ADVERTISEMENT

ವಾರ್ಡ್‌ ವಾರು ವರದಿ ನೀಡಲು ಸೂಚನೆ

ಕೋವಿಡ್ ನಿರ್ವಹಣೆ ಕುರಿತು ಶಾಸಕ ಪ್ರಸಾದ ಅಬ್ಬಯ್ಯ ಸಭೆ

​ಪ್ರಜಾವಾಣಿ ವಾರ್ತೆ
Published 5 ಜೂನ್ 2021, 16:31 IST
Last Updated 5 ಜೂನ್ 2021, 16:31 IST
ಹುಬ್ಬಳ್ಳಿಯ ಘಂಟಿಕೇರಿ ಓಣಿಯಲ್ಲಿ ಶನಿವಾರ ಶಾಸಕ ಪ್ರಸಾದ ಅಬ್ಬಯ್ಯ ಸ್ಮಾರ್ಟ್‌ ಸಿಟಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿ ಪರಿಶೀಲಿಸಿದರು
ಹುಬ್ಬಳ್ಳಿಯ ಘಂಟಿಕೇರಿ ಓಣಿಯಲ್ಲಿ ಶನಿವಾರ ಶಾಸಕ ಪ್ರಸಾದ ಅಬ್ಬಯ್ಯ ಸ್ಮಾರ್ಟ್‌ ಸಿಟಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿ ಪರಿಶೀಲಿಸಿದರು   

ಹುಬ್ಬಳ್ಳಿ: ಕೋವಿಡ್-19 ಸಮರ್ಪಕ ನಿರ್ವಹಣೆಗಾಗಿ ಪೂರ್ವ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ಎರಡು ದಿನಗಳಲ್ಲಿ ವಾರ್ಡುವಾರು ಮಾಹಿತಿ ನೀಡಬೇಕು ಎಂದು ಶಾಸಕ ಪ್ರಸಾದ ಅಬ್ಬಯ್ಯ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.

ಪಾಲಿಕೆ ಆವರಣದಲ್ಲಿರುವ ಶಾಸಕರ ಕಚೇರಿಯಲ್ಲಿ ಶನಿವಾರ ನಡೆದ ಕೋವಿಡ್-19 ನಿರ್ವಹಣೆ ಕುರಿತ ಸಭೆಯಲ್ಲಿ ಮಾತನಾಡಿದ ಅವರು ‘ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಕಾಲೊನಿಗಳಲ್ಲಿ ಸ್ವಚ್ಛತೆ ಹಾಗೂ ಜನರ ಆರೋಗ್ಯ ಸುರಕ್ಷತೆ ಬಗ್ಗೆ ಗಮನ ಹರಿಸಬೇಕು. ಸ್ಯಾನಿಟೈಸೇಷನ್‌ ಹಾಗೂ ಫಾಗಿಂಗ್‌ ಮಾಡಿದ ಬಗ್ಗೆ ವರದಿ ಕೊಡಬೇಕು‘ ಎಂದರು.

ಪಾಲಿಕೆ ಅಧೀಕ್ಷಕ ಎಂಜಿನಿಯರ್‌ ಮಂಜನಾಥ ಚವ್ಹಾಣ್, ವಲಯ ಅಧಿಕಾರಿಗಳಾದ ಬಸವರಾಜ ಲಮಾಣಿ, ಆನಂದ ಕಾಂಬ್ಳೆ, ಸಿದ್ದಗೊಂಡ, ತಿರುಪತಿ, ರಿಯಾಜ್, ನದಾಫ್, ಸುನಂದಾ ಚಿಕ್ಕಮಠ, ಇದ್ದರು.

ADVERTISEMENT

ಕೆಲಸ ವಿಳಂಬಕ್ಕೆ ಅಸಮಾಧಾನ: ನಿಧಾನಗತಿಯಲ್ಲಿ ಸಾಗುತ್ತಿರುವ ಸ್ಮಾರ್ಟ್‌ ಸಿಟಿ ಕಾಮಗಾರಿ ಚುರುಕಾಗಬೇಕು ಎಂದು ಪಾಲಿಕೆ, ಜಲಮಂಡಳಿ ಹಾಗೂ ಸ್ಮಾರ್ಟ್‌ ಸಿಟಿ ಅಧಿಕಾರಿಗಳಿಗೆ ಅಬ್ಬಯ್ಯ ಸೂಚಿಸಿದರು.

