ADVERTISEMENT

ರಾಜ್ಯ ಚುನಾವಣೆ: ಶಾಸಕ‌ ಜಗದೀಶ ಶೆಟ್ಟರ್ ನಡೆ ಇನ್ನೂ‌ ನಿಗೂಢ

ಶೆಟ್ಟರ್ ಗೆ ಟಿಕೆಟ್ ನೀಡಲು ಸಂಜೆ 6ರ ಗಡುವು

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2023, 8:59 IST
Last Updated 15 ಏಪ್ರಿಲ್ 2023, 8:59 IST
ಜಗದೀಶ ಶೆಟ್ಟರ್ ಅವರು ಹುಬ್ಬಳ್ಳಿಯ ತಮ್ಮ‌ ನಿವಾಸದಲ್ಲಿ ಬೆಂಬಲಿಗರ ಸಭೆ ನಡೆಸಿದರು.
ಜಗದೀಶ ಶೆಟ್ಟರ್ ಅವರು ಹುಬ್ಬಳ್ಳಿಯ ತಮ್ಮ‌ ನಿವಾಸದಲ್ಲಿ ಬೆಂಬಲಿಗರ ಸಭೆ ನಡೆಸಿದರು.   

ಹುಬ್ಬಳ್ಳಿ: ಹುಬ್ಬಳ್ಳಿ -ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಶಾಸಕ ಜಗದೀಶ ಶೆಟ್ಟರ್ ಅವರಿಗೆ ಇನ್ನೊಮ್ಮೆ ಟಿಕೆಟ್ ನೀಡಬೇಕು. ಸಂಜೆ 6ಗಂಟೆ ಒಳಗಾಗಿ ಟಿಕೆಟ್ ನೀಡದಿದ್ದರೆ ಅವರು ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ಬೆಂಬಲ ನೀಡುತ್ತೇವೆ ಎಂದು ಶೆಟ್ಟರ್ ಅವರ ಬೆಂಬಲಿಗರು, ಅಭಿಮಾನಿಗಳು ಹೇಳಿದರು.

ತಮ್ಮ‌ ಮುಂದಿನ ನಡೆ ಕುರಿತು ಜಗದೀಶ ಶೆಟ್ಟರ್ ಅವರು ಹುಬ್ಬಳ್ಳಿಯ ತಮ್ಮ‌ ನಿವಾಸದಲ್ಲಿ ಬೆಂಬಲಿಗರ ಸಭೆ ನಡೆಸಿದರು.

ಸಭೆಯಲ್ಲಿ‌ ಮಾತನಾಡಿದ‌ ಶೆಟ್ಟರ್, ನಾನೂ ಇನ್ನು ಭರವಸೆ ಕಳೆದುಕೊಂಡಿಲ್ಲ. ನಾಮಪತ್ರ ಸಲ್ಲಿಸಲು ಇನ್ನೂ ಸಮಯ ಇದೆ. ಟಿಕೆಟ್ ಸಿಗುವ ವಿಶ್ವಾಸ ಇದೆ. ಒಂದು ವೇಳೆ ಟಿಕೆಟ್ ಸಿಗದಿದ್ದರೆ ನಾನು ತೆಗೆದುಕೊಳ್ಳುವ ನಿರ್ಧಾರವನ್ನು ಬೆಂಬಲಿಸುವುದಾಗಿ ಜನರು ಹೇಳಿದ್ದಾರೆ. ಆ ಬಳಿಕ ಮುಖಂಡರ‌ ಜತೆ ಚರ್ಚಿಸಿ ನನ್ನ‌ ನಿರ್ಧಾರ ಪ್ರಕಟಿಸುತ್ತೇನೆ ಎಂದರು.

ADVERTISEMENT

ನನ್ನ ರಾಜಕೀಯ ಜೀವನದಲ್ಲಿ ಕಳೆದ ಎರಡ್ಮೂರು ತಿಂಗಳು ಅತ್ಯಂತ ಕೆಟ್ಟ ದಿನಗಳಾಗಿವೆ. ಈ ರೀತಿ ಏಕೆ ಆಗುತ್ತಿದೆ ಎಂದು ಗೊತ್ತಿಲ್ಲ. ಮುಂದೆ ಒಳ್ಳೆಯ ದಿನಗಳು ಬರುವ ವಿಶ್ವಾಸ ಇದೆ ಎಂದು ಹೇಳಿದರು.

