ADVERTISEMENT

ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಎಂಗೆ ಮನವಿ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2022, 5:39 IST
Last Updated 14 ಫೆಬ್ರುವರಿ 2022, 5:39 IST
ಹುಬ್ಬಳ್ಳಿಯಲ್ಲಿ ಭಾನುವಾರ ವಿವಿಧ ಸಂಘಟನೆಗಳ ಮುಖಂಡರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಲು ಮುಗಿಬಿದ್ದಿದ್ದರು
ಹುಬ್ಬಳ್ಳಿಯಲ್ಲಿ ಭಾನುವಾರ ವಿವಿಧ ಸಂಘಟನೆಗಳ ಮುಖಂಡರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಲು ಮುಗಿಬಿದ್ದಿದ್ದರು   

ಹುಬ್ಬಳ್ಳಿ: ನಗರದಲ್ಲಿ ಭಾನುವಾರ ವಿವಿಧ ಸಂಘಟನೆಗಳ ಮುಖಂಡರು ಬೇಡಿಕೆಗಳ ಈಡೇರಿಕೆಗಳಿಗೆ ಒತ್ತಾಯಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿಗಳನ್ನು ಸಲ್ಲಿಸಲು ಮುಗಿಬಿದ್ದಿದ್ದರು.

ವೃತ್ತ ಪತ್ರಿಕೆಗಳ ಮಾರಾಟ ಸಂಘ: ಕೋವಿಡ್‌ ಸಂದರ್ಭದಲ್ಲಿ ಪತ್ರಿಕಾ ವಿತರಕರು ಎದೆಗುಂದದೆ ಮನೆಮೆನೆ ಪತ್ರಿಕೆ ವಿತರಿಸಿದ್ದಾರೆ. ಮಳೆ, ಗಾಳಿ, ಚಳಿ ಎನ್ನದೆ ವರ್ಷ ಪರ್ಯಂತ ಕಾರ್ಯ ನಿರ್ವಹಿಸುತ್ತಾರೆ. ಆದರೆ, ಇವರ ಬದುಕಿಗೆ ಯಾವುದೇ ಭದ್ರತೆ ಇರದ ಕಾರಣ, ಅತಂತ್ರದಿಂದ ದಿನ ದೂಡುವಂತಾಗಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಪತ್ರಿಕಾ ವಿತರಕರಿಗೆ ₹2 ಕೋಟಿ ಮೀಸಲಿಟ್ಟಿದ್ದರು. ಆದರೆ, ಅದು ಬಳಕೆಯಾಗದೆ, ಮರಳಿ ಸರ್ಕಾರಕ್ಕೆ ಹೋಗಿದೆ. ಮುಂದಿನ ಬಜೆಟ್‌ನಲ್ಲಿ ಪತ್ರಿಕಾ ವಿತರಕರ ಹಿತದೃಷ್ಟಿಯಿಂದ ಪತ್ರಿಕಾ ವಿತರಕರ ಕಲ್ಯಾಣ ನಿಧಿ ಸ್ಥಾಪಿಸಿ, ಪ್ರತಿ ಜಿಲ್ಲೆಗೆ ₹1 ಕೋಟಿ ಮೀಸಲಿಡಬೇಕು. ಅಲ್ಲದೆ, ಪತ್ರಿಕಾ ವಿತರಕರ ಪ್ರಾಧಿಕಾರ ರಚಿಸಬೇಕು ಎಂದು ಮನವಿಯಲ್ಲಿ ವಿನಂತಿಸಿದ್ದಾರೆ.

ಅಕ್ಷರ ದಾಸೋಹ ಕಾರ್ಮಿಕ ಸಂಘ: ಬಜೆಟ್‌ನಲ್ಲಿ ಅಕ್ಷರ ದಾಸೋಹ ಕಾರ್ಮಿಕರ ಬದುಕಿಗೆ ನೆರವಾಗಲು ವಿಶೆಷ ಅನುದಾನ ಮೀಸಲಿಡಬೇಕು. ಕಾರ್ಮಿಕರು ಗೌರವಯುತವಾದ ಜೀವನ ನಡೆಸಲು ಮಾಸಿಕ ವೇತನ ಹೆಚ್ಚಿಸಬೇಕು. ಲಾಕ್‌ಡೌನ್‌ ಸಂದರ್ಭದಲ್ಲೂ ದಾಸೋಹ ಕಾರ್ಮಿಕರು ಶಾಲೆಯ ಸ್ವಚ್ಛತೆ, ಕೈ ತೋಟ–ಶೌಚಾಲಯ ನಿರ್ವಹಣೆಯನ್ನು ಮಾಡಿದ್ದಾರೆ. ಮಾಸಿಕವಾಗಿ ನೀಡುವ ಅಲ್ಪ ವೇತನದಿಂದ ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಪಟ್ಟಣದಲ್ಲಿರುವ ಕಾರ್ಮಿಕರಿಗೆ ಮನೆ ಬಾಡಿಗೆ ಕಟ್ಟಲು ಕಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಜೆಟ್‌ನಲ್ಲಿ ಕನಿಷ್ಠ ವೇತನ ಘೋಷಣೆ ಮಾಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ADVERTISEMENT

ಸಂಘದ ರಾಜ್ಯಾಧ್ಯಕ್ಷ ಕೆ.ವಿ. ಭಟ್‌, ಕಾರ್ಯದರ್ಶಿ ಡಿ. ನಾಗಲಕ್ಷ್ಮಿ, ಗಂಗಾಧರ ಬಡಿಗೇರ್‌, ರಮೇಶ ಹೊಸಮನಿ, ರೇಣುಕಾ ಕರಿಗಾರ್‌, ಉಮಾ ಹಿರೇಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.