೆಚ್ಚೆಚ್ಚು ಬಳಸಬೇಕು. ವೈದ್ಯರು, ವೈದ್ಯಕೀಯ ಸಿಬ್ಬಂದಿ ರೋಗಿಗಳೊಂದಿಗೆ ಕನ್ನಡದಲ್ಲೆ ಸಂವಹನ ನಡೆಸಬೇಕು’ ಎಂದು ಮನೋರೋಗತಜ್ಞೆ ಹಾಗೂ ವೈದ್ಯ ಸಾಹಿತಿ ಕೆ.ಎಸ್.ಪವಿತ್ರಾ ಹೇಳಿದರು.
ಇಲ್ಲಿನ ಕಿಮ್ಸ್ ಸಭಾಂಗಣದಲ್ಲಿ ಶುಕ್ರವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ‘ವೈದ್ಯಕೀಯ ಕ್ಷೇತ್ರದಲ್ಲಿ ಕನ್ನಡ ಉಳಿಸಿ, ಬೆಳೆಸುವುದು ಸುಲಭ ಸಾಧ್ಯ. ರೋಗಿಗಳ ಜೊತೆಗೆ ಕನ್ನಡ ಬಳಸುವುದರಿಂದ ಅವರ ಸಮಸ್ಯೆ ಅರ್ಥ ಮಾಡಿಕೊಳ್ಳಲು ಸಹಕಾರಿಯಾಗುತ್ತದೆ. ಆದರೆ ಅನೇಕರು ಇಂಗ್ಲಿಷ್ ಬರುತ್ತದೆ ಎಂಬುದನ್ನು ತೋರಿಸಿಕೊಳ್ಳಲು ಕನ್ನಡ ಕಡೆಗಣಿಸಿ, ಇಂಗ್ಲಿಷ್ ಭಾಷೆ ಹೆಚ್ಚು ಬಳಸುತ್ತಿರುವುದರಿಂದ ನಮ್ಮ ಭಾಷೆಯನ್ನು ಕಳೆದುಕೊಳ್ಳುವ ಅಪಾಯದಲ್ಲಿದ್ದೇವೆ’ ಎಂದರು.
‘ತಾಂತ್ರಿಕ ಪ್ರಗತಿ ಸಾಧಿಸುತ್ತ, ಸಾಹಿತ್ಯ, ಲಲಿತಕಲೆಗಳನ್ನು ಕಡೆಗಣಿಸಬಾರದು. ಅನೇಕ ವೈದ್ಯಕೀಯ ಕಾಲೇಜುಗಳಲ್ಲಿ ಒತ್ತಡ, ಖಿನ್ನತೆಯಿಂದಾಗಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗಳು ದಾಖಲಾಗಿವೆ. ಈ ಎಲ್ಲ ಒತ್ತಡಗಳಿಂದ ವೈದ್ಯಕೀಯ ವಿದ್ಯಾರ್ಥಿಗಳು ಹೊರಬರಲು ಸಾಹಿತ್ಯ, ಲಲಿತಕಲೆ ಅವಶ್ಯ’ ಎಂದು ಹೇಳಿದರು.
‘ಅಮೆರಿಕದ 94 ವೈದ್ಯಕೀಯ ಕಾಲೇಜುಗಳಲ್ಲಿ 2017ರಿಂದ ‘ಆರ್ಟ್ ಅಪ್ರಿಸಿಯೆಷನ್’ (ಕಲಾ ಪ್ರಶಂಸಾ) ಕೋರ್ಸ್ ಹಾಗೂ ಇತಿಹಾಸ ವಿಷಯ ಬೋಧಿಸಲು ಆರಂಭಿಸಿದ್ದಾರೆ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಕಲೆ, ಸಾಹಿತ್ಯ ಅನಿವಾರ್ಯ’ ಎಂದು ಹೇಳಿದರು.
