ADVERTISEMENT

ಹುಬ್ಬಳ್ಳಿ: ಪೌರ ಕಾರ್ಮಿಕರಿಗೆ ಔಷಧ ಕಿಟ್, ಮಹಾನಗರ ಪಾಲಿಕೆಯಿಂದ ಇಂದು ವಿತರಣೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2021, 13:04 IST
Last Updated 15 ಜೂನ್ 2021, 13:04 IST
ಪೌರ ಕಾರ್ಮಿಕರಿಗೆ ನೀಡಲಿರುವ ಔಷಧ ಕಿಟ್
ಪೌರ ಕಾರ್ಮಿಕರಿಗೆ ನೀಡಲಿರುವ ಔಷಧ ಕಿಟ್   

ಹುಬ್ಬಳ್ಳಿ: ಕೊರೊನಾ ವಾರಿಯರ್‌ ಆಗಿರುವ ಪೌರ ಕಾರ್ಮಿಕರಿಗೆ ಮುನ್ನೆಚ್ಚರಿಕೆ ಕ್ರಮವಾಗಿ ಮಹಾನಗರ ಪಾಲಿಕೆಯು ಔಷಧ ಕಿಟ್‌ ನೀಡಲು ಮುಂದಾಗಿದೆ. ಈ ಕಿಟ್‌ನಲ್ಲಿ ಸ್ಯಾನಿಟೈಸರ್ ಹಾಗೂ ಒಂಬತ್ತು ಬಗೆಯ ಮಾತ್ರೆಗಳಿವೆ.

ಪೌರ ಕಾರ್ಮಿಕರು, ವಾಹನಗಳ ಚಾಲಕರು, ಲೋಡರ್ಸ್, ನೈರ್ಮಲ್ಯ ಮೇಲ್ವಿಚಾಲಕರು ಹಾಗೂ ಇತರ ಸ್ವಚ್ಛತಾ ಕಾರ್ಮಿಕರು ಸೇರಿದಂತೆ ಅಂದಾಜು 2,500 ಮಂದಿಗೆ ಜೂನ್ 15ರಂದು ಕಿಟ್‌ಗಳನ್ನು ವಿತರಿಸಲು ಪಾಲಿಕೆ ಸಿದ್ಧತೆ ಮಾಡಿಕೊಂಡಿದೆ.

₹150 ಮೌಲ್ಯದ ಕಿಟ್: ‘ಪೌರ ಕಾರ್ಮಿಕರಿಗೆ ವಿತರಿಸುವ ಔಷಧ ಕಿಟ್ ₹150 ಮೌಲ್ಯದ್ದಾಗಿದೆ. ಐವರ್‌ಮೆಕ್ಟಿನ್, ವಿಟಮಿನ್ ‘ಸಿ’, ಜಿಂಕ್, ಪ್ಯಾರಾಸಿಟ ಮೊಲ್, ಸಿಟ್ರಿಜನ್, ಪ್ಯಾಂಟೊಪ್ರಜೋಲ್ ಹಾಗೂ ವ್ಯಪೊರ್ (ಬಿಸಿ ನೀರಿನ ಹಬೆ ತೆಗೆದುಕೊಳ್ಳಲು) ಕ್ಯಾಪ್ಸುಲ್ ಜತೆಗೆ 100 ಎಂ.ಎಲ್. ಸ್ಯಾನಿಟೈಸರ್ ಬಾಟಲಿಯನ್ನು ಕಿಟ್ ಒಳಗೊಂಡಿದೆ’ ಎಂದು ಪಾಲಿಕೆಯ ಘನತ್ಯಾಜ್ಯ ನಿರ್ವಹಣಾ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಸಂತೋಷಕುಮಾರ ಯರಂಗಳಿ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಕೋವಿಡ್ –19 ನಿಯಂತ್ರಣಕ್ಕೆ ಲಾಕ್‌ಡೌನ್ ಘೋಷಣೆ ಆದಾಗಿನಿಂದಲೂ ಪೌರ ಕಾರ್ಮಿಕರ ಆರೋಗ್ಯ ಹಾಗೂ ಸುರಕ್ಷತೆಗೆ ಪಾಲಿಕೆ ವಿಶೇಷ ಒತ್ತು ನೀಡುತ್ತಾ ಬಂದಿದೆ. ಲಾಕ್‌ಡೌನ್ ಅವಧಿಯಲ್ಲಿ ತ್ಯಾಜ್ಯ ಸಂಗ್ರಹ, ಕಸ ಗುಡಿಸುವುದು ಹಾಗೂ ಇತರ ಸ್ವಚ್ಛತಾ ಕೆಲಸದ ಅವಧಿಯನ್ನು ಬೆಳಿಗ್ಗೆ 6ರಿಂದ 11ರವರೆಗೆ ನಿಗದಿಪಡಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಎಲ್ಲರಿಗೂ ಕೋವಿಡ್ ಲಸಿಕೆ ಕೊಡಿಸಲಾಗಿದೆ’ ಎಂದರು.

‘ಈಗಾಗಲೇ ಸುರಕ್ಷಾ ಸಾಧನಗಳಾದ ಮಾಸ್ಕ್, ಸ್ಯಾನಿಟೈಸರ್ ಹಾಗೂ ಫೇಸ್‌ಶೀಲ್ಡ್ ವಿತರಿಸಲಾಗಿದೆ. ಕರ್ತವ್ಯಕ್ಕೆ ಹಾಜರಾಗುವವರಿಗೆ ನಿತ್ಯ ಥರ್ಮಲ್ ಸ್ಕ್ರೀನಿಂಗ್ ಜತೆಗೆ, ಆಗಾಗ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.