ADVERTISEMENT

ಧಾರವಾಡ | 'ಮಾನಸಿಕ ಅಸ್ವಸ್ಥರಿಗೆ ಆತ್ಮಸ್ಥೈರ್ಯ ತುಂಬಿ'

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2025, 2:47 IST
Last Updated 11 ಅಕ್ಟೋಬರ್ 2025, 2:47 IST
ಧಾರವಾಡದ ಜೆಎಸ್‍ಎಸ್ ಉತ್ಸವ ಸಂಭಾಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪರಶುರಾಮ ಎಫ್.ದೊಡ್ಡಮನಿ ಮಾತನಾಡಿದರು 
ಧಾರವಾಡದ ಜೆಎಸ್‍ಎಸ್ ಉತ್ಸವ ಸಂಭಾಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪರಶುರಾಮ ಎಫ್.ದೊಡ್ಡಮನಿ ಮಾತನಾಡಿದರು    

ಧಾರವಾಡ: ‘ಮಾನಸಿಕ ಅಸ್ವಸ್ಥರಿಗೆ ಮಾನವೀಯತೆ ತೊರಬೇಕು. ಸಮಾಜದಲ್ಲಿ ಬದುಕುವ, ಗೌರವದಿಂದ ಬಾಳುವ ಹಕ್ಕು ಅವರಿಗೂ ಇದೆ’ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪರಶುರಾಮ ಎಫ್.ದೊಡ್ಡಮನಿ ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜೆಎಸ್‍ಎಸ್ ಶಿಕ್ಷಣ ಸಂಸ್ಥೆ, ಸ್ವಾಮಿ ವಿವೇಕಾನಂದ ಯೂತ್ ಮೂವಮೆಂಟ್ ಹಾಗೂ ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನಗಳ ಸಂಸ್ಥೆ (ಡಿಮಾನ್ಸ್‌)  ವತಿಯಿಂದ ಮಾನಸಿಕ ಆರೋಗ್ಯ ದಿನಾಚರಣೆ ಪ್ರಯುಕ್ತ ಜೆಎಸ್‍ಎಸ್ ಕಾಲೇಜಿನ ಉತ್ಸವ ಸಂಭಾಗಣದಲ್ಲಿ ಶುಕ್ರವಾರ ನಡೆದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಸಮಾಜದಲ್ಲಿರುವ ಅಸಮಾನತೆ, ಬಡತನ, ಕ್ರೌರ್ಯ, ಹಿಂಸೆ ಹಾಗೂ ಇತರ ಕಾರಣಗಳು ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುವಂತೆ ಮಾಡುತ್ತವೆ. ನೆಮ್ಮದಿ ಜೀವನ ನಡೆಸಲು ಅಹಿಂಸೆ, ಅನುಕಂಪ, ಮಾನವೀಯತೆ, ಇತರರಿಗೆ ಆತ್ಮಸ್ಥೈರ್ಯ ತುಂಬುವಂಥ ಕೆಲಸಗಳು, ಕುಟುಂಬದವರಿಂದ, ಸ್ನೇಹಿತರಿಂದ ಹಾಗೂ ಜನರಿಂದ ಆಗಬೇಕಾಗಿದೆ’ ಎಂದರು.

ADVERTISEMENT

‘ಮಾನಸಿಕ ಅಸ್ವಸ್ಥರಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡಿದರೆ ಸಮಾಜದಲ್ಲಿ ಎಲ್ಲರಂತೆ ಬದುಕುತ್ತಾರೆ. ಮಾನಸಿಕ ಆರೋಗ್ಯ ಸಮಸ್ಯೆ ಇರುವವರಿಗೆ ಮನೋವೈದ್ಯರು ಚಿಕಿತ್ಸೆ ನೀಡಿ ಅವರನ್ನು ಮತ್ತೆ ಸಂತೋಷದಿಂದ ಬದುಕುವಂತೆ ಮಾಡಬೇಕು’ ಎಂದು ತಿಳಿಸಿದರು.

ಡಿಮಾನ್ಸ್ ನಿರ್ದೇಶಕ ಡಾ.ಅರುಣಕುಮಾರ ಸಿ. ಮಾತನಾಡಿ, ‘ಎಲ್ಲರೂ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಮಹತ್ವ ನೀಡಬೇಕು.  ಮಾನಸಿಕ ಆರೋಗ್ಯ ಸಮಸ್ಯೆಗಳಿದ್ದರೆ 14416 ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು’ ಎಂದರು.

ಜೆಎಸ್‍ಎಸ್ ಪದವಿ ಕಾಲೇಜಿನ ಪ್ರಾಚಾರ್ಯ ಪ್ರೊ.ವೆಂಕಟೇಶ ಮುತಾಲಿಕ್‌ ಅಧ್ಯಕ್ಷತೆ ವಹಸಿದ್ದರು. ಐಟಿಐ ಕಾಲೇಜಿನ ಪ್ರಾಚಾರ್ಯ ಮಹಾವೀರ ಉಪಾಧ್ಯೆ, ಸ್ವಾಮಿ ವಿವೇಕಾನಂದ ಯೂತ್ ಮೂವಮೆಂಟ್ ವ್ಯವಸ್ಥಾಪಕ ಮೋಹನಕುಮಾರ ಥಂಬದ, ಅಶೋಕ ಕೋರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.