ADVERTISEMENT

ಪುಂಡ ಪೋಕರಿಯಂತೆ ಸಿದ್ದರಾಮಯ್ಯ ಹೇಳಿಕೆ: ಶೆಟ್ಟರ್‌ ಟೀಕೆ

​ಪ್ರಜಾವಾಣಿ ವಾರ್ತೆ
Published 7 ಜೂನ್ 2022, 15:45 IST
Last Updated 7 ಜೂನ್ 2022, 15:45 IST
ಜಗದೀಶ ಶೆಟ್ಟರ್‌
ಜಗದೀಶ ಶೆಟ್ಟರ್‌   

ಹುಬ್ಬಳ್ಳಿ: ‘ಮುಖ್ಯಮಂತ್ರಿಯಾಗಿದ್ದ, ಸದ್ಯ ವಿರೋಧ ಪಕ್ಷದ ನಾಯಕನಾಗಿರುವ ಸಿದ್ದರಾಮಯ್ಯ ಅವರು ಜವಾಬ್ದಾರಿಯುತ ನಾಗರಿಕನಾಗಿ ಮಾತನಾಡುವುದನ್ನು ಬಿಟ್ಟು, ಪುಂಡ ಪೋಕರಿಯಂತೆ ಮಾತನಾಡುತ್ತಿದ್ದಾರೆ’ ಎಂದು ಶಾಸಕ ಜಗದೀಶ ಶೆಟ್ಟರ್‌ ಟೀಕಿಸಿದರು.

ಆರ್‌ಎಸ್‌ಎಸ್‌ ಕುರಿತು ಸಿದ್ದರಾಮಯ್ಯ ವ್ಯಂಗ್ಯವಾಡಿದ ಹಿನ್ನೆಲೆಯಲ್ಲಿ ನಗರದಲ್ಲಿ ಮಂಗಳವಾರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ‘ಸಾಮಾನ್ಯ ಕಾರ್ಯಕರ್ತರೂ ಜವಾಬ್ದಾರಿಯಿಂದ ಮಾತನಾಡುತ್ತಾರೆ. ಆದರೆ, ಜವಾಬ್ದಾರಿಯುತ ಸ್ಥಾನದಲ್ಲಿರುವ ಸಿದ್ದರಾಮಯ್ಯ ಆರ್‌ಎಸ್‌ಎಸ್‌ ಕುರಿತು ಕೀಳು ಮಟ್ಟದಲ್ಲಿ ಮಾತನಾಡುತ್ತಿದ್ದಾರೆ’ ಎಂದರು.

‘ಆರ್‌ಎಸ್‌ಎಸ್‌ ಅನ್ನು ನಿಂದಿಸಿದರೆ ಅಲ್ಪಸಂಖ್ಯಾತರ ಮತಗಳು ಕಾಂಗ್ರೆಸ್‌ಗೆ ಸಿಗುವುದೆಂಬ ನಂಬಿಕೆಯಲ್ಲಿದ್ದಾರೆ. ಆದರೆ ಅದೇ ಅವರಿಗೆ ತಿರುಗುಬಾಣವಾಗಲಿದೆ. ಅಲ್ಪಸಂಖ್ಯಾತರು ಕಾಂಗ್ರೆಸ್‌ನ ಕೈ ಹಿಡಿಯುವುದಿಲ್ಲ. ದೇಶದಾದ್ಯಂತ ಕಾಂಗ್ರೆಸ್‌ ನಾಯಕರು ಪಕ್ಷ ತೊರೆಯುತ್ತಿದ್ದು, ರಾಜ್ಯದಲ್ಲೂ ಈಗಾಗಲೆ ಹಲವು ನಾಯಕರು ಬಿಜೆಪಿ ಸೇರಿದ್ದಾರೆ. ಮುಂದಿನ ದಿನಗಳಲ್ಲೂ ಇದು ಮುಂದುವರಿಯಲಿದ್ದು, ಸಿದ್ದರಾಮಯ್ಯ ಅವರ ಕಣ್ಣ ಮುಂದೆಯೇ ಕಾಂಗ್ರೆಸ್‌ ನಿರ್ನಾಮವಾಗುತ್ತದೆ’ ಎಂದು ಕುಟುಕಿದರು.

ADVERTISEMENT

‘ಚಡ್ಡಿ ಹಾಕಿಕೊಂಡ ಆರ್‌ಎಸ್‌ಎಸ್‌ ಕಾರ್ಯಕರ್ತರಿಂದಲೇ ಭಾರತ ಒಗ್ಗಟ್ಟಿನಿಂದ ಉಳಿದಿದೆ. ಹಿಂದುತ್ವಕ್ಕೆ ಸಂಘಟನಾ ಶಕ್ತಿ ತುಂಬಿದ್ದೇ ಆರ್‌ಎಸ್‌ಎಸ್‌. ಅಂತಹ ಸಂಸ್ಥೆಯ ಬಗ್ಗೆ ಸಿದ್ದರಾಮಯ್ಯಹಗುರವಾಗಿ ಮಾತನಾಡುತ್ತಿರುವುದು, ಅವರ ಅವನತಿಗೆ ದಾರಿ ಮಾಡಿಕೊಂಡಂತೆ’ ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.