ADVERTISEMENT

ಪಶ್ಚಿಮ ಪದವೀಧರರ ಕ್ಷೇತ್ರ: ಅಂತಿಮಗೊಳ್ಳದ ಹೆಸರು, ಬಿಜೆಪಿಯಲ್ಲಿ ಅಸಮಾಧಾನ

ಬಸವರಾಜ ಹವಾಲ್ದಾರ
Published 15 ಮಾರ್ಚ್ 2020, 19:30 IST
Last Updated 15 ಮಾರ್ಚ್ 2020, 19:30 IST
ಅಂತಿಮಗೊಳ್ಳದ ಪಶ್ಚಿಮ ಪದವೀಧರರ ಕ್ಷೇತ್ರ ಅಭ್ಯರ್ಥಿ
ಅಂತಿಮಗೊಳ್ಳದ ಪಶ್ಚಿಮ ಪದವೀಧರರ ಕ್ಷೇತ್ರ ಅಭ್ಯರ್ಥಿ   

ಹುಬ್ಬಳ್ಳಿ: ಜೂನ್‌ ಅಂತ್ಯದೊಳಗೆ ನಡೆಯಬೇಕಿರುವ ಪಶ್ಚಿಮ ಪದವೀಧರರ ಕ್ಷೇತ್ರಕ್ಕೆ ಅಭ್ಯರ್ಥಿ ಬಿಜೆಪಿ ಅಭ್ಯರ್ಥಿಯನ್ನು ಅಂತಿಮಗೊಳಿಸದಿರುವುದು ಬಿಜೆಪಿ ಮುಖಂಡರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಬಹಿರಂಗವಾಗಿ ಹೇಳಿದಿದ್ದರೂ, ಪಕ್ಷದ ಆಂತರಿಕ ವಲಯದಲ್ಲಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಕಾಂಗ್ರೆಸ್‌ ಪಕ್ಷವು ಕುಬೇರಪ್ಪ ಅವರನ್ನು ಅಭ್ಯರ್ಥಿ ಎಂದು ಘೋಷಿಸಿ ನಾಲ್ಕು ತಿಂಗಳುಗಳೇ ಕಳೆದು ಹೋಗಿವೆ. ಜೊತೆಗೆ ಜೆಡಿಎಸ್‌ ಪಕ್ಷವು ಶಿವಶಂಕರ ಕಲ್ಲೂರ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಆದರೆ, ಬಿಜೆಪಿ ಮಾತ್ರ ಇನ್ನೂ ಅಭ್ಯರ್ಥಿ ಅಂತಿಮಗೊಳಿಸಿಲ್ಲ.

ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಘೋಷಿತ ಅಭ್ಯರ್ಥಿಗಳು ಕ್ಷೇತ್ರ ವ್ಯಾಪ್ತಿಯ ಧಾರವಾಡ, ಬೆಳಗಾವಿ, ಹಾವೇರಿ ಹಾಗೂ ಗದಗ ಜಿಲ್ಲೆಗಳಲ್ಲಿ ಸಂಚರಿಸಿ, ಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿ ಆಕಾಂಕ್ಷಿ ಅಭ್ಯರ್ಥಿಗಳು ಮಾತ್ರ ದೆಹಲಿಯತ್ತ ಮುಖ ಮಾಡಿ ಕುಳಿತಿದ್ದಾರೆ.

ADVERTISEMENT

ಹಾಲಿ ಸದಸ್ಯರಾಗಿರುವ ಎಸ್‌.ವಿ. ಸಂಕನೂರ ಅವರು ಮತ್ತೊಮ್ಮೆ ಸ್ಪರ್ಧಿಸಲು ಉತ್ಸುಕರಾಗಿದ್ದಾರೆ. ಪದವೀಧರರನ್ನು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಮೂಲಕ ಚುನಾವಣೆಗೆ ಮತ್ತೊಮ್ಮೆ ಸಿದ್ಧರಾಗುತ್ತಿದ್ದಾರೆ.