ಜನರ ಆಶೀರ್ವಾದ ಇರುವವರೆಗೂ ನಾನು ಹೀರೋ. ಅವರ ಹಿತಕ್ಕಾಗಿ ಸ್ಪರ್ಧೆ ಮಾಡಲು ಬಯಸಿದ್ದೇನೆ. ಜನರು ಕೊಟ್ಟಿರುವ ನೈತಿಕ ಬೆಂಬಲವನ್ನು ಮರೆಯಲು ಸಾಧ್ಯವಿಲ್ಲ. ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದಿದ್ದೇನೆ. ನನಗೆ ಅಧಿಕಾರದ ಆಸೆ ಇಲ್ಲ. ಅವಕಾಶ ಸಿಕ್ಕಾಗ ಒಳ್ಳೆಯ ಕೆಲಸ ಮಾಡಿದ್ದೇನೆ. ಹೀಗಾಗಿ ಇನ್ನೊಮ್ಮೆ ಸ್ಪರ್ಧಿಸಕು ಅವಕಾಶ ನೀಡುವಂತೆ ವರಿಷ್ಠರಲ್ಲಿ ಕೋರಿದ್ದೇನೆ ಎಂದರು.

ಜನರ ಪ್ರೀತಿ, ವಿಶ್ವಾಸಕ್ಕೆ ಋಣಿಯಾಗಿದ್ದೇನೆ. ಹು-ಧಾ ಸೆಂಟ್ರಲ್ ಕ್ಷೇತ್ರದಿಂದ ನನ್ನನ್ನು ಗೆಲ್ಲಿಸಿ ನನಗೆ ಶಕ್ತಿ ತುಂಬಿದ್ದಾರೆ. ಜನರ ಬೆಂಬಲದಿಂದ ರಾಜ್ಯಮಟ್ಟದ ನಾಯಕನಾಗಿ ಬೆಳೆದಿದ್ದೇನೆ. ಬಿ.ಎಸ್.ಯಡಿಯೂರಪ್ಪ, ದಿವಂಗತ ಅನಂತ ಕುಮಾರ್ ಅವರ ನಾಯಕತ್ವದಡಿ ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷದ ಬೆಳವಣಿಗೆಗೆ ನನ್ನದೇ ಆದ ಕೊಡುಗೆ ನೀಡಿದ್ದೇನೆ. ಪಕ್ಷ ನನಗೆ ಎಲ್ಲ ಅವಕಾಶಗಳನ್ನು ನೀಡಿದೆ. ಪಕ್ಷಕ್ಕೆ ಋಣಿಯಾಗಿದ್ದೇನೆ ಎಂದು ಹೇಳಿದರು.

ಪಕ್ಷ ನನಗೆ ಗೌರವ ನೀಡಿದೆ. ಅದರಿಂದ ತಳಮಟ್ಟದಿಂದ ಪಕ್ಷ ಸಂಘಟಿಸಲು ಸಾಧ್ಯವಾಗಿದೆ. ಏಳನೇ ಬಾರಿಗೆ ನಾನು ಸ್ಪರ್ಧಿಸಿದರೆ ದಾಖಲೆಯ ಅಂತರದಲ್ಲಿ ಗೆಲ್ಲಿಸುತ್ತೇನೆ ಎಂದು ಕ್ಷೇತ್ರದ ಜನರು ಹೇಳುತ್ತಿದ್ದಾರೆ ಎಂದರು.

ನನಗೆ ಟಿಕೆಟ್ ಸಿಗದಿದ್ದುದಕ್ಕೆ ಜನರು‌ ಕಳವಳಗೊಂಡಿದ್ದಾರೆ. ಬೆಂಗಳೂರು, ಮೈಸೂರು, ಕಲಬುರಗಿ, ರಾಯಚೂರು, ಯಾದಗಿರಿಯಿಂದ ಕರೆ ಮಾಡಿ ಬೆಂಬಲ ನೀಡುತ್ತಿದ್ದಾರೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.