ADVERTISEMENT

ಧಾರವಾಡ: ಕೋಟೂರ ಮನೆಗೆ ಕಪಿಸೇನೆ ಮುತ್ತಿಗೆ!

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2020, 7:00 IST
Last Updated 16 ಅಕ್ಟೋಬರ್ 2020, 7:00 IST
ಧಾರವಾಡದ ಯು.ಬಿ.ಹಿಲ್‌ನ ಕೋಟೂರ ಬಿಲ್ಡಿಂಗ್‌ನಲ್ಲಿ ಗ್ರಿಲ್ಸ್‌ಗಳ ನಡುವೆ ಕಾಲುಗಳ ಇಳಿಬಿಟ್ಟು ಕೂತಿರುವ ಮಂಗಗಳು.
ಧಾರವಾಡದ ಯು.ಬಿ.ಹಿಲ್‌ನ ಕೋಟೂರ ಬಿಲ್ಡಿಂಗ್‌ನಲ್ಲಿ ಗ್ರಿಲ್ಸ್‌ಗಳ ನಡುವೆ ಕಾಲುಗಳ ಇಳಿಬಿಟ್ಟು ಕೂತಿರುವ ಮಂಗಗಳು.   

ಹುಬ್ಬಳ್ಳಿ: ಮನೆ ಹತ್ತಿರ ಒಂದೋ ಎರಡೊ ಮಂಗಗಳು ಬಂದು ಮನೆ ಮಾಡಿನ ಮೇಲೋ, ಟೆರೆಸ್‌ ಮೇಲೋ ಕೂತರೆ ಅವು ಎದ್ದು ಹೋಗೋ ವರೆಗೂ ಮನೆಯ ಮಂದಿಗೆ ಆತಂಕ ಮನೆ ಮಾಡುವುದು ಸಹಜ. ಆದರೆ ಧಾರವಾಡದ ಯು.ಬಿ. ಹಿಲ್ ಪ್ರದೇಶದ ಮನೆಯೊಂದಕ್ಕೆ ಕಪಿಗಳ ಸೈನ್ಯ ವಾರದಲ್ಲಿ ಮೂರು ಬಾರಿಯಾದರೂ ಮುತ್ತಿಗೆ ಹಾಕಲಿದೆ. ಸುಮಾರು 50ರಷ್ಟು ಸಂಖ್ಯೆಯಲ್ಲಿ ದಾಂಗುಡಿ ಇಡುವ ಮಂಗಗಳ ನೋಡಿದರೆ ಆ ಮನೆಮಂದಿಗೆ ಯಾವುದೇ ಭಯವಿಲ್ಲ. ಕಾರಣ ಈ ಮಂಗಗಳ ಜೊತೆ ಬಹುಕಾಲದಿಂದ ಬಂದಿರುವ ಅವಿನಾಭಾವದ ಒಡನಾಟದ ನಂಟು.

ಯು.ಬಿ. ಹಿಲ್ 6ನೇ ಕ್ರಾಸ್‌ನಲ್ಲಿರುವ ಕೋಟೂರ ಬಿಲ್ಡಿಂಗ್‌ ಅಂದರೆ ಮಂಗಗಳಿಗೆಲ್ಲ ಅಚ್ಚುಮೆಚ್ಚು. ಕಾರಣವೆನೆಂದರೆ ಅವರ ಮನೆ ಸುತ್ತ ಮುತ್ತ ಇರುವ ಚಿಕ್ಕು, ಪೇರಲ, ಸೀತಾಫಲ, ಮಾವಿನ ಮರಗಳ ತೋಪು. ಶತಮಾನದಿಂದಲೂ ಈ ಹಣ್ಣಿನ ತೋಪಿಗೆ ಮಂಗಗಳು ಬಂದು ಚೆನ್ನಾಗಿ ತಿಂದುಂಡು ಹೋಗುತ್ತಿವೆ ಎಂದು ಮನೆಯ ಮಂದಿ ಹೇಳುತ್ತಾರೆ.