2019ರ ಅಕ್ಟೋಬರ್‌ನಲ್ಲಿ ಹುಬ್ಬಳ್ಳಿಯಲ್ಲಿ ನಡೆದಿದ್ದ ಬಿಜೆಪಿಯ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಅಭ್ಯರ್ಥಿಯ ಆಯ್ಕೆಯ ಬಗೆಗೆ ಚರ್ಚೆ ನಡೆಸಲಾಗಿತ್ತು. ಒಂದು ವಾರದಲ್ಲಿ ಅಭ್ಯರ್ಥಿ ಘೋಷಣೆ ಮಾಡಲಾಗುವುದು ಎಂದು ಮುಖಂಡ ಅರವಿಂದ ಲಿಂಬಾವಳಿ ಹೇಳಿದ್ದರು. ಅದಾಗಿ ನಾಲ್ಕು ತಿಂಗಳಾದರೂ ಅಭ್ಯರ್ಥಿಯ ಆಯ್ಕೆಯಾಗಿಲ್ಲ.

ಸಂಕನೂರು ಅಂತಿಮ?: ಪಶ್ಚಿಮ ಪದವೀಧರರ ಕ್ಷೇತ್ರ ಕಳೆದ ಎರಡು ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳೇ ಗೆಲುವು ಸಾಧಿಸಿದ್ದಾರೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಇರುವುದರಿಂದ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿದೆ.

ಈಶಾನ್ಯ ಶಿಕ್ಷಕರ ಕ್ಷೇತ್ರಕ್ಕೆ ಶಶಿಲ್‌ ನಮೋಶಿ, ಪಶ್ಚಿಮ ಪದವೀಧರರ ಕ್ಷೇತ್ರಕ್ಕೆ ಎಸ್‌.ವಿ. ಸಂಕನೂರು ಹೆಸರನ್ನು ರಾಜ್ಯದಿಂದ ಅಂತಿಮಗೊಳಿಸಿ ಕೇಂದ್ರಕ್ಕೆ ಬಿಜೆಪಿ ರಾಜ್ಯ ಮಾಧ್ಯಮ ಸಂಚಾಲಕ ಎ.ಎಚ್‌. ಆನಂದ ಕಳುಹಿಸಿರುವ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಏಕೈಕೆ ಹೆಸರುಗಳನ್ನು ಶಿಫಾರಸು ಮಾಡಿದ್ದರೂ ಕೇಂದ್ರ ಅಭ್ಯರ್ಥಿ ಹೆಸರು ಅಂತಿಮಗೊಳಿಸಿಲ್ಲ. ಇದಕ್ಕೆ ಕಾರಣ ಇದೇ ಜೂನ್‌ ಅಂತ್ಯದೊಳಗೆಆಗ್ನೇಯ ಪದವೀಧರ, ಪಶ್ಚಿಮ ಪದವೀಧರ, ಈಶಾನ್ಯ ಶಿಕ್ಷಕರ ಕ್ಷೇತ್ರ, ಬೆಂಗಳೂರು ಶಿಕ್ಷಕರ ಕ್ಷೇತ್ರಗಳಿಗೂ ಚುನಾವಣೆ ನಡೆಯಲಿದೆ. ಆ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಕಳುಹಿಸಿದ ಮೇಲೆಯೇ ಅಂತಿಮಗೊಳಿಸಲಾಗುವುದು ಎಂದು ಹೈಕಮಾಂಡ್‌ ತಿಳಿಸಿದೆ ಎನ್ನುತ್ತಿವೆ ಬಿಜೆಪಿ ಮೂಲಗಳು.

‘ಕ್ಷೇತ್ರವು ನಾಲ್ಕು ಜಿಲ್ಲೆಗಳ ದೊಡ್ಡದಾದ ವ್ಯಾಪ್ತಿಯನ್ನು ಹೊಂದಿದೆ. ಜೊತೆಗೆ ಪದವೀಧರರು ಮಾತ್ರ ಮತದಾರರಾಗಿರುವುದರಿಂದ ಹರಿದು ಹಂಚಿ ಹೋಗಿದ್ದಾರೆ. ಅವರೆನ್ನೆಲ್ಲ ಭೇಟಿ ಮಾಡಿ ಮತ ಕೇಳುವುದು ಕಷ್ಟವಾಗುತ್ತದೆ. ಈಗಾಗಲೇ ಪ್ರತಿಸ್ಪರ್ಧಿ ಪಕ್ಷಗಳ ಅಭ್ಯರ್ಥಿಗಳು ಪ್ರಚಾರದಲ್ಲಿ ತೊಡಗಿದ್ದಾರೆ. ಯಾರಿಗಾದರೂ ಟಿಕೆಟ್‌ ನೀಡಲಿ. ಕೂಡಲೇ ಹೆಸರು ಘೋಷಿಸಬೇಕು’ ಎಂದು ಟಿಕೆಟ್‌ ಆಕಾಂಕ್ಷಿಯೊಬ್ಬರು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.