ಗೌರವ ಅತಿಥಿಯಾಗಿದ್ದ ಬರಹಗಾರ್ತಿ, ಉಪನ್ಯಾಸಕಿ ದೀಪಾ ಹಿರೇಗುತ್ತಿ ಮಾತನಾಡಿ, ‘ಕನ್ನಡ ಕೇವಲ ನವೆಂಬರ್ ತಿಂಗಳಿಗೆ ಮಾತ್ರ ಸಿಮೀತವಾಗದೆ, ಪ್ರತಿ ಕ್ಷಣ, ಪ್ರತಿ ದಿನ ನಮ್ಮ ಆಚರಣೆಯಲ್ಲಿರಬೇಕು. ಕನ್ನಡ ಅಂದರೆ ಭರ್ಜರಿ ಕಾರ್ಯಕ್ರಮಕ್ಕೆ ಹಾಕಿ ತೆಗೆದಿಡುವ ಬಟ್ಟೆಯಲ್ಲ, ಅದು ನಮ್ಮ ಮೈಗಂಟಿದ ಚರ್ಮದಂತೆ’ ಎಂದರು.
ಕಾರ್ಯಕ್ರಮದಲ್ಲಿ ಡಾ.ಕೆ.ಎಸ್.ಪವಿತ್ರಾ ಹಾಗೂ ದೀಪಾ ಹಿರೇಗುತ್ತಿ ಅವರನ್ನು ಸನ್ಮಾನಿಸಲಾಯಿತು. ವಿವಿಧ ಕಲಾ ತಂಡಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ವೈದ್ಯಕೀಯ ಅಧೀಕ್ಷಕ ಡಾ.ಎಸ್.ರಾಜಶಂಕರ್, ಕನ್ನಡ ಸಂಘದ ಅಧ್ಯಕ್ಷ ಡಾ.ಶ್ಯಾಮಸುಂದರ್, ಉಪಾಧ್ಯಕ್ಷೆ ಡಾ.ವಿಜಯಶ್ರೀ ಬಿ.ಎಚ್, ಸಂಘದ ಮಾರ್ಗದರ್ಶಕರಾದ ಡಾ.ಸುನೀಲ ಗೋಖಲೆ, ಡಾ.ಬಸವರಾಜ ಪಾಟೀಲ, ವಿವಿಧ ವಿಭಾಗದ ಮುಖ್ಯಸ್ಥರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
‘ಡಿಂಡಿಮ’ದಲ್ಲಿ ನಾಳೆ ಬೆಳಿಗ್ಗೆ 10ರಿಂದ ಮಧ್ಯಾಹ್ನ 2 ಗಂಟೆವರೆಗೆ ಗೀಗೀ ಪದಗಳು ಸೋಬಾನೆ ಪದಗಳು ಸಾಮೂಹಿಕ ನೃತ್ಯ ತಿಳಿ ಹಾಸ್ಯ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 3.30ರಿಂದ ಸಂಜೆ 7 ಗಂಟೆವರೆಗೆ ಸಮಾರೋಪ ಸಮಾರಂಭ ನಡೆಯಲಿದ್ದು ಅತಿಥಿಗಳಾಗಿ ಚಲನಚಿತ್ರ ನಟ ದೊಡ್ಡಣ್ಣ ಹುಬ್ಬಳ್ಳಿ–ಧಾರವಾಡ ಡಿಸಿಪಿ (ಅಪರಾಧ ವಿಭಾಗ) ರವೀಶ.ಸಿ.ಆರ್ ಹಾಗೂ ನಟ ನಿರ್ದೇಶಕ ಅರುಣ್‌ಕುಮಾರ್ ಆರ್.ಟಿ ಭಾಗವಹಿಸಲಿದ್ದಾರೆ. ಸಂಜೆ 7ರಿಂದ ಮನೋರಂಜನೆ (ಗಾಯನ ಮಿಮಿಕ್ರಿ) ಶಿಶುನಾಳ ಶರೀಫರ ತತ್ವಪದಗಳು ಹಾಗೂ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.