ಅಧಿಕಾರಿಗಳೊಂದಿಗೆ ಇಲ್ಲಿನ ಘಂಟಿಕೇರಿ ಓಣಿ, ಕ್ರಿಶ್ಚಿಯನ್ ಕಾಲೊನಿಗೆ ಭೇಟಿ ನೀಡಿ ಪರಿಶೀಲಿಸಿದರು.

‘ಸ್ಮಾರ್ಟ್‌ ಸಿಟಿ ಯೋಜನೆಯಡಿ ನಿರ್ಮಿಸಿರುವ ಸಿ.ಸಿ. ಚರಂಡಿಯಲ್ಲಿ ಸರಿಯಾಗಿ ಇಳಿಜಾರು ಮಾಡದ್ದರಿಂದ ನೀರು ಸರಾಗವಾಗಿ ಹರಿಯುತ್ತಿಲ್ಲ. ಇದರಿಂದ ಗಟಾರಗಳು ತುಂಬಿ ನೀರು ಮನೆಯೊಳಗೆ, ರಸ್ತೆಗೆ ಬರುವಂತಾಗಿದ್ದು, ಕೂಡಲೇ ಗಟಾರಗಳನ್ನು ಸ್ವಚ್ಛಗೊಳಿಸಬೇಕು‘ ಎಂದರು.

‘ಘಂಟಿಕೇರಿ, ಕ್ರಿಶ್ಚಿಯನ್ ಕಾಲೊನಿ, ಮಂಗಳವಾರ ಪೇಟೆ ಹಾಗೂ ಷಾ ಬಜಾರ್ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ನೀರಿನ ಪೈಪ್‍ಲೈನ್ ಕಾಮಗಾರಿ ಕೈಗೊಂಡ ಸ್ಥಳದಲ್ಲೇ ಕೆಲವೆಡೆ ಯುಜಿಡಿ ಕಾಮಗಾರಿ ನಡೆಸಲಾಗಿದೆ. ಇದರಿಂದ ತೀವ್ರ ಸಮಸ್ಯೆ ಎದುರಾಗಿದೆ. ಪ್ರತಿ ಬಾರಿ ಸ್ಥಳ ಪರಿಶೀಲನೆ ನಡೆಸಿ, ಸೂಚನೆ ಕೊಟ್ಟರೂ ಕಾಮಗಾರಿಗಳು ಚುರುಕುಗೊಳ್ಳುತ್ತಿಲ್ಲ‘ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪಾಲಿಕೆ ಮಾಜಿ ಸದಸ್ಯ ಅಜ್ಜಪ್ಪ ಬೆಂಡಿಗೇರಿ, ವಾರ್ಡ್‌ ಅಧ್ಯಕ್ಷ ಶರೀಫ್ ಅದವಾನಿ, ವಾದಿರಾಜ ಕುಲಕರ್ಣಿ, ಸ್ಥಳೀಯರಾದ ಶೇಖಣ್ಣ ಬೆಂಡಿಗೇರಿ, ನಿರಂಜನ ಹಿರೇಮಠ, ಕುಮಾರ ಕುಂದನಹಳ್ಳಿ, ಯಲ್ಲಪ್ಪ ಮಡಿವಾಳರ, ಶ್ರೀನಿವಾಸ ಬೆಳದಡಿ, ಸ್ಮಾರ್ಟ್‌ ಸಿಟಿ ಅಧಿಕಾರಿಗಳಾದ ಶ್ರೀನಿವಾಸ ಪಾಟೀಲ, ಎನ್.ಎಚ್. ತಡಕೋಡ, ಜಲಮಂಡಳಿಯ ಗುಡಿಯವರ, ಗಿಡ್ಡಲಿಂಗಣ್ಣವರ, ದೇವೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.