‘ವಾರದಲ್ಲಿ ಕನಿಷ್ಠ ಮೂರು ಬಾರಿ ಬೆಳಿಗ್ಗೆ ಬಂದು, ಸಂಜೆವರೆಗೂ ತೋಟದಲ್ಲಿ ಸಿಗುವ ಹಣ್ಣು, ಎಲೆಗಳನ್ನು ತಿಂದುಂಡು ಹೋಗಲಿವೆ. ಮನೆಯಲ್ಲಿ ಯಾರಾದರೂ ಓಡಿಸಿದರಷ್ಟೇ ಅಲ್ಲಿಂದ ಕಾಲ್ಕಿಳಲಿವೆ. ಇಲ್ಲವಾದಲ್ಲಿ ಮನೆಗೂ ಬಂದು, ಮನೆ ಮುಂದಿರುವ ಬಾವಿ ಕಟ್ಟೆಯನ್ನೇರುತ್ತವೆ. ಮನೆ ಮುಂದೆ ಅಳವಡಿಸಿ ಕಬ್ಬಿಣದ ಗ್ರಿಲ್ಸ್‌ಗಳಲ್ಲಿ ಕಾಲುಗಳನ್ನು ಇಳಿಬಿಟ್ಟು ಕೂರುತ್ತವೆ. ಆ ವೇಳೆ ಮನೆಯ ಜನರು ಬಿಸ್ಕಿಟ್‌, ಬ್ರೆಡ್‌, ಬನ್‌ ಕೊಟ್ಟರೆ ಕೈ ಚಾಚಿ ತೆಗೆದುಕೊಳ್ಳುತ್ತವೆ. ಬಾವಿ ಹತ್ತಿರ ಕೊಡಗಳಲ್ಲಿ ಸೇದಿಡುವ ನೀರನ್ನು ಕುಡಿದು ದಾಹ ಇಂಗಿಸಿಕೊಳ್ಳಲಿವೆ.

ADVERTISEMENT

ಕೊಡಗಳಲ್ಲಿ ನೀರು ಇಲ್ಲದಿದ್ದರೆ ಮನೆ ಹಿಂದಿನ ನಳಗಳ ಟ್ಯಾಪ್‌ ತಿರುಗಿಸಿ ನೀರು ಕುಡಿದು ಹೋಗಲಿವೆ. ಈ ಒಂದು ರಿವಾಜು ಹಿಂದಿನಿಂದಲೂ ನಡೆದು ಬಂದಿದ್ದು, ಈವರೆಗೂ ಯಾರಿಗೂ ಯಾವುದೇ ರೀತಿಯಲ್ಲಿ ತೊಂದರೆಯನ್ನುಂಟು ಮಾಡಿಲ್ಲ. ಒಮ್ಮೆ ಮಾತ್ರ ಮನೆಯ ಹಂಚನ್ನು ಕಿತ್ತು ಬೀಸಾಡಿದ್ದವು. ನಾವೆಲ್ಲ ಚಿಕ್ಕಂದಿನಿಂದಲೂ ಅವುಗಳನ್ನು ನೋಡುತ್ತ ಬೆಳೆದಿರುವುದರಿಂದ ಮಂಗಗಳ ಬಗ್ಗೆ ಭಯವೂ ಆಗದು’ ಎಂದು ಮನೆಯ ಮಗಳು ಕೀರ್ತಿ ಕೋಟೂರ ಹೇಳುತ್ತಾರೆ.

ಮನೆಯ ಜನರೂ ಕೂಡ ಮಂಗಗಳ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದು, ಅವುಗಳು ಬಂದಾಗ ಪ್ರೀತಿಯಿಂದ ತಿಂಡಿಗಳನ್ನು ಕೊಟ್ಟು ಕಳುಹಿಸುತ್ತಾರೆ. ಕುಡಿಯಲು ಕೊಡಗಳಲ್ಲಿ ನೀರು ತುಂಬಿಡುತ್ತಾರೆ. ಮಂಗಗಳು ಅವುಗಳ ಪಾಡಿಗೆ ಬಂದು ಹೋಗುತ್ತಿವೆ. ಕೋಟೂರ ಮನೆ ಹಾಗೂ ಮಂಗಗಳ ಇಂಥ ಆತ್ಮೀಯ ಒಡನಾಟ ಇಂದು ನಿನ್ನೆಯದಲ್ಲ; ಅವರ ಮನೆಯ ಸುತ್ತಲಿನ ಹಣ್ಣುಗಳ ತೋಟಕ್ಕೆ ಆದಷ್ಟೇ ವರ್ಷಗಳಾಗಿವೆ. ಅಂದರೆ ಶತಮಾನಕ್ಕೆ ಹತ್ತಿರದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.